ಸಂಶೋಧನೆಗೆ ಜ್ಞಾನ, ದೃಷ್ಟಿಕೋನ ಅವಶ್ಯ: ಡಾ. ಯಶವಂತಿ ಬೋರ್ಕರ್

| Published : Apr 21 2024, 02:21 AM IST / Updated: Apr 21 2024, 02:22 AM IST

ಸಂಶೋಧನೆಗೆ ಜ್ಞಾನ, ದೃಷ್ಟಿಕೋನ ಅವಶ್ಯ: ಡಾ. ಯಶವಂತಿ ಬೋರ್ಕರ್
Share this Article
  • FB
  • TW
  • Linkdin
  • Email

ಸಾರಾಂಶ

ಗೋಷ್ಠಿಗಳಲ್ಲಿ ‘ಸುಸ್ಥಿರ ಪರಿಸರ ನಿಯಮಗಳು: ಇಂದಿನ ಅವಶ್ಯಕತೆ’ ಕುರಿತು ಕರ್ನಾಟಕ ರಾಜ್ಯ ಮಾಲಿನ್ಯ ತಡೆ ಮಂಡಳಿಯ ಮಂಗಳೂರಿನ ಪರಿಸರ ನಿರೀಕ್ಷಕರಾದ ಡಾ. ಮಹೇಶ್ವರಿ ಸಿಂಗ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಸಂಶೋಧನೆಯಲ್ಲಿ ವ್ಯಕ್ತಿಗತ ನೆಲೆಗಳು ಮುಖ್ಯವಲ್ಲ. ಬದಲಾಗಿ ಜ್ಞಾನ ಮತ್ತು ದೃಷ್ಟಿಕೋನದ ಬಿತ್ತರ ಅವಶ್ಯ. ಆವಿಷ್ಕಾರ ಮತ್ತು ಮುಕ್ತತೆ ಜ್ಞಾನವನ್ನು ಹೆಚ್ಚಿಸುತ್ತದೆ ಎಂದು ಮಣಿಪಾಲ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ವಿಜ್ಞಾನಿ ಡಾ.ಯಶವಂತಿ ಬೋರ್ಕರ್ ಹೇಳಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ಆಳ್ವಾಸ್ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗವು ಹಳೇ ವಿದ್ಯಾರ್ಥಿಗಳ ಸಹಕಾರದಲ್ಲಿ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಂಡ ‘ಸುಸ್ಥಿರ ಭವಿಷ್ಯಕ್ಕಾಗಿ ಜೈವಿಕ ಆವಿಷ್ಕಾರ’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಶುಕ್ರವಾರ ಮಾತನಾಡಿದರು. ನಿರ್ದಿಷ್ಟವಾಗಿ ನಿರ್ಮಿತವಾಗಿರುವ ತಡೆಗಳನ್ನು ಮೀರಿ, ಅನುಭವದ ಜ್ಞಾನವನ್ನು ಪಡೆಯಬೇಕು. ಸಂಶೋಧನೆಯಲ್ಲಿ ತಾಳ್ಮೆ, ಒಪ್ಪಿಕೊಳ್ಳುವಿಕೆ, ಧ್ಯೇಯವನ್ನು ಹೊಂದುವುದು ಬಹುಮುಖ್ಯವಾಗುತ್ತದೆ ಎಂದರು.

ಕರ್ನಾಟಕ ರಾಜ್ಯ ಮಾಲಿನ್ಯ ತಡೆ ಮಂಡಳಿಯ ಮಂಗಳೂರಿನ ಪರಿಸರ ನಿರೀಕ್ಷಕರಾದ ಡಾ. ಮಹೇಶ್ವರಿ ಸಿಂಗ್ ಮಾತನಾಡಿ, ಪ್ರಾಕೃತಿಕ ಸುಸ್ಥಿರತೆಯಲ್ಲಿ ಜೀವ ವೈವಿಧ್ಯತೆಯನ್ನು ಕಾಪಾಡಲು ಹಲವಾರು ವಿಧಾನ ಮತ್ತು ಸಲಕರಣೆಯನ್ನು ಬಳಸಬೇಕು. ಇತ್ತೀಚಿನ ದಿನಗಳಲ್ಲಿ ಜಾಗತಿಕ ತಾಪಮಾನ ಏರಿಕೆಯು ಜೀವ ವೈವಿಧ್ಯತೆ ಅಸಮತೋಲನೆಗೆ ಮುಖ್ಯ ಕಾರಣವಾಗಿದೆ ಎಂದು ಹೇಳಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಇದ್ದರು. ವಿಭಾಗದ ಮುಖ್ಯಸ್ಥರಾದ ಡಾ ರಾಮ್ ಭಟ್ ಸ್ವಾಗತಿಸಿದರು. ವಿದ್ಯಾರ್ಥಿನಿ ರಶ್ಮಿ ನಾಯಕ್ ವಂದಿಸಿದರು. ಮೇಘ ಸಾವನ್ ನಿರೂಪಿಸಿದರು.

ಉದ್ಘಾಟನಾ ಕಾರ್ಯಕ್ರಮದ ಬಳಿಕ ನಡೆದ ಗೋಷ್ಠಿಗಳಲ್ಲಿ ‘ಸುಸ್ಥಿರ ಪರಿಸರ ನಿಯಮಗಳು: ಇಂದಿನ ಅವಶ್ಯಕತೆ’ ಕುರಿತು ಕರ್ನಾಟಕ ರಾಜ್ಯ ಮಾಲಿನ್ಯ ತಡೆ ಮಂಡಳಿಯ ಮಂಗಳೂರಿನ ಪರಿಸರ ನಿರೀಕ್ಷಕರಾದ ಡಾ. ಮಹೇಶ್ವರಿ ಸಿಂಗ್ ಮಾತನಾಡಿದರು. ಬಳಿಕ ‘ಹೃದಯದ ಜನ್ಮಜಾತ ರೋಗಗಳ ನಿರ್ವಹಣೆಯಲ್ಲಿ ಸುಸ್ಥಿರ ಅನುಸಂಧಾನ’ ಕುರಿತು ಮಣಿಪಾಲದ ಮಾಹೆಯ ಕಸ್ತೂರಬಾ ವೈದ್ಯಕೀಯ ಕಾಲೇಜಿನ ವಿಜ್ಞಾನಿ ಡಾ.ಯಶವಂತಿ ಬೋರ್ಕರ್ ಮಾತನಾಡಿದರು. ಅನಂತರ, ‘ಔಷಧಿ ಅನ್ವೇಷಣೆ ಮತ್ತು ಅಭಿವೃದ್ಧಿ’ ಸುಳ್ಯದ ಕೆವಿಜಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಔಷಧಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಸವಿನ್ ಸಿ. ವಿ’ ಉಪನ್ಯಾಸ ನೀಡಿದರು. ‘ಆಹಾರ ಮತ್ತು ಔಷಧ ಉದ್ಯಮದಲ್ಲಿ ಗುಣಮಟ್ಟದ ಭರವಸೆ ಮತ್ತು ಗುಣಮಟ್ಟದ ನಿಯಂತ್ರಣ’ ಕುರಿತು ಎಸ್‌ಎನ್‌ಎಸ್ ಸೊಲ್ಯೂಷನ್ಸ್ ತಾಂತ್ರಿಕ ಸಲಹೆಗಾರ ಶಿವದಾಸ್ ನಾಯಕ್ ಮಾತನಾಡಿದರು. ಆಳ್ವಾಸ್ ಕಾಲೇಜು ಸೇರಿದಂತೆ ಒಟ್ಟು ೧೨ ಕಾಲೇಜುಗಳು ವಿಚಾರಸಂಕಿರಣದಲ್ಲಿ ಪಾಲ್ಗೊಂಡಿದ್ದವು. ರಾಜ್ಯದ ವಿವಿಧ ಕಾಲೇಜುಗಳಿಂದ ಒಟ್ಟು ೧೬೫ ವಿದ್ಯಾರ್ಥಿಗಳು ಪಾಲ್ಗೊಂಡರು. ವಿದ್ಯಾರ್ಥಿಗಳಿಗೆ ಸಂಶೋಧನಾ ಪೋಸ್ಟರ್ ಪ್ರಸ್ತುತಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.