ಮಹಾರಾಷ್ಟ್ರದ ಕನ್ನೇರಿ ಮಠದ ಕಾಡಸಿದ್ಧೇಶ್ವರ ಸ್ವಾಮೀಜಿ ನ. 3ರಂದು ಗಂಗಾವತಿಯಲ್ಲಿ ಅವರು ನಡೆಸಲು ಉದ್ದೇಶಿಸಿರುವ ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ಅನುಮತಿ ನೀಡಬಾರದು ಎಂದು ವಿವಿಧ ಬಸವಪರ ಸಂಘಟನೆಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿವೆ.
ಕೊಪ್ಪಳ: ಮಹಾರಾಷ್ಟ್ರದ ಕನ್ನೇರಿ ಮಠದ ಕಾಡಸಿದ್ಧೇಶ್ವರ ಸ್ವಾಮೀಜಿ ಅವರು ಬಸವ ಸಂಸ್ಕೃತಿ ಅಭಿಯಾನ ಹಾಗೂ ಲಿಂಗಾಯತ ಮಠಾಧೀಶರ ಕುರಿತು ಅಶ್ಲೀಲ, ಅವಾಚ್ಯ ಮತ್ತು ಅಸಂವಿಧಾನಿಕ ಭಾಷೆ ಬಳಸಿ ಅಪಮಾನ ಮಾಡಿದ್ದಾರೆ. ಹೀಗಾಗಿ ನ. 3ರಂದು ಗಂಗಾವತಿಯಲ್ಲಿ ಅವರು ನಡೆಸಲು ಉದ್ದೇಶಿಸಿರುವ ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ಅನುಮತಿ ನೀಡಬಾರದು ಎಂದು ವಿವಿಧ ಬಸವಪರ ಸಂಘಟನೆಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿವೆ.
ಬಸವ ಸಂಸ್ಕೃತಿ ಅಭಿಯಾನ ಮತ್ತು ಲಿಂಗಾಯತ ಮಠಾಧೀಶರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಕನ್ನೇರಿ ಸ್ವಾಮೀಜಿ ವಿರುದ್ಧ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ನಲ್ಲಿಯೂ ಟೀಕೆ ವ್ಯಕ್ತವಾಗಿದೆ ಎಂದು ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ.ಈ ಹಿಂದೆ ವಿಜಯಪುರ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಸ್ವಾಮೀಜಿ ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿತ್ತು. ಇದೀಗ ಗಂಗಾವತಿಯಲ್ಲಿ ಸಮಾವೇಶದ ಹೆಸರಿನಲ್ಲಿ ಲಿಂಗಾಯತ ಧರ್ಮವನ್ನು ಕಲುಷಿತಗೊಳಿಸುವ, ಬಸವಾದಿ ಶರಣರ ವಚನಗಳನ್ನು ತಿರುಚುವ ಹಾಗೂ ಅಪಪ್ರಚಾರ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಸ್ವಾಮೀಜಿ ಅವರ ಕಾರ್ಯಕ್ರಮದಿಂದ ಶಾಂತಿಭಂಗ, ಕೋಮುಸೌಹಾರ್ದಕ್ಕೆ ಧಕ್ಕೆ ಹಾಗೂ ಜನರ ನಡುವೆ ವಿಷಬೀಜ ಬಿತ್ತುವ ಸಾಧ್ಯತೆಯಿದೆ. ಆದ್ದರಿಂದ ಗಂಗಾವತಿಯ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಬೇಕು. ಕೊಪ್ಪಳ ಜಿಲ್ಲೆಗೆ ಅವರ ಪ್ರವೇಶವನ್ನು ನಿರ್ಬಂಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಹನುಮೇಶ ಕಲ್ಮಂಗಿ, ರಾಜ್ಯ ಉಪಾಧ್ಯಕ್ಷ ಬಸವರಾಜ ಬಳ್ಳೊಳ್ಳಿ, ಜಿಲ್ಲಾ ಗೌರವಾಧ್ಯಕ್ಷ ಸಂಗಮೇಶ ಕಲಹಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ ಸಸಿಮಠ, ತಾಲೂಕು ಕಾರ್ಯದರ್ಶಿ ಶರಣಬಸವನಗೌಡ ಪಾಟೀಲ, ವಿಶ್ವಗುರು ಬಸವೇಶ್ವರ ಟ್ರಸ್ಟ್ ಉಪಾಧ್ಯಕ್ಷ ಗಾಳೆಪ್ಪ ಕಡೇಮನಿ, ಪ್ರಧಾನ ಕಾರ್ಯದರ್ಶಿ ಬಾಪುಗೌಡ ಪಾಟೀಲ, ರಾಷ್ಟ್ರೀಯ ಬಸವದಳದ ಅಧ್ಯಕ್ಷ ಶಿವಬಸಯ್ಯ ವೀರಾಪುರ, ಯಲಬುರ್ಗಾ ತಾಲೂಕು ಕಾರ್ಯದರ್ಶಿ ಯಮನೂರಪ್ಪ ಹಳ್ಳೇರ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಅರ್ಚನಾ ಸಸಿಮಠ, ಬಸವ ಸಂಘಟನೆಯ ಮುಖಂಡರಾದ ಶಿವಸಂಗಪ್ಪ ವಣಗೇರಿ, ಮುತ್ತಣ್ಣ ಬೀರ್ಲದಿನ್ನಿ, ಶೇಖರ ಇಂಗಳದಾಳ ಇದ್ದರು.