ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಇಂದಿನ ವಿಷಯ ನಾಳೆ ಹಳೆಯದಾಗುತ್ತದೆ ಆದ್ದರಿಂದ ಸಂಶೋಧನಾ ವಿಷಯದ ಆಯ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ಹೇಳಿದರು.ನಗರದ ಸರಸ್ವತಿಪುರಂ ಜೆಎಸ್ಎಸ್ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಜೆಎಸ್ಎಸ್ ಸಂಶೋಧನಾ ಕೇಂದ್ರ ಮತ್ತು ಗ್ರಂಥಾಲಯ ವಿಭಾಗವು ಆಯೋಜಿಸಿದ್ದ ಸಂಶೋಧನಾ ವಿಧಾನಗಳು: ಪರಿಕರಗಳು ಮತ್ತು ತಂತ್ರಗಳ ಬಳಕೆಯಲ್ಲಿನ ಪ್ರವೃತ್ತಿಗಳು ವಿಷಯ ಕುರಿತು ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಪಂಚವು ವೇಗವಾಗಿ ಬೆಳೆಯುತ್ತಿದೆ. ಹಾಗೆಯೇ ಮಾಹಿತಿ ತಂತ್ರಜ್ಞಾನವೂ ಅಷ್ಟೇ ವೇಗವಾಗಿ ಬೆಳೆಯುತ್ತಿದೆ. ನಿನ್ನೆಯ ವಿಷಯ ಇಂದು ಹಳೆಯದು, ಸತ್ಯದ ಹುಡುಕಾಟವೇ ಸಂಶೋಧನೆಯ ಗುರಿಯಾಗಿರುವುದರಿಂದ ಯಾವುದೇ ತೊಂದರೆಗಳು ಎದುರಾದಲ್ಲಿ ಕುಗ್ಗದೆ ತಾಳ್ಮೆಯಿಂದ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕು. ಆ ಮೂಲಕ ಸಂಶೋಧಕರಿಗೆ ಆತ್ಮ ತೃಪ್ತಿಯ ಜೊತಗೆ ಸಂಸ್ಥೆಗೂ ಕೀರ್ತಿ ತಂದತಾಗುತ್ತದೆ. ಅಧ್ಯಾಪಕರಿಗೆ ಅಧ್ಯಯನ ಮತ್ತು ಸಂಶೋಧನೆ ಎರಡು ನಿರಂತರವಾಗಿರಬೇಕು ಎಂದು ಅವರು ಸಲಹೆ ನೀಡಿದರು.ಮೈಸೂರು ವಿವಿ ವಾಣಿಜ್ಯಶಾಸ್ತ್ರ ವಿಭಾಗದ ಡೀನ್ ಪ್ರೊ.ಬಿ. ಮಹಾದೇವಪ್ಪ ಮುಖ್ಯ ಅತಿಥಿಯಾಗಿ ಅವರು ಆಶಯನುಡಿಗಳನ್ನಾಡುತ್ತಾ ಸಂಶೋಧನೆಯ ಪ್ರಕ್ರಿಯೆಯ ಸಂದರ್ಭದಲ್ಲಿ ಪರಿಕರಗಳು ಬಹಳ ಮುಖ್ಯವಾದವು. ಸಂಶೋಧನೆಗೆ ನಾವಿನ್ಯತೆಯನ್ನು ತಂದುಕೊಟ್ಟದ್ದು ಪಾಶ್ಚಿಮಾತ್ಯ ಸಂಶೋಧನೆ. ಭಾರತೀಯ ಮತ್ತು ಪಾಶ್ಯಾತ್ಯ ಸಂಶೋಧನೆಗಳಿಗೆ ತಮ್ಮದೆ ಆದ ವಿಶಿಷ್ಟತೆ ಮತ್ತು ವಿಭಿನ್ನತೆಗಳಿವೆ. ಬರವಣಿಗೆಯ ಪರೀಕ್ಷೆಗಳಲ್ಲೂ ಮತ್ತು ಖಿ ಮಾದರಿಯ ಪರೀಕ್ಷೆಗಳಿವೆ. ಸಂಶೋಧನೆಯಲ್ಲಿ ದತ್ತಾಂಶ ಮತ್ತು ಆಕರಗಳ ಕಲ್ಪನೆಯ ಬಗ್ಗೆ ಎಚ್ಚರಿಕೆವಹಿಸಬೇಕು ಎಂದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಜೆಎಸ್ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಆರ್. ಮೂಗೇಶಪ್ಪ ಅವರು ಕ್ರಿಯಾತ್ಮಕ ಸಂಶೋಧನೆ ಮೊದಲು ಆರಂಭವಾದದ್ದು ಜರ್ಮನಿಯಲ್ಲಿ. 1992ರಲ್ಲಿ ಕಂಪ್ಯೂಟರ್ ಬಂದಾಗ ನಮ್ಮಲ್ಲಿ ಉದ್ಯೋಗ ಇಲ್ಲದಂತಾಗುತ್ತದೆ ಎಂಬ ಆತಂಕ ಇತ್ತು. ಆದರೆ ಪ್ರಸ್ತುತ ಇದರಿಂದ ಅನುಕೂಲವಾಗಿದೆ. ಹಾಗೆಯೇ ಈಗ ಕೃತಕ ಬುದ್ಧಿಮತ್ತೆ ಬಂದಿದೆ. ಈಗಲೂ ಆತಂಕ ಇದೆ. ಆದರೆ ಮುಂದೆ ಇದರಿಂದಲೂ ಅನುಕೂಲವಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.ಅಧ್ಯಾಪಕರು ಯಾವುದೇ ಪದವಿ ಹೊಂದಲು ವಯಸ್ಸು ಮುಖ್ಯವಾಗುವುದಿಲ್ಲ. ನಮ್ಮ ಸಂಸ್ಥೆ ಸಂಶೋಧನಾ ಕೇಂದ್ರಗಳನ್ನು ಹೊಂದಿದೆ. ಅಧ್ಯಾಪಕರು ಸಂಪೂರ್ಣವಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಪ್ರಾಂಶುಪಾಲ ಡಾ. ರೇಚಣ್ಣ, ಕಾರ್ಯಾಗಾರದ ಸಂಘಟನಾ ಕಾರ್ಯದರ್ಶಿ ಹಾಗೂ ಗ್ರಂಥಪಾಲಕ ಎಚ್.ಎನ್. ಮಂಜುನಾಥ್ ಇದ್ದರು.ಧಾತ್ರಿ ಮತ್ತು ತಂಡದವರು ಪ್ರಾರ್ಥಿಸಿದರು. ಪ್ರಾಂಶುಪಾಲ ಡಾ. ರೇಚಣ್ಣ ಸ್ವಾಗತಿಸಿದರು. ಪಿ. ವಸುಮತಿ ವಂದಿಸಿದರು. ಎಂ.ಬಿ. ಲಲಿತಾಂಬ ಕಾರ್ಯಕ್ರಮ ನಿರೂಪಿಸಿದರು.