ಸಾರಾಂಶ
ಆಕ್ರೋಶಗೊಂಡ ಗುಂಪೊಂದು ಕ್ಯಾಂಟರ್ ಚಾಲಕ ಮತ್ತು ನಿರ್ವಾಹಕ ಪರಾರಿಯಾಗಲು ಪೊಲೀಸರು ಸಹಕಾರ ನೀಡಿದ್ದಾರೆ ಎಂದು ಆರೋಪಿಸಿ ಕ್ಯಾಂಟರ್ ನ ಮುಂಭಾಗದ ಗಾಜನ್ನು ಪುಡಿ ಪುಡಿ ಮಾಡಿದೆ. ಅಲ್ಲದೇ, ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು.
ಕನ್ನಡಪ್ರಭ ವಾರ್ತೆ ರಾಮನಗರ
ಕಸಾಯಿಖಾನೆಗೆ ಸಾಗಿಸುತ್ತಿದ್ದ 27 ರಾಸುಗಳನ್ನು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಕಾರ್ಯಕರ್ತರು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ನಗರದ ಐಜೂರು ವೃತ್ತದಲ್ಲಿ ಮಂಗಳವಾರ ರಾತ್ರಿ ನಡೆದಿದೆ.ಮದ್ದೂರಿನಿಂದ ಬೆಂಗಳೂರಿಗೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ (ಕೆಎ 51, ಎ.ಜಿ.5403) ರಾಮನಗರದ ಐಜೂರು ವೃತ್ತದ ಸಿಗ್ನಲ್ ನಲ್ಲಿ ಬಂದು ನಿಂತಿದೆ.
ಹಿಂದೂ ಪರ ಸಂಘಟನೆ ಮುಖಂಡರಾದ ಷಣ್ಮುಖ, ಕುಮಾರ್ , ಚಂದ್ರಶೇಖರ್ ರೆಡ್ಡಿ, ನಂದೀಶ್ , ಮೋಹನ್ , ಸಂಜಯ್ , ರವಿರವರು ವಾಹನದೊಳಗೆ ಏನಿದೆ ಎಂದು ಪ್ರಶ್ನಿಸಿ ಪರಿಶೀಲನೆಗೆ ಮುಂದಾಗಿದ್ದಾರೆ. ಘಟನೆ ವಿಷಯ ತಿಳಿಯುತ್ತಿದ್ದಂತೆ ಪಿಎಸ್ಸೈ ತನ್ವೀರ್ ಹುಸೇನ್ , ಪಿಎಸ್ಸೈ ರುದ್ರಪ್ಪರವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿದ್ದಾರೆ. ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾದಾಗ ಕ್ಯಾಂಟರ್ ನಿರ್ವಾಹಕ ಮತ್ತು ಚಾಲಕ ಕೀ ಸಮೇತ ಪರಾರಿಯಾಗಿದ್ದಾರೆ.ಅನಂತರ ಮುಖಂಡರು ಸಾರ್ವಜನಿಕರ ಸಹಕಾರದೊಂದಿಗೆ ಕ್ಯಾಂಟರ್ ಅನ್ನು ಪರಿಶೀಲಿಸಿದಾಗ 7 ಸೀಮೆ ಹಸುಗಳು, 7 ಎಮ್ಮೆ ಕರುಗಳು ಹಾಗೂ 13 ಎಮ್ಮೆಗಳನ್ನು ಗಾಳಿ, ಬೆಳಕು, ಸೂಕ್ತ ಸ್ಥಳಾವಕಾಶವನ್ನೂ ಕಲ್ಪಿಸದೇ ಕಟ್ಟಿ ಹಾಕಿರುವುದು ಕಂಡು ಬಂದಿದೆ.
ಇದರಿಂದ ಆಕ್ರೋಶಗೊಂಡ ಗುಂಪೊಂದು ಕ್ಯಾಂಟರ್ ಚಾಲಕ ಮತ್ತು ನಿರ್ವಾಹಕ ಪರಾರಿಯಾಗಲು ಪೊಲೀಸರು ಸಹಕಾರ ನೀಡಿದ್ದಾರೆ ಎಂದು ಆರೋಪಿಸಿ ಕ್ಯಾಂಟರ್ ನ ಮುಂಭಾಗದ ಗಾಜನ್ನು ಪುಡಿ ಪುಡಿ ಮಾಡಿದೆ. ಅಲ್ಲದೇ, ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು.ಅನಂತರ ಜಾನುವಾರುಗಳ ಸಮೇತ ಕ್ಯಾಂಟರ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಠಾಣೆಗೆ ಕೊಂಡೊಯ್ದರು. ಎಎಸ್ ಐ ನಾಗರಾಜಯ್ಯರವರು ಕ್ಯಾಂಟರ್ ವಾಹನದ ಮಾಲೀಕ ಮತ್ತು ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರು ದಾಖಲಿಸಿದ್ದಾರೆ.
ಈ ಸಂಬಂಧ ಐಜೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.