ಸಾರಾಂಶ
ನರಸಿಂಹರಾಜಪುರ: ಚಿಕ್ಕಮಗಳೂರು ತಾಲೂಕಿನ ಖಾಂಡ್ಯ, ನರಸಿಂಹರಾಜಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಾಗೂ ಕೊಪ್ಪ ತಾಲೂಕಿನಲ್ಲಿ ಉಪಟಳ ನೀಡುತ್ತಿರುವ ಆನೆಗಳನ್ನು ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಬುಧವಾರ ಬೆಂಗಳೂರಿನಲ್ಲಿ ಅರಣ್ಯ ಪರಿಸರ ಮತ್ತು ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ಅವರಿಗೆ ಮನವಿ ಸಲ್ಲಿಸಿರುವುದಾಗಿ ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದ್ದಾರೆ.ಅವರು ಪತ್ರಿಕಾ ಹೇಳಿಕೆ ನೀಡಿ, ನರಸಿಂಹರಾಜಪುರ ತಾಲೂಕಿನ ಮೆಣಸೂರು, ಕಡಹಿನ ಬೈಲು ಗ್ರಾಪಂ ವ್ಯಾಪ್ತಿಯ ದ್ವಾರ ಮಕ್ಕಿ, ಕೋಟೆಬೈಲು,ಗುಡ್ಡದ ಮನೆ,ಮಳಲಿ, ನೇರ‍್ಲೆಕೊಪ್ಪ, ಆಲಂದೂರು, ಗಾಂಧಿಗ್ರಾಮ,ಬಣಗಿ, ಮಡಬೂರು ವ್ಯಾಪ್ತಿಯಲ್ಲಿ ಒಂದು ಒಂಟಿ ಸಲಗ, ಕಾನೂರು ಗ್ರಾಪಂ ವ್ಯಾಪ್ತಿಯ ಸಂಸೆ ಗುಡ್ಡೆಹಳ್ಳ ವ್ಯಾಪ್ತಿಯಲ್ಲಿ ಮತ್ತೊಂದು ಒಂಟಿ ಸಲಗ, ಸೀತೂರು ಗ್ರಾಪಂ ವ್ಯಾಪ್ತಿಯಲ್ಲಿ ಒಂದು ಒಂಟಿಸಲಗ, ಕೊಪ್ಪ ತಾಲೂಕಿನ ಕುಂಚೂರು,ಕಳಾಸಪುರ, ಅಂಚಿಕೊಳಲು,ಮಂಚಿಕೊಪ್ಪ, ಮಾಚಿ ಕೊಪ್ಪ, ಮರಿತೊಟ್ಲು ಭಾಗದಲ್ಲಿ ಮತ್ತೊಂದು ಒಂಟಿ ಸಲಗ ಹಾಗೂ ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿ, ಹುಯಿಗೆರೆ ಗ್ರಾಪಂನ ಅಂಡವಾನೆಯಲ್ಲಿ ಒಂದು ಒಂಟಿ ಸಲಗ ಸೇರಿದಂತೆ ಒಟ್ಟು 5 ಒಂಟಿ ಸಲಗಗಳು ಸಾರ್ವಜನಿಕರಿಗೆ ಹಾಗೂ ರೈತರಿಗೆ ಉಪಟಳ ನೀಡುತ್ತಿದ್ದು ತೆಂಗು, ಅಡಕೆ, ಬಾಳೆ ಮತ್ತಿತರರ ಬೆಳೆಗಳನ್ನು ನಾಶ ಮಾಡುತ್ತಿದೆ.
ಈ ಆನೆಗಳ ಉಪಟಳ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಎಲ್ಲರೂ ಜೀವಭಯದಿಂದ ಹೊರಕ್ಕೆ ಬಾರದಂತಾಗಿದ್ದು ಆನೆ ಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸುವಂತೆ ವಿವಿಧ ಗ್ರಾಮದ ಗ್ರಾಮಸ್ಥರು ಕೋರಿರುತ್ತಾರೆ. ಹಾಗಾಗಿ ಶೃಂಗೇರಿ ವಿಧಾನ ಸಭಾ ಕ್ಷೇತ್ರ ವಿವಿಧ ಗ್ರಾಮಗಳಲ್ಲಿ ಉಪಟಳ ನೀಡುತ್ತಿರುವ ಒಂಟಿ ಸಲಗಗಳನ್ನು ಹಿಡಿಯಲು ತುರ್ತಾಗಿ ಕಾರ್ಯಾಚರಣೆ ನಡೆಸಿ ಬೇರೆಡೆಗೆ ಸ್ಥಳಾಂತರ ಮಾಡಲು ಸಂಬಂಧಪಟ್ಟವರಿಗೆ ಸೂಚಿಸಬೇಕೆಂದು ಕೋರಲಾಗಿದೆ ಎಂದು ತಿಳಿಸಿದ್ದಾರೆ.