ಸಂಶೋಧನೆಗಳು ಗುಣಾತ್ಮಕತೆಯಿಂದ ಕೂಡಿರಲಿ

| Published : May 22 2025, 12:59 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಸಂಶೋಧನೆಗಳು ಗುಣಾತ್ಮಕ ಮೌಲ್ಯದಿಂದ ಕೂಡಿರಬೇಕು, ಆಗ ಮಾತ್ರ ಸಂಶೋಧನೆ ಸಾರ್ಥಕತೆಯಾಗುತ್ತದೆ ಎಂದು ವೇದಾಂತ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ.ಶಿವಕುಮಾರ ಮಠ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸಂಶೋಧನೆಗಳು ಗುಣಾತ್ಮಕ ಮೌಲ್ಯದಿಂದ ಕೂಡಿರಬೇಕು, ಆಗ ಮಾತ್ರ ಸಂಶೋಧನೆ ಸಾರ್ಥಕತೆಯಾಗುತ್ತದೆ ಎಂದು ವೇದಾಂತ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ.ಶಿವಕುಮಾರ ಮಠ ಹೇಳಿದರು.

ನಗರದ ಎ.ಎ.ಪಾಟೀಲ ಕಾಮರ್ಸ್‌ ಕಾಲೇಜಿನಲ್ಲಿ ಗ್ಲೋಬಲ್ ಟ್ರೆಂಡ್ಸ್ ಇನ ಕಾಮರ್ಸ -ಮ್ಯಾನೇಜಮೆಂಟ್ : ನೇವಿಗೇಟಿಂಗ್ ಅಪಾರ್‍ಚುನಿಟಿಸ್ ಆಂಡ್ ಚಾಲೆಂಜ್ಸ್ ವಿಷಯಾಧಾರಿತ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಾಣಿಜ್ಯ ಕ್ಷೇತ್ರ ಶೀಘ್ರವಾಗಿ ಬದಲಾವಣೆಯತ್ತ ಸಾಗುತ್ತಿದ್ದು, ಜಾಗತಿಕ ಮಟ್ಟದಲ್ಲಾಗುತ್ತಿರುವ ನಾವೀನ್ಯತೆ, ಅವಿಷ್ಕಾರ, ಅನ್ವೇಷಣೆ ಮತ್ತು ಬದಲಾಗುತ್ತಿರುವ ಪ್ರವೃತ್ತಿಗಳು ಹೆಚ್ಚು ಅವಕಾಶಗಳನ್ನು ಒದಗಿಸುವ ಜತೆಗೆ ಸವಾಲುಗಳನ್ನು ತಂದೊಡ್ಡಿದೆ ಎಂದರು.

ವ್ಯವಹಾರಿಕ ಪರಿಸರ, ಗ್ರಾಹಕ ವರ್ತನೆ, ಪೈಪೋಟಿಯ ಸ್ವರೂಪ, ಮಾರುಕಟ್ಟೆಯ ಮಿಶ್ರಣ ತಂತ್ರಗಳು ಹಾಗೂ ಇನ್ನಿತರ ಅನಿಯಂತ್ರಿತ ಅಂಶಗಳು ಅಮೂಲಾಗ್ರ ಬದಲಾವಣೆಗೆ ಕಾರಣವಾಗುತ್ತಿದೆ. ವಿಶ್ವದಲ್ಲಿಯೇ ಭಾರತೀಯ ಮಾರುಕಟ್ಟೆಯು ಅತಿ ದೊಡ್ಡ ಮತ್ತು ಬದಲಾವಣೆಯ ಪ್ರವೃತ್ತಿ ಹೊಂದಿದ್ದು, ಇದು ವಿಶ್ವದ ಮಾರುಕಟ್ಟೆ ಮೇಲೆ ವ್ಯಕ್ತಿರಿಕ್ತ ಪರಿಣಾಮ ಬೀರುತ್ತಿದೆ. ಪ್ರಸ್ತುತ ಯುದ್ಧದ ಈ ಕಾಲಘಟ್ದದಲ್ಲಿ ವಾಣಿಜ್ಯ, ವ್ಯಾಪಾರ, ವಿದೇಶ ವ್ಯಾಪಾರ, ಕೈಗಾರಿಕೆ ಮತ್ತು ಸೇವಾ ರಂಗಗಳ ಮೇಲೆ ಗಾಢ ಪರಿಣಾಮ ಬೀರುತ್ತದೆ. ಅದಕ್ಕಾಗಿ ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ಬದಲಾವಣೆಗೆ ತಕ್ಕಂತೆ ಹೊಂದಿಕೊಂಡು ಮುನ್ನಡೆದರೆ ಅವಕಾಶಗಳು ಸಿಗಲಿವೆ ಎಂದು ತಿಳಿಸಿದರು.ಪ್ರಾಂಶುಪಾಲ ಪ್ರೊ.ಬಿ.ಎಸ್.ಬೆಳಗಲಿ ಮಾತನಾಡಿ, ಸಂಶೋಧನಾ ಆಸಕ್ತಿ, ಅಭಿರುಚಿ ಮತ್ತು ಹವ್ಯಾಸವನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಬೆಳೆಸಿಕೊಂಡು ಮುಂದೆ ಉನ್ನತ ವ್ಯಾಸಂಗ ಮಾಡುವ ಸಂದರ್ಭದಲ್ಲಿ ಸಂಶೋಧನಾ ಜ್ಞಾನ ಪ್ರಯೋಜನಕಾರಿಯಾಗಲಿದೆ ಎಂದರು.

ಪ್ರೊ.ಎಂ.ಎಸ್.ಖೊದ್ನಾಪೂರ ಸಂಶೋಧನಾ ಲೇಖನ ಮಂಡನೆಯ ಗೋಷ್ಠಿಯ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಅತ್ಯುತ್ತಮ ಸಂಶೋಧನೆ ಮಂಡಿಸಿದವರಿಗೆ ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಡಾ.ಭಾರತಿ ಮಠ, ಪ್ರೊ.ಅನ್ನಪೂರ್ಣ ತುಪ್ಪದ, ಪ್ರೊ.ಶಾಂವೀರ ಮಠ, ಪ್ರೊ.ದಾನಮ್ಮ, ಪ್ರೊ.ಎಸ್.ಡಿ.ಶಿಂಘೆ, ಪ್ರೊ. ವಿಜಯ ತಳವಾರ ಉಪಸ್ಥಿತರಿದ್ದರು.