ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಕಳೆದ ೯೩ ವರ್ಷಗಳಿಂದ ಹಿಟ್ನಳ್ಳಿ ಕೃಷಿ ವಿವಿ ವಿನೂತನ ತಂತ್ರಜ್ಞಾನಗಳನ್ನು ಈ ಭಾಗದ ರೈತರಿಗೆ ನೀಡುತ್ತಿದೆ. ರೈತರ ಬದುಕು ಹಸನಾಗಿಸಲು ಪ್ರಯತ್ನಿಸುತ್ತಿರುವುದು ಸಂತಸದ ಸಂಗತಿ ಎಂದು ಧಾರವಾಡ ಕೃಷಿ ವಿವಿ ಕುಲಪತಿ ಡಾ.ಪಿ.ಎಲ್.ಪಾಟೀಲ ಹೇಳಿದರು.ನಗರದ ಹೊರವಲಯದಲ್ಲಿರುವ ಹಿಟ್ನಳ್ಳಿ ಕೃಷಿ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ೩ ದಿನಗಳ ಕೃಷಿ ಮೇಳ ಹಾಗೂ ಕೃಷಿ ಯಂತ್ರೋಪಕರಣ ಮಾರಾಟ ಮೇಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಿಟ್ನಳ್ಳಿ ಫಾರ್ಮ್ ಕೃಷಿ ಸಂಶೋಧನೆಗೆ ಹೆಸರುವಾಸಿಯಾಗಿದ್ದು, ಇಲ್ಲಿ ಹಂತ ಹಂತವಾಗಿ ನಡೆಯುತ್ತಿರುವ ಸಂಶೋಧನಾ ಚಟುವಟಿಕೆಗಳು, ಬೋಧನಾ ಕಾರ್ಯ ಹಾಗೂ ಕೃಷಿ ವಿಸ್ತರಣಾ ಚಟುವಟಿಕೆಗಳು ರೈತರಿಗೆ ಸಾಕಷ್ಟು ಅನುಕೂಲ ಕಲ್ಪಿಸಿವೆ. ಈ ಭಾಗದ ರೈತರಿಗೆ ನೀರಾವರಿ ಸೌಲಭ್ಯ ದೊರೆತಿವೆ ಎಂದರು.ರೈತರು ಆಧುನಿಕ ಕೃಷಿಯಲ್ಲಾಗುವ ಬದಲಾವಣೆ, ನವೀನ ಕೃಷಿ ಯಂತ್ರಗಳನ್ನು ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ನಿರೀಕ್ಷೆ ಮಾಡಬಹುದು. ಈ ಭಾಗದ ಅನೇಕ ರೈತರು ಕೃಷಿಯಲ್ಲಿ ಸ್ವಾವಲಂಬಿ ಬದುಕು ರೂಪಿಸಿಕೊಂಡಿದ್ದಾರೆ. ಅವರಂತೆ ಇನ್ನುಳಿದ ರೈತರುಸಹಿತ ಅಭಿವೃದ್ಧಿ ಹೊಂದಬೇಕು ಎಂದು ಸಲಹೆ ನೀಡಿದರು.
ಧಾರವಾಡ ಕೃಷಿ ವಿವಿ ಶಿಕ್ಷಣ ನಿರ್ದೇಶಕ ಡಾ.ವಿ.ಆರ್.ಕಿರೇಸೂರ ಮಾತನಾಡಿ, ರೈತರಿಗೆ ಏಕಕಾಲಕ್ಕೆ ಒಂದೇ ಸೂರಿನಡಿ ತಂತ್ರಜ್ಞಾನ ಮತ್ತು ಮಾಹಿತಿ ನೀಡುವಲ್ಲಿ ಕೃಷಿ ಮೇಳ ಒಂದು ಮಾರ್ಗವಾಗಿದೆ. ಇದರ ಸದುಪಯೋಗವನ್ನು ಎಲ್ಲ ರೈತರು ಪಡೆದುಕೊಳ್ಳಬೇಕು ಎಂದರು.ವಿಸ್ತರಣಾ ನಿರ್ದೇಶಕ ಡಾ.ಎಸ್.ಎಸ್.ಅಂಗಡಿ ಮಾತನಾಡಿ, ರೈತರು ಕೃಷಿ ಮೇಳದಲ್ಲಿ ಸಮಗ್ರ ಕೃಷಿ, ಮೌಲ್ಯವರ್ಧನೆ, ನೀರಿನ ಸದ್ಬಳಕೆ, ಮಣ್ಣಿನ ಫಲವತ್ತತೆ, ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭದಾಯಕ ಕೃಷಿ ಬಗ್ಗೆ ಹಾಗೂ ನವೀನ ತಾಂತ್ರಿಕತೆಗಳ ಬಗ್ಗೆ ಸಮಗ್ರ ಮಾಹಿತಿ ತೆಗೆದಕೊಂಡು ಯಶಸ್ವಿ ಕೃಷಿ ಮಾಡಿ ಉತ್ತಮ ಆದಾಯದ ಜೊತೆಗೆ ಇತರೇ ರೈತರಿಗೂ ಅಗತ್ಯ ಮಾಹಿತಿ ನೀಡಬಹುದು. ಇದರಿಂದ ರೈತ ಸಮುದಾಯ ಬರಗಾಲ, ಅತೀವೃಷ್ಟಿ ಏನೇ ಬಂದರೂ ಸಮಸ್ಯೆಗೆ ಒಳಗಾಗದೇ ನಿಶ್ಚಿತ ಆದಾಯ ಪಡೆಯಬಹುದು ಎಂದು ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕ ಡಾ.ರಾಜಶೇಖರ ವಿಲಿಯಮ್ಸ್ ಮಾತನಾಡಿ, ಕೃಷಿಯಲ್ಲಿ ನೂತನ ತಾಂತ್ರಿಕತೆಗಳು ನಿರಂತರವಾಗಿ ಹೊರಹೊಮ್ಮುತ್ತಿವೆ. ಕೃಷಿ ಇಲಾಖೆ ಕೃಷಿ ವಿವಿಯಿಂದ ಬಿಡುಗಡೆಗೊಳಿಸಲಾದ ತಂತ್ರಜ್ಞಾನಗಳನ್ನು ರೈತರಿಗೆ ತಲುಪಿಸಲು ಶ್ರಮಿಸಲಾಗುವುದು ಎಂದರು.ಸಹ ವಿಸ್ತರಣಾ ನಿರ್ದೇಶಕ ಡಾ.ಆರ್.ಬಿ.ಬೆಳ್ಳಿ ಮಾತನಾಡಿದರು. ಕೃಷಿಮೇಳ ಅಧ್ಯಕ್ಷ, ಡೀನ್ ಡಾ.ಎ.ಭೀಮಪ್ಪ, ಅಶ್ವಿನಿ ಬೆಳ್ಳುಂಡಗಿ, ಸಹ ಸಂಶೋಧನಾ ನಿರ್ದೇಶಕ ಡಾ.ಅಶೋಕ ಸಜ್ಜನ, ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಪ್ರಗತಿಪರ ರೈತ ಸಿದ್ದಪ್ಪ ಬೂಸಗೊಂಡ, ಡಾ.ಕೆ.ಬಿ.ಯಡಹಳ್ಳಿ, ಡಾ.ಶ್ರೀಪಾದ ಕುಲಕರ್ಣಿ, ಡಾ.ಸಿ.ಪಿ.ಚಂದ್ರಶೇಖರ, ಪ್ರಾಧ್ಯಾಪಕರಾದ ಡಾ.ಎಸ್.ಎಚ್.ಗೋಟ್ಯಾಳ, ಡಾ.ಮಿಲಿಂದ್ರ ಪೋತದಾರ, ಡಾ.ರಮೇಶ ಬೀರಗೆ, ಡಾ.ಎಸ್.ಜಿ.ಅಸ್ಕಿ, ಡಾ.ಎ.ಪಿ.ಬಿರಾದಾರ, ಡಾ.ಆರ್.ಬಿ.ಜೊಳ್ಳಿ, ಡಾ.ಶ್ರೀಕಾಂತ ಚವ್ಹಾಣ, ಡಾ.ಮಹಾಂತೇಶ ತೆಗ್ಗಿ, ಡಾ.ಸಿ.ವೇಣುಗೋಪಾಲ, ಡಾ.ಕಾಶಿಬಾಯಿ ಖೇಡಗಿ, ಡಾ.ಎನ್.ಡಿ.ಸುನಿತಾ, ಡಾ.ಎಚ್.ಅಶ್ವತ್ಥಾಮ್, ಡಾ.ಎಸ್.ಎಂ.ವಸ್ತ್ರದ, ಡಾ.ಜಗದೀಶ ಹೊಸಮನಿ, ಡಾ.ವಿಠ್ಠಲ ಮಂಗಿ, ಡಾ. ಸುದೀಪಕುಮಾರ, ಡಾ.ವಿದ್ಯಾವತಿ ಯಡಹಳ್ಳಿ, ಸಿದ್ದು ಇಂಗಳೇಶ್ವರ ಸೇರಿದಂತೆ ಮುಂತಾದವರು ಇದ್ದರು.