ಸಾರಾಂಶ
ಮೈಸೂರಿನಿಂದ ಕುಶಾಲನಗರಕ್ಕೆ ರೈಲು ಸಂಪರ್ಕ ಕಲ್ಪಿಸುವ ಬಗ್ಗೆ ನಿಯೋಗದ ಮೂಲಕ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ಆರ್ ಕೆ. ನಾಗೇಂದ್ರ ಬಾಬು, ಎಂ. ಡಿ ಕೃಷ್ಣಪ್ಪ ಉಪಸ್ಥಿತರಿದ್ದರು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಮೈಸೂರಿನಿಂದ ಕುಶಾಲನಗರಕ್ಕೆ ರೈಲು ಸಂಪರ್ಕ ಕಲ್ಪಿಸುವ ಬಗ್ಗೆ ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಒಡೆಯರ್ ಅವರಿಗೆ ಕುಶಾಲನಗರದಿಂದ ತೆರಳಿದ ನಿಯೋಗದ ಮೂಲಕ ಮನವಿ ಸಲ್ಲಿಸಲಾಯಿತು.ಪ್ರಮುಖರಾದ ಆರ್ ಕೆ ನಾಗೇಂದ್ರ ಬಾಬು, ಎಂ ಡಿ ಕೃಷ್ಣಪ್ಪ, ಕುಶಾಲನಗರ ಪಟ್ಟಣ ಪಂಚಾಯಿತಿ ಸದಸ್ಯರಾದ ಆನಂದ್ ಕುಮಾರ್ ಮತ್ತಿತರರು ಒಡೆಯರ್ ಅವರನ್ನು ಭೇಟಿ ಮಾಡಿ ಈಗಾಗಲೇ ಮೈಸೂರು ಕುಶಾಲನಗರ ರೈಲ್ವೆ ಸರ್ವೇ ಕಾರ್ಯ ಮುಗಿದಿದ್ದು ಈ ಯೋಜನೆಯನ್ನು ತಕ್ಷಣ ಪೂರ್ಣಗೊಳಿಸಬೇಕು. ಮೈಸೂರು ಜಿಲ್ಲೆಯ ಹಾರ್ನಳ್ಳಿ ಹೋಬಳಿಯ ಕೊಪ್ಪ ಗ್ರಾಮದ ಗಿರುಗೂರು ಬಳಿ ರೈಲ್ವೆ ನಿಲ್ದಾಣ ಮಾಡಲು ಸ್ಥಳ ಗುರುತಿಸಲಾಗಿದ್ದು ಕೆಲವು ಕಾರಣಗಳಿಂದ ಇದನ್ನು ಆವರ್ತಿ ಬಳಿ ಸ್ಥಳಾಂತರಿಸಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಆವರ್ತಿ ಮಾರ್ಗವಾಗಿ ಮುತ್ತಿನ ಮುಳ್ಳುಸೋಗೆ ಗ್ರಾಮದಲ್ಲಿ ರೈಲ್ವೆ ನಿಲ್ದಾಣ ಮಾಡಿದಲ್ಲಿ ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ಕೂಡಿಗೆ ಏರ್ ಸ್ಲಿಪ್ ಮತ್ತು ರಾಜ್ಯ ಹೆದ್ದಾರಿ 91ಕ್ಕೆ ಸಮೀಪವಾಗುತ್ತದೆ. ಈ ಯೋಜನೆ ಮೂಲಕ ಸಮೀಪದ ಹಾಸನ ಜಿಲ್ಲೆಯ ಮಾರ್ಗದ ಯೋಜನೆಗೆ ಕೂಡ ಸಂಪರ್ಕ ದೊರೆತು ಸರ್ಕಾರದ ಬೊಕ್ಕಸಕ್ಕೆ ಲಾಭವಾಗಲಿದೆ ಎಂದು ತಿಳಿಸಿದ್ದಾರೆ.ಮುತ್ತಿನ ಮಳ್ಳುಸೋಗೆ ಮತ್ತು ಕುಶಾಲನಗರ ನಡುವೆ ಕೈಗಾರಿಕಾ ಬಡಾವಣೆ ಬಳಿ ಸೇತುವೆ ಸಂಪರ್ಕ ಯೋಜನೆ ಪ್ರಸ್ತಾವನೆ ಇದ್ದು ಇದರಿಂದ ಕುಶಾಲನಗರ ಕೈಗಾರಿಕಾ ಬಡಾವಣೆ ಮೂಲಕ ಕಾಫಿ ಉತ್ಪಾದನೆಯ ಸಾಗಾಟಕ್ಕೆ ಕೂಡ ಅನುಕೂಲವಾಗಲಿದೆ.
ತಕ್ಷಣ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಹಾಗೂ ನಿಲ್ದಾಣವನ್ನು ಗಿರಗೂರಿನಿಂದ ಮುತ್ತಿನ ಮುಳ್ಳು ಸೋಗೆಗೆ ಸ್ಥಳಾಂತರಿಸಿ ಯೋಜನೆ ರೂಪಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.