ಕಂಪ್ಲಿ ಸೇತುವೆ ಮೇಲೆ ಬಸ್ ಸಂಚಾರಕ್ಕೆ ಅನುವು ಕಲ್ಪಿಸುವಂತೆ ಮನವಿ

| Published : Aug 02 2025, 12:00 AM IST

ಕಂಪ್ಲಿ ಸೇತುವೆ ಮೇಲೆ ಬಸ್ ಸಂಚಾರಕ್ಕೆ ಅನುವು ಕಲ್ಪಿಸುವಂತೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ತುಂಗಭದ್ರಾ ಜಲಾಶಯದಿಂದ ನದಿಗೆ ಹರಿಬಿಡುವ ನೀರಿನ ಪ್ರಮಾಣ ಇಳಿಕೆಯಾಗಿದ್ದು, ಪ್ರವಾಹ ಕಡಿಮೆಯಾಗಿದೆ. ಆದ ಕಾರಣ ಇಲ್ಲಿನ ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ಮೇಲೆ ಬಸ್ ಸಂಚಾರಕ್ಕೆ ಅನುವು ಕಲ್ಪಿಸುವಂತೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಕಂಪ್ಲಿ: ತುಂಗಭದ್ರಾ ಜಲಾಶಯದಿಂದ ನದಿಗೆ ಹರಿಬಿಡುವ ನೀರಿನ ಪ್ರಮಾಣ ಇಳಿಕೆಯಾಗಿದ್ದು, ಪ್ರವಾಹ ಕಡಿಮೆಯಾಗಿದೆ. ಆದ ಕಾರಣ ಇಲ್ಲಿನ ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ಮೇಲೆ ಬಸ್ ಸಂಚಾರಕ್ಕೆ ಅನುವು ಕಲ್ಪಿಸುವಂತೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ತುಂಗಾ, ಭದ್ರಾ, ವರದಾ ನದಿಗಳು ಉಕ್ಕಿ ಹರಿಯುತ್ತಿದ್ದು, ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗಲಾರಂಭಿಸಿತು. ಇದರಿಂದಾಗಿ ಜು. 26ರಿಂದ ಜಲಾಶಯದಿಂದ ನದಿಗೆ 1 ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದಲ್ಲಿ ನೀರು ಹರಿ ಬಿಡಲಾಯಿತು. ಕಂಪ್ಲಿ ಗಂಗಾವತಿ ಸಂಪರ್ಕ ಸೇತುವೆ ಮುಳುಗಡೆಗೊಂಡು ಸಂಚಾರ ಸ್ಥಗಿತಗೊಂಡಿತ್ತು. ಇದರಿಂದಾಗಿ ಕಳೆದ 3-4 ದಿನಗಳಿಂದ ಸೇತುವೆ ಮೇಲಿನ ಸಂಚಾರ ಸ್ಥಗಿತಗೊಂಡು ಜನರು ಪರದಾಡುವ ಪರಿಸ್ಥಿತಿ ಉಲ್ಬಣವಾಗಿತ್ತು. ಜು. 30ರಂದು ಜಲಾಶಯದಿಂದ ನದಿಗೆ ಹರಿಬಿಡುವ ನೀರಿನ ಪ್ರಮಾಣದಲ್ಲಿ ಇಳಿಕೆ ಕಂಡ ಕಾರಣ, ಕಂಪ್ಲಿ ಗಂಗಾವತಿ ಸಂಪರ್ಕ ಸೇತುವೆ ಜಲಬಂಧನದಿಂದ ಮುಕ್ತಿಗೊಂಡು ಪ್ರವಾಹ ಇಳಿಮುಖ ಕಂಡಿತು. ಇದರಿಂದ ಬುಧವಾರ ಮಧ್ಯಾಹ್ನದಿಂದ ಸೇತುವೆ ಮೇಲೆ ಪಾದಚಾರಿ, ದ್ವಿಚಕ್ರ ಹಾಗೂ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅನುವು ಕಲ್ಪಿಸಿ ಕೊಡಲಾಯಿತು. ಕಡೆ ಬಾಗಿಲು ಸೇತುವೆ ಮಾರ್ಗವಾಗಿ ಗಂಗಾವತಿ ತೆರಳಲು ಸಮರ್ಪಕ ಬಸ್ ವ್ಯವಸ್ಥೆ ಇಲ್ಲದ ಕಾರಣ ಬಸ್ ಪಾಸ್ ಇದ್ದರೂ ವಿದ್ಯಾರ್ಥಿಗಳು ಅನಿವಾರ್ಯವಾಗಿ ಆಟೋಗಳಿಗೆ ಹಣ ತೆತ್ತು ಓಡಾಟ ನಡೆಸಬೇಕಿದೆ. ಸೇತುವೆ ನೀರಿನಿಂದ ಮುಕ್ತಗೊಂಡು ಎರಡು ದಿನಗಳಾಗಿದ್ದು, ಬಸ್‌ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಸೋಮವಾರದಿಂದ ಬಸ್ ಸಂಚಾರ: ಪ್ರವಾಹದಿಂದಾಗಿ ಸೇತುವೆ ಮೇಲಿನ ಕಂಬಿಗಳು ಮುರಿದು ಹೋಗಿದ್ದು, ಅಲ್ಲಲ್ಲಿ ಕೆಲವು ಕಂಬಿಗಳು ಬಿರುಕು ಬಿಟ್ಟಿವೆ. ಸೇತುವೆ ಮೇಲಿನ ಸಣ್ಣ ಪುಟ್ಟ ಕೆಲಸಗಳಿದ್ದು, ಅವುಗಳನ್ನು ದುರಸ್ತಿಗೊಳಿಸಲು ಎರಡು ದಿನಗಳ ಸಮಯ ಬೇಕಾಗುತ್ತದೆ. ಹೀಗಾಗಿ ಈ ಎಲ್ಲ ದುರಸ್ತಿ ಕಾರ್ಯಗಳನ್ನು ಸಂಪೂರ್ಣಗೊಳಿಸಿ ಸೋಮವಾರದಿಂದ ಸೇತುವೆ ಮೇಲೆ ಬಸ್ಸುಗಳ ಸಂಚಾರಕ್ಕೆ ಅನುಮತಿ ಕಲ್ಪಿಸಲಾಗುವುದು ಎಂದು ಗಂಗಾವತಿ ಪಿಡಬ್ಲ್ಯೂಡಿ ಎಇಇ ಜೆ. ವಿಶ್ವನಾಥ ತಿಳಿಸಿದ್ದಾರೆ.