2021ರಲ್ಲಿ ಶಿವಾಜಿ ಪುತ್ಥಳಿಯನ್ನು ಹುಬ್ಬಳ್ಳಿಯ ಮಹಾನಗರ ಪಾಲಿಕೆ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಆದರೆ ನಿರ್ವಹಣೆ ಇಲ್ಲದೆ ಪುತ್ಥಳಿ ಹಾನಿಗೀಡಾಯಿತು. ಇದೀಗ ಪುತ್ಥಳಿ ಪ್ರತಿಷ್ಠಾಪನೆ ಮಾಡಬೇಕಾದ ಜಾಗೆಯಲ್ಲಿ ಕಿಡಿಗೇಡಿಗಳ ಮದ್ಯಪಾನ, ಧೂಮಪಾನ ಮಾಡುವ ತಾಣವಾಗಿದೆ.

ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಹಾನಿಗೀಡಾಗಿದ್ದು ಮರು ಪ್ರತಿಷ್ಠಾಪಿಸಬೇಕು ಎಂದು ವೀರ ಶಿವಾಜಿ ಸೇನಾ ಆಗ್ರಹಿಸಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿತು.

ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ವೆಂಕಟೇಶ ಕಾಟವೆ, 2021ರಲ್ಲಿ ಶಿವಾಜಿ ಪುತ್ಥಳಿಯನ್ನು ಪಾಲಿಕೆ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಆದರೆ ನಿರ್ವಹಣೆ ಇಲ್ಲದೆ ಪುತ್ಥಳಿ ಹಾನಿಗೀಡಾಯಿತು. ಇದೀಗ ಪುತ್ಥಳಿ ಪ್ರತಿಷ್ಠಾಪನೆ ಮಾಡಬೇಕಾದ ಜಾಗೆಯಲ್ಲಿ ಕಿಡಿಗೇಡಿಗಳ ಮದ್ಯಪಾನ, ಧೂಮಪಾನ ಮಾಡುವ ತಾಣವಾಗಿದೆ. ಆದಕಾರಣ ಕೂಡಲೇ ಪುತ್ಥಳಿಯನ್ನು ಪುನಃ ಸ್ಥಾಪನೆಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಶಿವಾಜಿ ಮಹಾರಾಜರು ಹಿಂದೂ ಹೃದಯದ ಸಾಮ್ರಾಟ. ಅವರ ಶೌರ್ಯ, ದೂರದೃಷ್ಟಿ, ಹಿಂದೂ ಸಾಮ್ರಾಜ್ಯ ಸ್ಥಾಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದವರು. ಇಂತಹ ಮಹಾನ ನಾಯಕರಿಗೆ ಅವಮಾನ ಮಾಡದೇ ತಕ್ಷಣವೇ ಪುತ್ಥಳಿಯನ್ನು ಮರು ಪ್ರತಿಷ್ಠಾಪಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಸುನಿಲ್ ಮರಾಠಿ, ವಿನಯ್ ಸಾವಂತ್, ವೀರ ಶಿವಾಜಿ ಸೇನಾ ಅಧ್ಯಕ್ಷ ಮಂಜುನಾಥ ಮರಾಠಾ, ಅಮಿತ್ ಮಾತೆ, ಗಗ್ಗು ಮಾತೆ, ಕಿರಣ ಶಿಂಧೆ, ಪ್ರಮೋದ ಮಾನೆ ಸೇರಿದಂತೆ ನೂರಾರು ಹಿಂದೂ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.