ಸಾರಾಂಶ
ಬ್ಯಾಡಗಿ: ಹಿಂದುಳಿದ ವರ್ಗ ಸೇರಿದಂತೆ ಬಹುತೇಕ ಕೂಲಿ ಕಾರ್ಮಿಕರಿಗೆ ಭೂಮಿ, ಮನೆ ಹಕ್ಕುಪತ್ರಗಳನ್ನು ನೀಡಿಲ್ಲ. ಕೂಡಲೇ ಜಿಲ್ಲಾಧಿಕಾರಿ ಅವರು ತಾಲೂಕು ಮಟ್ಟದ ಅಧಿಕಾರಿಗಳಿಗೆ ಈ ಕುರಿತು ಸೂಕ್ತ ನಿರ್ದೇಶನ ನೀಡಬೇಕು ಎಂದು ಕರ್ನಾಟಕ ವ್ಯವಸಾಯ ಕೂಲಿ ವೃತ್ತಿಪರ ಯೂನಿಯನ್ ಸಂಘಟನೆ ಕಾರ್ಯಕರ್ತರು ತಹಸೀಲ್ದಾರ್ ಕಾರ್ಯಾಲಯದ ಎದುರು ಕೆಲಕಾಲ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಕಾಂತೇಶ ಮುಗಳಿಹಳ್ಳಿ, ದೇಶಾದ್ಯಂತ ಶೇ. 93ರಷ್ಟು ಅಸಂಘಟಿತ ಕಾರ್ಮಿಕರು ಆರ್ಥಿಕ ಬೆಳವಣಿಗೆಯಲ್ಲಿ ಪ್ರಮಖ ಪಾತ್ರ ವಹಿಸಿದ್ದಾರೆ. ದೇಶದ ಜಿಡಿಪಿ ಹೆಚ್ಚಾಗಲು ಕಾರಣೀಕರ್ತರಾಗಿದ್ದಾರೆ. ಆದರೆ ಹಿಂದುಳಿದ ವರ್ಗಗಳಲ್ಲಿರುವ ಜನರು ದಿನನಿತ್ಯ ಕೂಲಿಯಿಂದಲೇ ದುಡಿದು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಸರ್ಕಾರಿ ಜಮೀನು ಖಾಲಿ ಉಳಿದಿದೆ. ಈ ಜಮೀನನ್ನು ಕೂಲಿಕಾರರಿಗೆ ಹಂಚಿ ಕೊಡಬೇಕಿದೆ. ಈ ಕುರಿತು ಹಲವು ಬಾರಿ ರಾಜ್ಯಮಟ್ಟದಲ್ಲಿ ಹೋರಾಟ ನಡೆದಿದೆ. ಆದರೆ ಸರ್ಕಾರಗಳು ಕುಂಟು ನೆಪಗಳನ್ನು ಹೇಳುತ್ತಾ ಜನರ ಜೀವನದ ಜತೆ ಚೆಲ್ಲಾಟವಾಡುತ್ತಿವೆ. ಈ ವ್ಯವಸ್ಥೆಯಲ್ಲಿ ಎಸ್ಸಿ-ಎಸ್ಟಿ ಜನಾಂಗದವರು ಸಂಖ್ಯೆ ಹೆಚ್ಚಾಗಿದ್ದು, ಸರ್ಕಾರ ಕೂಡಲೇ ಅವರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.ಬಡವರ ಪರದಾಟ: ಸಂಘಟನೆ ತಾಲೂಕಾಧ್ಯಕ್ಷ ಮಂಜುನಾಥ ವೀರಾಪುರ ಮಾತನಾಡಿ, ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಸರ್ಕಾರಿ ಹಾಗೂ ಇತರ ಜಮೀನುಗಳಲ್ಲಿ ಬಡವರು ಕಳೆದ 50 ವರ್ಷಗಳಿಂದ ಮನೆ ನಿರ್ಮಿಸಿಕೊಂಡಿದ್ದರೂ ಈ ವರೆಗೂ ಹಕ್ಕುಪತ್ರ ನೀಡಿಲ್ಲ. ಈ ಜಾಗದಲ್ಲಿ ಸರ್ಕಾರಿ ಮನೆ ಮಂಜೂರು ಮಾಡಲಾಗಿದ್ದು, ಅವರಿಗೆ ಪಂಚಾಯಿತಿ ಮಟ್ಟದಲ್ಲಿ ಇ-ಸೊತ್ತು ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರಿದ ಪರಿಣಾಮ ಬಡವರು ಇಂದಿಗೂ ಗೋಳಾಡಬೇಕಿದೆ. ಇಂತಹ ಆಸ್ತಿ ಹೊಂದಿದವರು ಬ್ಯಾಂಕ್‌ಗಳಲ್ಲಿ ಸಾಲ ವಗೈರೆಗಳಿಗೆ ಅವಕಾಶವಿರುವುದಿಲ್ಲ. ಹೀಗಾಗಿ ಸರ್ಕಾರದ ಕೆಲವು ಯೋಜನೆ ಪಡೆಯಲು ಸಾಧ್ಯವಾಗುತ್ತಿಲ್ಲ. ಕೂಡಲೇ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿ ಬಡವರಿಗೆ ಹಕ್ಕುಪತ್ರ ನೀಡುವ ಮೂಲಕ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.
ಬಳಿಕ ತಹಸೀಲ್ದಾರ್ ಫಿರೋಜ ಷಾ ಸೋಮನಕಟ್ಟಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ರಾಜ್ಯ ಕಮಿಟಿ ಸದಸ್ಯರಾದ ನಾಗಪ್ಪ ಮಳಗಿ, ಹನುಮಂತಪ್ಪ ಆಲದಕಟ್ಟಿ, ಜಯಮ್ಮ ದೊಡ್ಮನಿ, ಲಲಿತ ಹರಿಜನ, ಕಾಮಾಕ್ಷಿ ರೇವಣಕರ, ನಾಗರಾಜ ಮುಳೂರ, ಚನ್ನಬಸಪ್ಪ ದೊಡ್ಡಮನಿ ಇತರರಿದ್ದರು.