ತಾಲೂಕಿನ ಮಾಗೋಡು ಕಾಲನಿಯನ್ನು ವಿಶೇಷ ಕೈಗಾರಿಕಾ ಪ್ರದೇಶ ಅಥವಾ ವಿಶೇಷ ಆರ್ಥಿಕ ವಲಯ ಎಂದು ಘೋಷಿಸಬೇಕೆಂದು ಆಗ್ರಹಿಸಿ ಹೋರಾಟಗಾರ ಅನಂತಮೂರ್ತಿ ಹೆಗಡೆ ನೇತೃತ್ವದ ನಿಯೋಗ ಬೆಳಗಾವಿಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಕನ್ನಡಪ್ರಭ ವಾರ್ತೆ ಯಲ್ಲಾಪುರ
ತಾಲೂಕಿನ ಮಾಗೋಡು ಕಾಲನಿಯನ್ನು ವಿಶೇಷ ಕೈಗಾರಿಕಾ ಪ್ರದೇಶ ಅಥವಾ ವಿಶೇಷ ಆರ್ಥಿಕ ವಲಯ ಎಂದು ಘೋಷಿಸಬೇಕೆಂದು ಆಗ್ರಹಿಸಿ ಹೋರಾಟಗಾರ ಅನಂತಮೂರ್ತಿ ಹೆಗಡೆ ನೇತೃತ್ವದ ನಿಯೋಗ ಬೆಳಗಾವಿಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವು ದೊಡ್ಡ ಯೋಜನೆಗಳಿಗಾಗಿ ತ್ಯಾಗ ಮಾಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಜಿಲ್ಲೆಯ ಜನರ ಹಾಗೂ ಜನಪ್ರತಿನಿಧಿಗಳ ಬೇಡಿಕೆ, ಮನವಿ, ಹೋರಾಟ, ಪ್ರತಿಭಟನೆಗಳಿಗೆ ಸಬೂಬು ಹೇಳಿಯೋ, ನಂಬಿಸುವ ಮಾತುಗಳನ್ನಾಡಿಯೋ ವಂಚಿಸುತ್ತ ಬಂದಿವೆ. ಇದರಿಂದ ಪ್ರತಿಭಾನ್ವಿತ ಯುವ ಜನಾಂಗವು ಉದ್ಯೋಗ ಅರಸಿ ದೇಶದ ವಿವಿಧ ಭಾಗಗಳಿಗೆ, ಪಾಶ್ಚಾತ್ಯ ದೇಶಗಳಿಗೆ ವಲಸೆ ಹೋಗಿದ್ದಾರೆ. ಹಳ್ಳಿಗಳು ವೃದ್ಧಾಶ್ರಮವಾಗಿವೆ. ಉತ್ತರ ಕನ್ನಡ ಜನತೆಯ ತ್ಯಾಗ, ಸಂಯಮ, ಸನ್ನಡತೆಯನ್ನು ಸರ್ಕಾರಗಳು ಉಪೇಕ್ಷಿಸುತ್ತಿವೆ.
ಯಲ್ಲಾಪುರ ತಾಲೂಕಿನ ಮಾಗೋಡಿನಲ್ಲಿ ೩೦೦ ಎಕರೆಗೂ ಹೆಚ್ಚಿನ ಭೂಮಿಯು ಲಭ್ಯವಿದ್ದು, ಇದು ಮೂಲತಃ ಬೇಡ್ತಿ ಯೋಜನೆಗಾಗಿ ಕೆ.ಪಿ.ಸಿಗೆ ಕಾಲನಿ ನಿರ್ಮಾಣ ಮಾಡಲು ರೂಪಿಸಿದ ಪ್ರದೇಶ. ಈಗ ನಿರ್ಜನವಾಗಿದೆ. ಆಗ ನಿರ್ಮಿಸಿದ್ದ ಮನೆಗಳು ಸಂಪೂರ್ಣ ಹಾಳಾಗಿವೆ. ಆ ಜಾಗವನ್ನು ಅರಣ್ಯ ಇಲಾಖೆಯಿಂದ ಮರಳಿ ಪಡೆದು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಮುಖಾಂತರ ಟೆಕ್ ಪಾರ್ಕ್ / ಇಂಡಸ್ಟ್ರಿಯಲ್ ಪಾರ್ಕ್ ನಿರ್ಮಿಸಿದರೆ ಇಲ್ಲಿನ ಯುವಕರು ವಲಸೆ ಹೋಗುವುದನ್ನು ತಪ್ಪಿಸಬಹುದು.ಈ ಪ್ರದೇಶವನ್ನು ವಿಶೇಷ ಆರ್ಥಿಕ ವಲಯ ಅಥವಾ ವಿಶೇಷ ಔದ್ಯೋಗಿಕ ವಲಯ ಎಂದು ಘೋಷಿಸುವ ಮೂಲಕ ನಮ್ಮ ಭಾಗದ ಪ್ರತಿಭಾವಂತ ಯುವ ಜನಾಂಗದ ಐಟಿ,ಬಿಟಿ, ಸಾಫ್ಟ್ ವೇರ್ ತಂತ್ರಜ್ಞಾನಿಗಳಾಗುವ ಕನಸನ್ನು ನನಸು ಮಾಡಬೇಕು. ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಬೆಳಗಾವಿಯ ಅಧಿವೇಶನದಲ್ಲಿ ಮಾಗೋಡನ್ನು ವಿಶೇಷ ಆರ್ಥಿಕ ವಲಯ, ಅಥವಾ ವಿಶೇಷ ಕೈಗಾರಿಕಾ ಪ್ರದೇಶ ಎಂದು ಘೋಷಿಸುವ ನಿರ್ಣಯ ಕೈಗೊಳ್ಳುವ ಮೂಲಕ ಜಿಲ್ಲೆಯ ಜನರ ತ್ಯಾಗಕ್ಕೆ ಗೌರವ ನೀಡಬೇಕು.
ರಾಜ್ಯದಲ್ಲಿ ನಡೆಯುವ ಅಂತಾರಾಷ್ಟ್ರೀಯ ಟೆಕ್ ಸಮ್ಮಿಟ್ ನಲ್ಲಿ ಮಲ್ಟಿ ನ್ಯಾಶನಲ್ ಕಂಪನಿಗಳಿಗೆ ಸಾಫ್ಟ್‌ವೇರ್ ಪಾರ್ಕ್ ನಿರ್ಮಾಣ ಮಾಡಲು ಅವಕಾಶ ಕಲ್ಪಿಸಿಕೊಡಬೇಕು. ಈ ಭಾಗದ ಯುವ ಜನಾಂಗದ ಕನಸು ನನಸಾಗಲು ಕಾರಣವಾಗಬೇಕು ಎಂದು ನಿಯೋಗ ಆಗ್ರಹಿಸಿತು. ಇದಕ್ಕೆ ಸ್ಪಂದಿಸಿದ ಸಚಿವರು ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಹೋರಾಟಗಾರ ಅನಂತಮೂರ್ತಿ ಹೆಗಡೆ, ಮಾಜಿ ಶಾಸಕ ವಿ.ಎಸ್. ಪಾಟೀಲ, ತಾಲೂಕಿನ ದೇಹಳ್ಳಿ ಗ್ರಾಪಂ ಅಧ್ಯಕ್ಷ ಶ್ರೀಪತಿ ಮುದ್ದೆಪಾಲ, ವಿವಿಧ ಗ್ರಾಪಂಗಳ ಸದಸ್ಯರಾದ ಗಣೇಶ ಹೆಗಡೆ, ಕೆ.ಟಿ. ಹೆಗಡೆ, ರಾಮಕೃಷ್ಣ ಗಾಂವ್ಕರ, ಪ್ರಮುಖರಾದ ನಾರಾಯಣ ಚಿಪಗೇರಿ, ಅಂಕಿತ್ ಹೆಗಡೆ ಇತರರಿದ್ದರು.