ಹೆಣ್ಣುಮಕ್ಕಳಿಗೆ ಉಚಿತ ಶುಚಿ ಕಿಟ್ ನೀಡಲು ರಾಜ್ಯ ಸರ್ಕಾರಕ್ಕೆ ಆಗ್ರಹ

| Published : Oct 10 2024, 02:29 AM IST

ಹೆಣ್ಣುಮಕ್ಕಳಿಗೆ ಉಚಿತ ಶುಚಿ ಕಿಟ್ ನೀಡಲು ರಾಜ್ಯ ಸರ್ಕಾರಕ್ಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಆರೋಗ್ಯ ಇಲಾಖೆಯು ಹದಿಹರೆಯದ ಹೆಣ್ಣುಮಕ್ಕಳಿಗೆ ಶೀಘ್ರವಾಗಿ ಶುಚಿ ಪ್ಯಾಡ್ ಉಚಿತವಾಗಿ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡು ಹೆಣ್ಣುಮಕ್ಕಳ ಶುಚಿ ಕಾಳಜಿಗೆ ಒತ್ತು ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮುಂಡಗೋಡ: ರಾಜ್ಯದಲ್ಲಿ ಹದಿಹರೆಯದ ಹೆಣ್ಣುಮಕ್ಕಳಿಗೆ ಉಚಿತವಾಗಿ ಶುಚಿ ಕಿಟ್ ವಿತರಿಸುವಂತೆ ಆಗ್ರಹಿಸಿ ತಾಲೂಕಿನ ಸಿಸಿಎಫ್- ಲೊಯೋಲ ಜನ ಸ್ಫೂರ್ತಿ ಸ್ವ- ಸಹಾಯ ಸಂಘಗಳ ಒಕ್ಕೂಟದ ವತಿಯಿಂದ ತಹಸೀಲ್ದಾರ್ ಮುಖಾಂತರ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅವರಿಗೆ ಮನವಿ ಅರ್ಪಿಸಿದರು. ಕೋವಿಡ್ ಬರುವ ೨೦೧೯ರ ಪೂರ್ವದಲ್ಲಿ ಹದಿಹರೆಯದ ಹೆಣ್ಣುಮಕ್ಕಳಿಗೆ ಶುಚಿ ಯೋಜನೆಯಡಿ ರಾಜ್ಯಸರ್ಕಾರದ ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಶುಚಿ ಪ್ಯಾಡ್ ವಿತರಿಸುವ ಕಾರ್ಯಕ್ರಮ ಜಾರಿಯಲ್ಲಿತ್ತು. ಇದರಿಂದ ಹೆಣ್ಣುಮಕ್ಕಳಲ್ಲಿ ವಿಶೇಷವಾಗಿ ಗ್ರಾಮೀಣ ಭಾಗದ ಹದಿಹರೆಯದ ಹೆಣ್ಣುಮಕ್ಕಳು ಆತ್ಮವಿಶ್ವಾಸದಿಂದ ತಮ್ಮ ಓದು ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು.

೨೦೧೯ರ ನಂತರ ಆರೋಗ್ಯ ಇಲಾಖೆ ಶುಚಿ ಪ್ಯಾಡ್ ವಿತರಣೆ ನಿಲ್ಲಿಸಿದ್ದರಿಂದ ಪ್ರೌಢಶಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಡ, ಗ್ರಾಮೀಣ ಹೆಣ್ಣುಮಕ್ಕಳು ಶಾಲೆ ಬಿಡುವ ಪ್ರಮಾಣ ಶೇ. ೧೫ಕ್ಕಿಂತ ಹೆಚ್ಚಾಗುತ್ತಿದೆ. ಪ್ರತಿ ತಿಂಗಳು ಹೆಣ್ಣುಮಕ್ಕಳಿಗೆ ಆಗುವಂತ ಸ್ವಾಭಾವಿಕ ಕ್ರಿಯೆ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ೩- ೫ ದಿನಗಳ ಕಾಲ ಶಾಲಾ ಕಾಲೇಜಿಗೆ ಹೋಗದೆ ಮನೆಯಲ್ಲಿ ಉಳಿಯುವಂತಾಗಿದೆ. ಆದ್ದರಿಂದ ಆರೋಗ್ಯ ಇಲಾಖೆಯು ಹದಿಹರೆಯದ ಹೆಣ್ಣುಮಕ್ಕಳಿಗೆ ಶೀಘ್ರವಾಗಿ ಶುಚಿ ಪ್ಯಾಡ್ ಉಚಿತವಾಗಿ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡು ಹೆಣ್ಣುಮಕ್ಕಳ ಶುಚಿ ಕಾಳಜಿಗೆ ಒತ್ತು ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಸಿಸಿಎಫ್‌ ಲೊಯೋಲ ಜನಸ್ಫೂರ್ತಿ ಟ್ರಸ್ಟ್ ಅಧ್ಯಕ್ಷೆ ಸರೋಜಾ ಚವ್ಹಾಣ, ಮಲ್ಲಮ್ಮ ನೀರಲಗಿ, ಸುನಿತಾ ಗೌಳಿ, ರಜಿಯಾ ಕರಡಿ, ಚೆನ್ನಮ್ಮ ಹೆಬ್ಬಳ್ಳಿ, ಗೀತಾ ಗುಡಗೇರಿ, ಶಾಂತಾ ಬಡಂಗಕರ, ಅಂಜಲಿ ಸಿದ್ದಿ, ರೇಣುಕಾ ಕೀರ್ತೆಪ್ಪನವರ, ಸವಿತಾ ಅವನಿ, ಹಜರತ ಮುಲ್ಲಾ, ಲಕ್ಷ್ಮಣ ಮುಳೆ, ಪ್ರವೀಣ ಸೇದಿಯಣ್ಣನವರ, ತಾಲೂಕಿನ ಸಿಸಿಎಫ್- ಲೊಯೋಲ ಜನಸ್ಫೂರ್ತಿ ಸ್ವ- ಸಹಾಯ ಸಂಘಗಳ ಒಕ್ಕೂಟದ ವಲಯ ಹಾಗೂ ಒಕ್ಕೂಟದ ಸಂಯೋಜಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.