ಸಾರಾಂಶ
ಸಮುದ್ರ ಸುಳಿಗೆ ಸಿಲುಕಿ ಜೀವಾಪಾಯದಲ್ಲಿದ್ದ ಒಟ್ಟು 8 ಪ್ರವಾಸಿಗರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಣೆ ಮಾಡಿದ ಎರಡು ಪ್ರತ್ಯೇಕ ಘಟನೆ ಗೋಕರ್ಣ ಮುಖ್ಯ ಕಡಲತೀರದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಗೋಕರ್ಣ:
ಸಮುದ್ರ ಸುಳಿಗೆ ಸಿಲುಕಿ ಜೀವಾಪಾಯದಲ್ಲಿದ್ದ ಒಟ್ಟು 8 ಪ್ರವಾಸಿಗರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಣೆ ಮಾಡಿದ ಎರಡು ಪ್ರತ್ಯೇಕ ಘಟನೆ ಇಲ್ಲಿನ ಮುಖ್ಯ ಕಡಲತೀರದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.ಪಿತೃ ಪಕ್ಷದ ಪಿತೃ ಕಾರ್ಯಕ್ಕೆ ಬಂದಿದ್ದ ಹುಬ್ಬಳ್ಳಿಯ ಎಲ್.ವಿ. ಪಾಟೀಲ್ ಎಂಬುವವರು ಮುಂಜಾನೆ ಸಮುದ್ರ ಸ್ನಾನಕ್ಕೆ ತೆರಳಿದ್ದು, ಆ ವೇಳೆ ಸುಳಿಗೆ ಸಿಲುಕಿ ಜೀವಾಪಾಯದಲ್ಲಿದ್ದರು, ಇದನ್ನು ಗಮನಿಸಿ ಕರ್ತವ್ಯದಲ್ಲಿದ್ದ ಜೀವರಕ್ಷ ಸಿಬ್ಬಂದಿ ತಕ್ಷಣ ಧಾವಿಸಿ ರಕ್ಷಿಸಿದ್ದಾರೆ.ಈ ಅವಘಡ ನಡೆದು ಎರಡು ಗಂಟೆ ಬಳಿಕ ಇದೇ ಕಡಲತೀರದಲ್ಲಿ ಸಮುದ್ರದಲ್ಲಿ ಆಟವಾಡುತ್ತಿದ್ದ ಏಳೂ ಮಂದಿ ಭಾರಿ ಅಲೆಯ ಅಬ್ಬರಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿದ್ದರು. ಇವರನ್ನು ಗಮನಿಸಿದ ಜೀವರಕ್ಷಕ ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು ಎಲ್ಲರನ್ನು ದಡಕ್ಕೆ ಸುರಕ್ಷಿತವಾಗಿ ಕರೆದು ತಂದು ಜೀವ ಉಳಿಸಿದ್ದಾರೆ.
ಹುಬ್ಬಳಿಯಿಂದ ಕುಟುಂಬ ಸಮೇತರಾಗಿ ಬಂದಿದ್ದ ಪರಶುರಾಮ (44), ರುಕ್ಮಿಣಿ (38) ಧೀರಜ್ (14), ಅಕ್ಷರ (14) , ಖುಷಿ (13), ದೀಪಿಕಾ (12), ನಂದಕಿಶೋರ್ (10) ರಕ್ಷಣೆಗೆ ಒಳಗಾದ ಪ್ರವಾಸಿಗರು.ಜೀವ ರಕ್ಷಕ ಸಿಬ್ಬಂದಿಗಳಾದ ಶಿವಪ್ರಸಾದ ಅಂಬಿಗ, ಲೋಕೇಶ ಹರಿಕಂತ್ರ ಪ್ರಾಣ ಉಳಿಸಿದವರಾಗಿದ್ದು ಇವರಿಗೆ ಪ್ರವಾಸಿ ಮಿತ್ರ ರಾಜೇಶ ಅಂಬಿಗ, ಲೈಫ್ ಗಾರ್ಡ್ ಮೇಲ್ವಿಚಾರಕ ರವಿ ನಾಯ್ಕ, ಗೋಕರ್ಣ ಓಂ ಬೀಚ್ ಟೂರಿಸ್ಟ್ ಬೋಟ್ ಅಸೋಷಿಯೇಷನ್ ಸಿಬ್ಬಂದಿಗಳಾದ ಭಗವಂತ ಬಿಜಾಪುರ, ಭಾಗಣ್ಣ ಬಿಜಾಪುರ, ದೀಪಕ ಗೌಡರವರಿಂದ ಕಾರ್ಯಾಚರಣೆಗೆ ಸಹಾಯ ಮಾಡಿದ್ದಾರೆ.