ಮುಸ್ಲಿಮರ ಮೀಸಲಾತಿ: ಸಿದ್ದರಾಮಯ್ಯರಿಂದ ಸುಳ್ಳು

| Published : Apr 27 2024, 01:17 AM IST

ಸಾರಾಂಶ

ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿ ಇಲ್ಲ. ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಇದನ್ನು ಸ್ಪಷ್ಟವಾಗಿ ಹೇಳಿದ್ದಾರೆ‌. ಅದಾಗ್ಯೂ ಸುಮಾರು 23, 24 ಮುಸ್ಲಿಂ ಸಮುದಾಯಗಳು 2ಎ ಮೀಸಲಾತಿ ಪಟ್ಟಿಯಲ್ಲಿವೆ.

ಹುಬ್ಬಳ್ಳಿ:

ಮುಸ್ಲಿಂರ ಮೀಸಲಾತಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ಅದರಲ್ಲೂ ಕೋರ್ಟ್ ಕಾರ್ಯಕಲಾಪದ ಬಗ್ಗೆ ಸುಳ್ಳು ಹೇಳುವುದು ಬಹಳ ತಪ್ಪು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಕೋರ್ಟ್‌ನಲ್ಲಿ ಮುಸ್ಲಿಂ ಮೀಸಲಾತಿ ರದ್ದು ಮಾಡುತ್ತೇವೆ. ಮುಂದುವರಿಸುತ್ತೇವೆ ಎಂದು ಹೇಳಿಲ್ಲ. ನಾವು ಆದೇಶ ಮಾಡಿದ್ದನ್ನು ಸಿದ್ದರಾಮಯ್ಯ ಅವರ ಶಿಷ್ಯ ರವಿವರ್ಮಕುಮಾರ್ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದರು. ಇದರ ಹಿಂದೆ ಸಿದ್ದರಾಮಯ್ಯ ಇದ್ದಾರೆ. ಅದಾದ ಮೇಲೆ ಕೋರ್ಟ್ ಪ್ರೊಸೆಡಿಂಗ್‌ನಲ್ಲಿ ಸಮಯ ಬೇಕು ಎಂದು ಕೇಳಿತು. ಅದಕ್ಕೆ ನಾವು ಒಪ್ಪಿಕೊಂಡಿದ್ದೇವೆ. ನಾವು ನಮ್ಮ ಕೇಸ್ ವಾದ ಮಾಡುತ್ತೇವೆ ಎಂದು ಹೇಳಿದ್ದೇವು. ನಾವು ಕೇಸ್ ಹಿಂಪಡೆದಿಲ್ಲ. ಮುಂದಿನ ವಿಚಾರಣೆ ಆಗುವವರೆಗೂ ನಾವು ಜಾರಿ ಮಾಡುವುದಿಲ್ಲ ಎಂದು ಹೇಳಿದ್ದೆವು. ನಮ್ಮ ನಿಲುವು ಅದೇ ಇದೆ. ಇಂದಿನ ಕಾಂಗ್ರೆಸ್‌ ಸರ್ಕಾರ ಅದನ್ನು ಮುಂದುವರಿಸುತ್ತಾ ಎನ್ನುವ ಯಕ್ಷ ಪ್ರಶ್ನೆ ಇದೆ. ಅವತ್ತೇ ಕಾಂಗ್ರೆಸ್ ಅದನ್ನು ವಿರೋಧ ಮಾಡಿತ್ತು ಎಂದರು.

ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿ ಇಲ್ಲ. ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಇದನ್ನು ಸ್ಪಷ್ಟವಾಗಿ ಹೇಳಿದ್ದಾರೆ‌. ಅದಾಗ್ಯೂ ಸುಮಾರು 23, 24 ಮುಸ್ಲಿಂ ಸಮುದಾಯಗಳು 2ಎ ಮೀಸಲಾತಿ ಪಟ್ಟಿಯಲ್ಲಿವೆ. ಇದೀಗ ಕಾಂಗ್ರೆಸ್ ಸರ್ಕಾರ ಮೈ ಮೇಲೆ ಬಂದಾಗ ಈ ತರಹ ವ್ಯಾಖ್ಯಾನ ಮಾಡುತ್ತಿದೆ ಎಂದರು.