ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯದ ಪ್ರಥಮ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಹೆಗ್ಗಳಿಕೆಯ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ "ಶೇ.50 ಪೇಮೆಂಟ್ ಸೀಟುಗಳನ್ನು ರದ್ದುಪಡಿಸಿ, ಯುಬಿಡಿಟಿ ಉಳಿಸಿ, ಸೀಟು ಮಾರಾಟ ನಿಲ್ಲಿಸಿ " ಎಂಬ ಘೋಷಣೆಯೊಂದಿಗೆ ಅ.16ರಂದು ದಾವಣಗೆರೆ ಬಂದ್‌ಗೆ ಎಐಡಿಎಸ್‌ಒ ಸಂಘಟನೆ, ಯುಬಿಡಿಟಿ ವಿದ್ಯಾರ್ಥಿ ಹೋರಾಟ ಸಮಿತಿ ಕರೆ ನೀಡಿವೆ.ನಗರಾದ್ಯಂತ ಜನವಸತಿ, ಮಾರುಕಟ್ಟೆ, ವಾಣಿಜ್ಯ ಪ್ರದೇಶ, ಪ್ರಮುಖ ವೃತ್ತ, ರಸ್ತೆಗಳಲ್ಲಿ ಉಭಯ ಸಂಘಟನೆಗಳ ನೇತೃತ್ವದಲ್ಲಿ "ಯುಬಿಡಿಟಿ ಉಳಿಸಿ, ಸೀಟು ಮಾರಾಟ ನಿಲ್ಲಿಸಿ " ಎಂಬ ಘೋಷಣೆಗಳ ಕರಪತ್ರಗಳನ್ನು ಗೋಡೆಗಳ ಮೇಲೆ ಅಂಟಿಸಲಾಗುತ್ತಿದ್ದು, ಆ ಮೂಲಕ ದಾವಣಗೆರೆ ಬಂದ್‌ಗೆ ಸಹಕರಿಸುವಂತೆ ಮನವಿ ಮಾಡಿದರು.
ಸಂಘಟನೆ ಮುಖಂಡರು ಮಾತನಾಡಿ, ದಾವಣಗೆರೆ ಯುಬಿಡಿಟಿ ಕಾಲೇಜಿನಲ್ಲಿ ಶೇ.50 ಪೇಮೆಂಟ್ ಸೀಟು ನೀಡಲು ಮುಂದಾಗಿದ್ದನ್ನು ವಿರೋಧಿಸಿ ನಿರಂತರ ಹೋರಾಟ ನಡೆಸುತ್ತಿದ್ದೇವೆ. ಕಳೆದ ಒಂದೂವರೆ ತಿಂಗಳಿನಿಂದಲೂ ಯುಬಿಡಿಟಿ ಉಳಿಸಿ, ವಿದ್ಯಾರ್ಥಿ ಚಳವಳಿ ನಡೆಸಲಾಗುತ್ತಿದೆ. ರಾಜ್ಯ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಸಿಗದ ಹಿನ್ನೆಲೆ ಈಗ ಹೋರಾಟಕ್ಕೆ ತೀವ್ರತೆ ನೀಡುತ್ತಿದ್ದೇವೆ ಎಂದರು.ಕಾಲೇಜಿನ ಉಳಿವಿಗಾಗಿ ಹೋರಾಟದ ಮುಂದುವರಿದ ಭಾಗವಾಗಿ ಅ.16ರಂದು ಕರೆ ನೀಡಿರುವ ದಾವಣಗೆರೆ ಬಂದ್‌ಗೆ ಸಾರ್ವಜನಿಕರು, ವ್ಯಾಪಾರಸ್ಥರು, ಸಂಘ-ಸಂಸ್ಥೆಗಳು, ಸಂಘಟನೆಗಳು, ವ್ಯಾಪಾರಸ್ಥರ, ಉದ್ಯಮಿಗಳು, ಕಚೇರಿ, ಕೈಗಾರಿಕೆಗಳು, ಹಣಕಾಸು ಸಂಸ್ಥೆಗಳು ಸೇರಿದಂತೆ ಎಲ್ಲರೂ ಕೈ ಜೋಡಿಸಬೇಕು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹೋರಾಟ ನಡೆಯುತ್ತಿದೆ ಎಂದು ಅವರು ತಿಳಿಸಿದರು. ಎಂಜಿನಿಯರಿಂಗ್ ಶಿಕ್ಷಣವನ್ನು ಬಡವರಿಂದ ಕಿತ್ತುಕೊಳ್ಳುತ್ತಿರುವ ರಾಜ್ಯ ಸರ್ಕಾರದ ವ್ಯಾಪಾರಿ ಧೋರಣೆ ಬಗ್ಗೆ ತಾವು ಹೋದಲ್ಲೆಲ್ಲಾ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಎಲ್ಲ ಜನರಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ರೈತ ಸಂಘಟನೆಗಳು, ದಲಿತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ವ್ಯಾಪಾರಸ್ಥರು, ಆಟೋ, ಲಾರಿ, ಬಸ್ ಸೇರಿದಂತೆ ವಿವಿಧ ಸಾರಿಗೆ ಸಂಘಟನೆಗಳು, ಬೋಧಕ-ಬೋಧಕೇತರ ಸಂಘಟನೆಗಳು, ವೈದ್ಯರು, ಶೈಕ್ಷಣಿಕ ಸಂಘಟನೆಗಳು, ಕಾರ್ಮಿಕರು, ಮಹಿಳಾ, ಯುವಜನರ ಸಂಘಟನೆ ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿವೆ ಎಂದು ಮುಖಂಡರು ಹೇಳಿದರು.
ರಾಜ್ಯದ ಹೆಮ್ಮೆಯಾದ ದಾವಣಗೆರೆ ಯುಬಿಡಿಟಿ ಕಾಲೇಜನ್ನು ಉಳಿಸಲು ನಡೆಸುತ್ತಿರುವ ಬಂದ್‌ನ್ನು ಯಶಸ್ವಿಗೊಳಿಸಲು ತಯಾರಿ ನಡೆಸಿದ್ದೇವೆ. ಈಗಾಗಲೇ ವಿವಿಧ ಸಂಘಟನೆಗಳ ಮುಖಂಡರನ್ನು ಒಳಗೊಂಡಂತೆ ಪೂರ್ವಸಿದ್ಧತಾ ಸಭೆ ನಡೆಸಲಾಗುತಚ್ತಿದೆ. ಮಾರುಕಟ್ಟೆ, ಬಸ್ ನಿಲ್ದಾಣ, ಜನದಟ್ಟಣೆಯ ವೃತ್ತ, ರಸ್ತೆ, ಜನವಸತಿ ಪ್ರದೇಶಗಳಲ್ಲಿ ಹೀಗೆ ಎಲ್ಲ ಕಡೆಗೂ ಪ್ರಚಾರ ಜಾಥಾ ಕೈಗೊಂಡಿದ್ದು, ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ತಿಳಿಸಿದರು.ಈ ವೇಳೆ ಎಐಡಿಎಸ್‌ಒ ಜಿಲ್ಲಾಧ್ಯಕ್ಷರಾದ ಪೂಜಾ ನಂದಿಹಳ್ಳಿ, ಜಿಲ್ಲಾ ಕಾರ್ಯದರ್ಶಿ ಟಿ.ಎಸ್.ಸುಮನ್, ಯುಬಿಡಿಟಿ ಉಳಿಸಿ ಹೋರಾಟ ಸಮಿತಿಯ ಅಭಿಷೇಕ್, ಆದರ್ಶನ್, ರೋಹಿತ್, ಗೌತಮ್, ಶಿವಕುಮಾರ, ಉಭಯ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.
ನಗರದ ಮುಖ್ಯ ಬೀದಿಗಳಾದ ಹದಡಿ ರಸ್ತೆ, ಪಿ.ಬಿ. ರಸ್ತೆ, ಸರ್ಕಾರಿ, ಖಾಸಗಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮುಖ್ಯ ವೃತ್ತ, ಮಾರುಕಟ್ಟೆ, ಶಿಕ್ಷಣ ಸಂಸ್ಥೆಗಳು, ಆಟೋ, ಲಾರಿ ಸೇರಿದಂತೆ ವಿವಿಧೆಡೆ ಭಿತ್ತಿಪತ್ರ ಅಂಟಿಸಿ, ಬಂದ್ ಆಚರಣೆ ಬಗ್ಗೆ ಪ್ರಚಾರ ಮಾಡಲಾಯಿತು.