ಅಂಗನವಾಡಿಗಳಿಗೆ ಗುಣಮಟ್ಟದ ಆಹಾರ ಪದಾರ್ಥ ನೀಡಲು ಮನವಿ

| Published : Jun 26 2024, 12:33 AM IST

ಸಾರಾಂಶ

ಸರ್ಕಾರ ರಾಜ್ಯದಲ್ಲಿನ ಅಂಗನವಾಡಿ ಕೇಂದ್ರಗಳಿಗೆ ಪೌಷ್ಟಿಕವಾದ ಆಹಾರ ನೀಡಬೇಕು ಎಂದು ಆಗ್ರಹಿಸಿ ಕರವೇ ಸ್ವಾಭಿಮಾನಿ ಬಳಗದ ಸದಸ್ಯರು ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ

ಸರ್ಕಾರ ರಾಜ್ಯದಲ್ಲಿನ ಅಂಗನವಾಡಿ ಕೇಂದ್ರಗಳ ಮೂಲಕ ಚಿಕ್ಕ ಮಕ್ಕಳಿಗೆ, ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಪೌಷ್ಟಿಕವಾದ ಆಹಾರ ನೀಡುವ ಮೂಲಕ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಕರವೇ ಸ್ವಾಭಿಮಾನಿ ಬಳಗದ ಸದಸ್ಯರು ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

ಸೋಮವಾರ ಪಟ್ಟಣದ ತಹಸೀಲ್ದಾರ್‌ ವಾಸುದೇವ ಸ್ವಾಮಿ ಅವರಿಗೆ ಕರವೇ ಸ್ವಾಭಿಮಾನಿ ಬಳಗದ ಸದಸ್ಯರು ಮನವಿ ಸಲ್ಲಿಸಿದರು.

ಈ ವೇಳೆ ಕರವೇ ಅಧ್ಯಕ್ಷ ರವಿ ಲಿಂಗಶೆಟ್ಟಿ ಮಾತನಾಡಿ, ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳಿಗೆ ರಾಜ್ಯ ಸರ್ಕಾರವು ಕೆಲವು ಗುತ್ತಿಗೆ ಏಜೆನ್ಸಿಗಳ ಮೂಲಕ ಆಹಾರ ಪೂರೈಕೆ ಮಾಡುತ್ತಿದೆ. ಈಗ ಕೊಡುತ್ತಿರುವ ಆಹಾರವು ಗುಣಮಟ್ಟದಿಂದ ಕೂಡಿಲ್ಲ, ಅಲ್ಲದೆ ಕೊಡುತ್ತಿರುವ ಆಹಾರದ ಪ್ರಮಾಣವು ಕಡಿಮೆಯಾಗಿದೆ. ಅಂಗನವಾಡಿ ಕೇಂದ್ರಗಳಲ್ಲಿ ಕೊಡುತ್ತಿರುವ ಆಹಾರವನ್ನು ಬಡ ಕುಟುಂಬಗಳ ಚಿಕ್ಕ ಮಕ್ಕಳು ಹಾಗೂ ಗರ್ಭಿಣಿಯರು ಊಟ ಮಾಡುತ್ತಾರೆ. ಕಳಪೆ ಗುಣಮಟ್ಟದ ಆಹಾರ ಸೇವನೆಯಿಂದ ಹುಟ್ಟುವ ಹಾಗೂ ಬೆಳೆಯುವ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಮುಂದಿನ ಪೀಳಿಗೆಯ ಮೇಲೆ ಇದು ಗಂಭೀರ ಪರಿಣಾಮ ಬೀರುತ್ತದೆ. ಆದ್ದರಿಂದ ಸರ್ಕಾರ ಅಂಗನವಾಡಿಗಳಿಗೆ ಪೂರೈಸುವ ಆಹಾರವು ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅವರು ಹೇಳಿದರು.

ಎ.ಎನ್. ಸವಡಿ, ಸಾವಿತ್ರಿ ಕೆ., ಪುಷ್ಪಾ, ಮಂಜುನಾಥ, ಎಂ.ಎನ್. ಮಲ್ಲೂರ, ಬಿ.ವಿ. ಹಾದಿಮನಿ, ಎಂ.ಎನ್. ಖಂಡೋಜಿ, ಎಸ್.ಸಿ. ಗಿಡಿಬಿಡ ಇದ್ದರು.