ಶಿಕ್ಷಣ ವ್ಯವಸ್ಥೆಯಲ್ಲಿ ಕಾಲಾನುಸಾರ ಅನೇಕ ಬದಲಾವಣೆಗಳಾಗಬೇಕು. ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನ, ಅಧ್ಯಯನಶೀಲತೆ, ಚಿಂತನಶೀಲತೆ ಹಾಗೂ ಸ್ವಾವಲಂಬಿ ಬದುಕಿಗೆ ಪೂರಕವಾಗುವಂತಹ ಕಾರ್ಯಾಗಾರ ಮತ್ತು ಸಂಶೋಧನಾ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು.

ಅಳ್ನಾವರ:

ಸಂಶೋಧನೆ ಕೇವಲ ಪದವಿ ಪಡೆಯುವ ಪ್ರಕ್ರಿಯೆಯಾಗದೆ, ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ, ಹೊಸ ಜ್ಞಾನ ಸೃಷ್ಟಿಸುವ ಹಾಗೂ ನಾಡಿನ ಕಲೆ, ಸಂಸ್ಕೃತಿ, ಇತಿಹಾಸ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಬೌದ್ಧಿಕ ಪ್ರಕ್ರಿಯೆಯಾಗಬೇಕು ಎಂದು ಹಿರಿಯ ಸಂಶೋಧಕ ಹಾಗೂ ಸಾಹಿತಿ ಡಾ. ವೀರಣ್ಣ ರಾಜೂರು ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶದ ವತಿಯಿಂದ ಆಯೋಜಿಸಿದ್ದ ಬಹುಶಿಸ್ತುಗಳಲ್ಲಿ ಸಂಶೋಧನಾ ವಿಧಾನಗಳು ಎಂಬ ವಿಷಯದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ವ್ಯವಸ್ಥೆಯಲ್ಲಿ ಕಾಲಾನುಸಾರ ಅನೇಕ ಬದಲಾವಣೆಗಳಾಗಬೇಕು. ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನ, ಅಧ್ಯಯನಶೀಲತೆ, ಚಿಂತನಶೀಲತೆ ಹಾಗೂ ಸ್ವಾವಲಂಬಿ ಬದುಕಿಗೆ ಪೂರಕವಾಗುವಂತಹ ಕಾರ್ಯಾಗಾರ ಮತ್ತು ಸಂಶೋಧನಾ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಕಳೆದ ಶತಮಾನದಲ್ಲಿ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಅಪಾರ ಬೆಳವಣಿಗೆಯಾಗಿದೆ. ಕಾಲಗರ್ಭದಲ್ಲಿ ಕಣ್ಮರೆಯಾಗಿರುವ ವಸ್ತು, ದಾಖಲೆ, ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಹುಡುಕಿ ಹೊರತರುವುದು ಅನ್ವೇಷಣೆ ಎನಿಸಿದರೆ, ಹೊಸದನ್ನು ಕಂಡುಹಿಡಿಯುವುದು ಆವಿಷ್ಕಾರ ಎನ್ನಲಾಗುತ್ತಿದೆ. ಇವೆರಡೂ ಬೌದ್ಧಿಕ ಪ್ರಕ್ರಿಯೆಗಳಾಗಿದ್ದು, ಸಂಶೋಧಕರು ಗತಕಾಲ ನಮಗೆ ಬಿಟ್ಟುಹೋದ ಮೂಲ ಸಾಮಗ್ರಿಗಳನ್ನು ಶೋಧಿಸಿ, ಪರಿಶೀಲಿಸಿ, ಕಾಲಕ್ರಮದ ಹಿನ್ನೆಲೆಯಲ್ಲಿ ಸತ್ಯವನ್ನು ಹೊರತರುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಸಂಶೋಧನೆ ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಿದ್ದು, ಹೊಸ ವಿಷಯಗಳು ದೊರೆತಂತೆ ಹೊಸ ಆಯಾಮಗಳು ತೆರೆದುಕೊಳ್ಳುತ್ತವೆ. ಸಂಶೋಧಕರು ಸತ್ಯ ನಿಷ್ಠೆಯಿಂದ ಕಾರ್ಯನಿರ್ವಹಿಸಿ, ಯಾವುದೇ ಪೂರ್ವಗ್ರಹಕ್ಕೆ ಒಳಗಾಗದೆ ಸಾಕ್ಷ್ಯಾಧಾರಗಳ ಆಧಾರದ ಮೇಲೆ ನಿರ್ಣಯ ಕೈಗೊಳ್ಳಬೇಕು. ಸಂಯಮ, ತಾಳ್ಮೆ, ಪ್ರಾಮಾಣಿಕತೆ, ವಿವೇಕ, ಪ್ರತಿಭೆ, ಪರಿಶ್ರಮ ಹಾಗೂ ಕ್ರಿಯಾಶೀಲತೆ ಸಂಶೋಧಕರ ಪ್ರಮುಖ ಗುಣಗಳಾಗಬೇಕು. ಬೌದ್ಧಿಕ ಶ್ರಮದ ಜತೆಗೆ ದೈಹಿಕ ಶ್ರಮಕ್ಕೂ ಮಹತ್ವ ನೀಡಬೇಕು ಎಂದು ಡಾ.ರಾಜೂರ ಸಲಹೆ ನೀಡಿದರು.

ಹಿರಿಯ ಸಂಶೋಧಕರು ಹಾಗೂ ಸಾಹಿತಿ ಡಾ. ವಿನಯಾ ನಾಯಕ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ವೈ.ಎಂ. ಭಜಂತ್ರಿ, ಇಬ್ರಾಹಿಂ ಸೌದಾಗರ, ಡಾ. ಈರಣ್ಣ ಭೂಸ್ತಳ್ಳಿ, ಡಾ. ಸಾಗರ ಮಾನಗಾಣೆ ಹಾಗೂ ಡಾ. ಉಮಾ ಪೂಜಾರ ಭಾಗವಹಿಸಿ ವಿವಿಧ ವಿಷಯಗಳ ಕುರಿತು ಮಾರ್ಗದರ್ಶನ ನೀಡಿದರು. ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ವತಿಯಿಂದ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಬೋಧಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಾಚಾರ್ಯ ಡಾ. ಎಂ.ಡಿ. ವಕ್ಕುಂದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಸುರೇಶ ದೊಡಮನಿ, ಪರವೀನಭಾನು ಶೇಖ, ಭೀಮನಗೌಡ ಪಾಟೀಲ, ಪದ್ಮಾವತಿ ಅನಸ್ಕರ ಇದ್ದರು.