ಮರು ಪರೀಕ್ಷೆ ಬರೆದ ಪದವಿ ಫಲಿತಾಂಶ ಪ್ರಕಟಿಸಲು ಆಗ್ರಹ

| Published : Mar 08 2024, 01:50 AM IST

ಸಾರಾಂಶ

5ನೇ ಸೆಮಿಸ್ಟರ್ ನ ಪರೀಕ್ಷೆಗಳು ಸಮೀಪಿಸುತ್ತಿದ್ದು ಅತಂತ್ರದ ಪರಿಸ್ಥಿತಿ ಉಲ್ಬಣವಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ಕಂಪ್ಲಿ: ಮರು ಪರೀಕ್ಷೆ ಬರೆದ ಪದವಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸುವಂತೆ ಆಗ್ರಹಿಸಿ ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಮುಂಭಾಗದಲ್ಲಿ 2021- 22ನೇ ಸಾಲಿನ ಪದವಿ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು.ವಿದ್ಯಾರ್ಥಿಗಳಾದ ಕಿರಣ್, ಪ್ರದೀಪ್, ಹರೀಶ್, ಶ್ರೀನಿವಾಸ್, ಸಂತೋಷ್, ಸಿದ್ದಾರ್ಥ್, ಚಂದ್ರಕಾಂತ್ ಶೆಟ್ಟಿ ಮಾತನಾಡಿ, 2021- 22ನೇ ಸಾಲಿನ ಬಿಎ ಹಾಗೂ ಬಿಕಾಂ ವಿದ್ಯಾರ್ಥಿಗಳಾದ ನಾವು ಮೊದಲ ಸೆಮಿಸ್ಟರ್ ಪರೀಕ್ಷೆಯ ವೇಳೆಯಲ್ಲಿ ಗೈರುಹಾಜರಾದ ಹಾಗೂ ಅನುತ್ತೀರ್ಣರಾದ ಹಿನ್ನೆಲೆ 3ನೇ ಸೆಮಿಸ್ಟರ್ ಇದ್ದ ಸಂದರ್ಭದಲ್ಲಿ 100ಕ್ಕೂ ಹೆಚ್ಚು ಜನ ಮರು ಪರೀಕ್ಷೆ ಬರೆದಿದ್ದೇವೆ. ಇದೀಗ 5ನೇ ಸೆಮಿಸ್ಟರ್ ನ ಪರೀಕ್ಷೆಗಳ ವೇಳಾಪಟ್ಟಿ ಬಿಡುಗಡೆಗೊಂಡರೂ ಮೊದಲನೇ ಸೆಮಿಸ್ಟರ್ ನ ಮರು ಪರೀಕ್ಷೆಯ ಫಲಿತಾಂಶ ಮಾತ್ರ ಪ್ರಕಟವಾಗಿಲ್ಲ. ಐದನೇ ಸೆಮಿಸ್ಟರ್ ಪರೀಕ್ಷಾ ಶುಲ್ಕ ಪಾವತಿಸಲು ಮೊದಲು ಮಾ. 5ರ ವರೆಗೆ ಅವಕಾಶ ಕಲ್ಪಿಸಲಾಗಿತ್ತು, ಇದೀಗ ಮಾ. 11 ರ ವರೆಗೆ ವಿಸ್ತರಿಸಿದ್ದರೂ ದಂಡ ಸಹಿತ ಪರೀಕ್ಷಾ ಶುಲ್ಕ ಪಾವತಿಸುವಂತೆ ವಿಶ್ವವಿದ್ಯಾಲಯ ಸೂಚಿಸಿದೆ. ಆನ್‌ಲೈನ್ ಮೂಲಕ ಐದನೇ ಸೆಮಿಸ್ಟರ್ ಪರೀಕ್ಷಾ ಶುಲ್ಕ ಪಾವತಿಸುವಾಗ ಅನುತ್ತೀರ್ಣಗೊಂಡ ಮೊದಲನೇ ಸೆಮಿಸ್ಟರ್ ವಿಷಯಗಳ ಪರೀಕ್ಷೆ ಶುಲ್ಕ ಪಾವತಿಸಿ ಪುನಃ ಪರೀಕ್ಷೆ ಬರೆಯುವಂತೆ ಸೂಚಿಸುತ್ತಿದೆ. ಇದೀಗ ನಮ್ಮಲ್ಲಿ ಗೊಂದಲ ಉಂಟಾಗಿದೆ, ಅಲ್ಲದೇ 5ನೇ ಸೆಮಿಸ್ಟರ್ ನ ಪರೀಕ್ಷೆಗಳು ಸಮೀಪಿಸುತ್ತಿದ್ದು ಅತಂತ್ರದ ಪರಿಸ್ಥಿತಿ ಉಲ್ಬಣವಾಗಿದೆ ಎಂದರು. ಬಳಿಕ ಇದೇ ವಿಚಾರ ಕುರಿತು ತಹಸೀಲ್ದಾರ್ ಶಿವರಾಜ್ ಶಿವಪುರ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.