ಸಾರಾಂಶ
ಲಕ್ಷ್ಮೇಶ್ವರ: ಅತಿವೃಷ್ಟಿಯಿಂದ ರೈತರು ಮುಂಗಾರು ಹಂಗಾಮಿನ ಹೆಸರು, ಈರುಳ್ಳಿ, ಶೇಂಗಾ ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾರೆ. ಈ ವೇಳೆ ಬ್ಯಾಂಕ್ ಅಧಿಕಾರಿಗಳು ಸಾಲ ಮರುಪಾವತಿ ಮಾಡುವಂತೆ ರೈತರಿಗೆ ನೋಟಿಸ್ ನೀಡುತ್ತಿದ್ದು, ಜಿಲ್ಲಾಧಿಕಾರಿಗಳು ಸಂಬಂಧಿಸಿದ ಬ್ಯಾಂಕ್ ಅಧಿಕಾರಿಗಳಿಗೆ ಸಾಲ ಮರುಪಾವತಿಗೆ ಒತ್ತಾಯಿಸಬಾರದೆಂದು ತಾಲೂಕು ಕಿಸಾನ್ ಜಾಗೃತಿ ಸಂಘದ ಅಧ್ಯಕ್ಷ ಟಾಕಪ್ಪ ಸಾತಪೂತೆ ಅವರು ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿದರು.ಸೋಮವಾರ ಪಟ್ಟಣದ ತಹಸೀಲ್ದಾರ್ ಕಚೇರಿಗೆ ಆಗಮಿಸಿ ತಹಸೀಲ್ದಾರ್ ಧನಂಜಯ ಎಂ. ಅವರಿಗೆ ಮನವಿ ಪತ್ರ ನೀಡಿ ಮಾತನಾಡಿದರು.ಅತಿವೃಷ್ಟಿಯಿಂದ ರೈತರು ಬೆಳೆದ ಬೆಳೆಗಳು ಹಾಳಾಗಿವೆ. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬೆಳೆಗಳು ಕೈಗೆ ಬಾರದೆ ರೈತರು ಪರಿತಪಿಸುವಂತಾಗಿದೆ. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಹೆಸರು, ಶೇಂಗಾ, ಈರುಳ್ಳಿ, ಗೋವಿನಜೋಳ, ಮೆಣಸಿನಕಾಯಿ ಬೆಳೆಗಳು ನಾಶವಾಗಿವೆ. ರೈತರು ಖರ್ಚು ಮಾಡಿದ ಹಣವು ಕೂಡ ವಾಪಸ್ ಬಾರದಂತಾಗಿದೆ.
ಈ ವೇಳೆ ಬ್ಯಾಂಕ್ ಅಧಿಕಾರಿಗಳು ಸಾಲ ಮರುಪಾವತಿ ಮಾಡುವಂತೆ ರೈತರಿಗೆ ನೋಟೀಸ್ ನೀಡುವ ಮೂಲಕ ಒತ್ತಾಯಿಸುವುದು ಸರಿಯಲ್ಲ. ಇದರಿಂದ ರೈತರು ಮಾನಸಿಕ ಆಘಾತಕ್ಕೆ ಒಳಗಾಗಿ ಆತ್ಮಹತ್ಯೆ ದಾರಿ ಹಿಡಿಯುವಂತಾಗಿದೆ. ಆದ್ದರಿಂದ ಬ್ಯಾಂಕ್ ಅಧಿಕಾರಿಗಳು ರೈತರಿಗೆ ನೋಟಿಸ್ ನೀಡದಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚನೆ ನೀಡಿ ರೈತರ ಹಿತ ಕಾಪಾಡುವ ಕಾರ್ಯ ಮಾಡಬೇಕು. ಇಲ್ಲವಾದಲ್ಲಿ ಬ್ಯಾಂಕ್ ಶಾಖೆಯ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದರು.ಈ ವೇಳೆ ಕಿಸಾನ್ ಜಾಗೃತಿ ಸಂಘದ ನಾಗರಾಜ ಪಾಟೀಲ, ಫಕ್ಕಿರೇಶ ಶಿವಬಸಣ್ಣವರ, ಬಸನಗೌಡ ಕೊರಡೂರ, ಶಂಕರಗೌಡ ಪಾಟೀಲ, ಸದಾನಂದ ಫೂಜಾರ, ಮಹಾದೇವಪ್ಪ ಕೋಡಿಹಳ್ಳಿ, ಬಸವರಾಜ ಬೆಂತೂರ, ಮಹಾಂತೇಶ ಶ್ಯಾಗೋಟಿ ಅನೇಕರು ಇದ್ದರು.ಗುಣಮಟ್ಟದ ಬಿತ್ತನೆ ಬೀಜದಿಂದ ಹೆಚ್ಚಿನ ಇಳುವರಿ
ಲಕ್ಷ್ಮೇಶ್ವರ: ಪ್ರಸಕ್ತ ವರ್ಷದ ಹಿಂಗಾರು ಬಿತ್ತನೆಗಾಗಿ ಕೃಷಿ ಇಲಾಖೆಯಿಂದ ಬಂದಿರುವ ರಿಯಾಯ್ತಿ ದರದ ಕಡಲೆ ಬಿತ್ತನೆ ಬೀಜವನ್ನು ಸೋಮವಾರ ಶಾಸಕ ಡಾ. ಚಂದ್ರು ಲಮಾಣಿ ರೈತರಿಗೆ ವಿತರಿಸಿದರು.ಈ ವೇಳೆ ಮಾತನಾಡಿದ ಅವರು, ಈ ವರ್ಷದ ಅತಿವೃಷ್ಟಿಗೆ ಮುಂಗಾರು ಹಂಗಾಮಿನ ಹೆಸರು, ಈರುಳ್ಳಿ, ಬೆಳ್ಳುಳ್ಳಿ, ಮೆಣಸಿನಕಾಯಿ ಬೆಳೆಗಳು ಹಾಳಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಹಿಂಗಾರು ಬೆಳೆಗಳಾದರೂ ಚೆನ್ನಾಗಿ ಬರುತ್ತವೆ ಎಂಬ ಆಸೆಯಿಂದ ರೈತರು ಇದೀಗ ಹಿಂಗಾರು ಹಂಗಾಮಿನ ಕಡಲೆ, ಬಿಳಿಜೋಳ, ಗೋದಿ, ಕುಸುಬಿ ಬಿತ್ತನೆಗೆ ಮುಂದಾಗಿದ್ದಾರೆ ಎಂದರು.ಮುಂಗಾರು ಬೆಳೆ ಕಳೆದುಕೊಂಡು ಪರಿತಪಿಸುತ್ತಿರುವ ರೈತರಿಗೆ ಸರ್ಕಾರ ಆದಷ್ಟು ಬೇಗನೇ ಬೆಳೆಹಾನಿ ಮತ್ತು ಬೆಳೆವಿಮೆ ಪರಿಹಾರ ಕೊಟ್ಟು ರೈತರ ಹಿತ ಕಾಪಾಡಬೇಕು ಎಂದರು.ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರೇವಣೆಪ್ಪ ಮನಗೂಳಿ ಮಾತನಾಡಿ, ರಿಯಾಯ್ತಿ ದರದಲ್ಲಿ ರೈತರಿಗೆ ವಿತರಿಸಲು ಸಧ್ಯ ೬೪೯ ಕ್ವಿಂಟಲ್ ಕಡಲೆ ಮತ್ತು ೧೯.೮೦ ಕ್ವಿಂಟಲ್ ಬಿಳಿಜೋಳದ ಬಿತ್ತನೆ ಬೀಜಗಳ ದಾಸ್ತಾನು ಇದೆ. ರೈತರು ಅಗತ್ಯ ದಾಖಲೆಗಳನ್ನು ಸಲ್ಲಿಸುವುದರ ಮೂಲಕ ಬೀಜ ತೆಗೆದುಕೊಂಡು ಹೋಗಬೇಕು ಎಂದರು.ಈ ಸಂದರ್ಭದಲ್ಲಿ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಚಂದ್ರಶೇಖರ ನರಸಮ್ಮನವರ, ಬಸಣ್ಣ ಹಂಜಿ, ವಿ.ಜಿ. ಪಡಿಗೇರಿ, ನಿಂಗಪ್ಪ ಬನ್ನಿ, ಅಶೋಕ ನೀರಾಲೋಟಿ, ರಮೇಶ ಉಪನಾಳ, ಪಿ.ಕೆ. ಹೊನ್ನಪ್ಪನವರ ಸೇರಿದಂತೆ ಮತ್ತಿತರರು ಇದ್ದರು.