ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಗುತ್ತಿಗೆ , ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ವೇತನವನ್ನು ನೇರವಾಗಿ ಪಾವತಿಸುವಂತೆ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರ ಕಾರ್ಮಿಕರ ಮಹಾಸಂಘದ ಅಧ್ಯಕ್ಷ ನಾರಾಯಣ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.ಗುತ್ತಿಗೆ, ಹೊರಗುತ್ತಿಗೆ, ವಾಹನ ಚಾಲಕರು, ಲೋಡರ್ಸ್ ಮತ್ತು ಕ್ಲೀನರ್ಸ್‌ಗಳಿಗೆ ಗುತ್ತಿಗೆ ಸಂಸ್ಥೆಯ ಮೂಲಕ ವೇತನ ನೀಡುವ ಬದಲು ಪ್ರತಿ ತಿಂಗಳು ೫ನೇ ತಾರೀಖಿನೊಳಗೆ ವೇತನ ಪಾವತಿಸುವಂತೆ ಸರ್ಕಾರವನ್ನು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಪಡಿಸಿದರು.
ಕರ್ನಾಟಕ ರಾಜ್ಯಪತ್ರದ ಅಧಿಸೂಚನೆಯಂತೆ ೨೦೨೨ನೇ ಸಾಲಿನಲ್ಲಿ ಮೊದಲ ಹಂತದಲ್ಲಿ ಪೌರ ಕಾರ್ಮಿಕರನ್ನು ಕಾಯಂಗೊಳಿಸಲು ಆದೇಶ ಹೊರಡಿಸಿದೆ. ಎರಡನೇ ಹಂತದಲ್ಲಿ ೨೦೨೩ನೇ ಸಾಲಿನಲ್ಲಿ ಪೌರ ಕಾರ್ಮಿಕರನನ್ನು ಕಾಯಂಗೊಳಿಸಲು ಆದೇಶ ಹೊರಡಿಸಿದ್ದರೂ ಸುಮಾರು ೨೦ ವರ್ಷಗಳಿಂದ ಸೇವೆ ಸಲ್ಲಿಸಿದ ಪೌರ ಕಾರ್ಮಿಕರಿಗೆ ಮಾನ್ಯತೆ ಕೊಡದೆ, ಸೇವಾವಧಿಯನ್ನು ಪರಿಗಣಿಸದೆ ಇರುವ ಬಗ್ಗೆ ಅಗತ್ಯ ಕ್ರಮವನ್ನು ಕೈಗೊಂಡು ಹೆಚ್ಚುಕಾಲ ಸೇವೆ ಸಲ್ಲಿಸಿರುವ ಪೌರ ಕಾರ್ಮಿಕರಿಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿದರು.ದಿನಗೂಲಿ ಗುತ್ತಿಗೆ, ಹೊರಗುತ್ತಿಗೆ ಹಾಗೂ ನೇರ ವೇತನ ಪಾವತಿಯಡಿ ಕೆಲಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಬ್ಯಾಂಕ್ ದಾಖಲೆ, ಇಎಸ್‌ಐ, ಪಿಎಫ್‌ನ್ನು ಪರಿಗಣಿಸಿ ಜೇಷ್ಠತಾ ಪಟ್ಟಿ ತಯಾರಿಸುವುದು. ಆ ಮೂಲಕ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಪೌರ ಕಾರ್ಮಿಕರನ್ನು ಕಾಯಂಗೊಳಿಸಲು ಮೊದಲ ಆದ್ಯತೆ ನೀಡುವಂತೆ ತಿಳಿಸಿದರು.
ರಾಜ್ಯದಲ್ಲಿ ೯೨೦೦ ಪೌರ ಕಾರ್ಮಿಕರ ಹುದ್ದೆಗಳು ಖಾಲಿ ಇದ್ದು, ಅವುಗಳಿಗೆ ಪೌರ ಕಾರ್ಮಿಕರನ್ನು ಕಾಯಂಗೊಳಿಸಬೇಕು. ಅವರೊಟ್ಟಿಗೆ ೩೮೦೦ ವಾಹನ ಚಾಲಕರು, ಲೋಡರ್ಸ್‌ಗಳನ್ನೂ ಕಾಯಂ ಮಾಡಬೇಕು. ಒಳಚರಂಡಿ ಕಾರ್ಮಿಕರು ೧೫೦೦ ಜನರಿದ್ದು, ಅವರಲ್ಲಿ ೫೬೦ ಜನರನ್ನು ಕಾಯಂಗೊಳಿಸಲು ಸರ್ಕಾರ ನಿರ್ಧರಿಸಿದೆ. ಉಳಿದವರನ್ನೂ ಕಾಯಂಗೊಳಿಸುವಂತೆ ಸರ್ಕಾರದೆದುರು ಬೇಡಿಕೆ ಇಟ್ಟಿರುವುದಾಗಿ ಹೇಳಿದರು.ಸಾರಿಗೆ ನೌಕರರಿಗೆ ನೀಡಿರುವಂತೆ ನಗದು ರಹಿತ ಆರೋಗ್ಯ ಕಾರ್ಡ್‌ಗಳನ್ನು ನೀಡಬೇಕೆಂಬ ಆಗ್ರಹಕ್ಕೆ ರಾಜ್ಯಸರ್ಕಾರ ಒಪ್ಪಿಗೆ ಸೂಚಿಸಿದೆ. ಸಂಘದ ಎಲ್ಲಾ ಬೇಡಿಕೆಗಳನ್ನು ಪರಿಶೀಲಿಸಿ ಬಜೆಟ್‌ನಲ್ಲಿ ಈಡೇರಿಸುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವುದಾಗಿ ಹೇಳಿದರು.
ಮಂಡ್ಯ ಹೊರತುಪಡಿಸಿ ಉಳಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಸಂಕಷ್ಟ ಭತ್ಯೆ ನೀಡಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೂ ಸಂಕಷ್ಟ ಭತ್ಯೆ ನೀಡಬೇಕು. ಪೌರ ಕಾರ್ಮಿಕರ ಕಾಲೋನಿಯಲ್ಲಿರುವ ೨೮ ಮನೆಗಳಿಗೆ ಹಕ್ಕುಪತ್ರ ನೀಡುವಂತೆ ತಿಳಿಸಿದರು.ಚಾಮರಾಜನಗರ, ಗುಂಡ್ಲುಪೇಟೆ, ಚಿಕ್ಕಬಳ್ಳಾಫುರದಲ್ಲಿ ನೀಡಿರುವಂತೆ ೫ ಕಿ.ಮೀ. ವ್ಯಾಪ್ತಿಯಲ್ಲಿ ೩೦*೪೦ ಜಾಗವನ್ನು ಗುರುತಿಸಿ ಪೌರ ಕಾರ್ಮಿಕರಿಗೆ ಮಂಡ್ಯ ನಗರಸಭೆ ವತಿಯಿಂದ ನೀಡುವಂತೆ ಒತ್ತಾಯಿಸಿದರು.
ಗೋಷ್ಠಿಯಲ್ಲಿ ಆರ್.ಶಿವಣ್ಣ, ಶ್ರೀನಿವಾಸ್, ನಾಗರಾಜು, ಆರ್.ದಾಸು, ಗಣೇಶ್ ಇದ್ದರು.