ಕೊಪ್ಪಳ: ಪರಿಶಿಷ್ಟ ಪಂಗಡ (ಎಸ್ಟಿ) ಸಮುದಾಯಕ್ಕೆ ನೀಡಲಾಗಿದ್ದ ಶೇ.7ರ ಮೀಸಲಾತಿ ಮರು ಜಾರಿಗೊಳಿಸುವಂತೆ ಆಗ್ರಹಿಸಿ ಬಿಜೆಪಿ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು. ಮೀಸಲಾತಿ ಜಾರಿಯಾಗುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು.
ನಗರದ ಶಿವಶಾಂತ ಮಂಗಲ ಭವನದಲ್ಲಿ ಭಾನುವಾರ ಬಿಜೆಪಿ ಎಸ್ಟಿ ಮೋರ್ಚಾದಿಂದ ಆಯೋಜಿಸಿದ್ದ ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ನಾವು ಮೀಸಲಾತಿ ಭಿಕ್ಷೆಯಾಗಿ ಕೇಳುತ್ತಿಲ್ಲ. ಸಂವಿಧಾನ ನೀಡಿರುವ ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ನಮ್ಮ ಸಮುದಾಯದ ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದರು.ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಸ್ಟಿ ಮೀಸಲಾತಿ ಶೇ.7ಕ್ಕೆ ಹೆಚ್ಚಿಸಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅದನ್ನು ಕಡಿತಗೊಳಿಸುವ ಮೂಲಕ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಶತಮಾನಗಳಿಂದ ಸಾಮಾಜಿಕ ಹಾಗೂ ಆರ್ಥಿಕವಾಗಿ ತುಳಿತಕ್ಕೊಳಗಾದ ಸಮುದಾಯಗಳಿಗೆ ನ್ಯಾಯ ದೊರಕಿಸಲು ಹೋರಾಡಿ ಸಂವಿಧಾನದ ಮೂಲಕ ಹಕ್ಕು ಕಲ್ಪಿಸಿದ್ದಾರೆ. ರಾಜಕೀಯ ಪ್ರಾತಿನಿಧ್ಯದ ಜತೆಗೆ ಶಿಕ್ಷಣ, ಉದ್ಯೋಗ ಮತ್ತು ಆರ್ಥಿಕ ಕ್ಷೇತ್ರಗಳಲ್ಲೂ ಪ್ರಾತಿನಿಧ್ಯ ದೊರೆಯಬೇಕು. ಸಮುದಾಯದ ಮಕ್ಕಳು ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸುವಂತಾಗಬೇಕು ಎಂಬುದು ಅಂಬೇಡ್ಕರ್ ಆಶಯವಾಗಿತ್ತು ಎಂದರು.ನಾನು ಶಾಸಕನಾಗಿ ಸೋತಿರಬಹುದು. ಆದರೆ ಸಮಾಜದ ಜನರ ಮನಸ್ಸಿನಲ್ಲಿ ಸೋತಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಸರ್ಕಾರದ ಖಜಾನೆ ಖಾಲಿಯಾಗಿದ್ದು ಎಸ್ಟಿ ಸಮುದಾಯಕ್ಕೆ ಅಗತ್ಯ ಅನುದಾನ ನೀಡುತ್ತಿಲ್ಲ ಎಂದು ಆರೋಪಿಸಿದರು.
ವಿಪ ಸದಸ್ಯೆ ಹೇಮಲತಾ ನಾಯಕ್ ಮಾತನಾಡಿ, ಪರಿಶಿಷ್ಟ ಪಂಗಡ ಸಮುದಾಯ ಇಂದಿಗೂ ಶೋಷಣೆಗೆ ಒಳಗಾಗಿದೆ. ಸರ್ಕಾರದಿಂದ ದೊರೆಯಬೇಕಾದ ಮೂಲಸೌಲಭ್ಯ ಸಮರ್ಪಕವಾಗಿ ಸಿಗುತ್ತಿಲ್ಲ. ಅಂಬೇಡ್ಕರ್ ಜಾತಿ ತಾರತಮ್ಯದ ವಿರುದ್ಧ ಹೋರಾಡಿ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಬಲ ತುಂಬಿದ್ದಾರೆ ಎಂದರು.
ಹಿಂದಿನ ಬಿಜೆಪಿ ಸರ್ಕಾರ ಎಸ್ಟಿ ಮೀಸಲಾತಿ ಶೇ.7ಕ್ಕೆ ಹೆಚ್ಚಿಸಿತ್ತು. ಆದರೆ ಪ್ರಸ್ತುತ ಸರ್ಕಾರ ಅದನ್ನು ಶೇ. 3ಕ್ಕೆ ಸೀಮಿತಗೊಳಿಸಿದೆ. ಶೇ.7ರ ಮೀಸಲಾತಿ ಜಾರಿಯಾದರೆ ಪ್ರಸ್ತುತ ನೇಮಕಾತಿಯಲ್ಲಿ ಎಸ್ಟಿ ಸಮುದಾಯಕ್ಕೆ ಸುಮಾರು 16 ಸಾವಿರ ಹುದ್ದೆ ದೊರೆಯಲಿವೆ ಎಂದು ಹೇಳಿದರು.
ನಮಗೆ ದಾನವಾಗಿ ಮೀಸಲಾತಿ ಬೇಡ. ಸಂವಿಧಾನಬದ್ಧವಾಗಿ ನಮ್ಮ ಹಕ್ಕಿನ ಮೀಸಲಾತಿ ಬೇಕು. ಸರ್ಕಾರ ಕೂಡಲೇ ಈ ವಿಚಾರದಲ್ಲಿ ಸ್ಪಷ್ಟ ನಿಲುವು ಪ್ರಕಟಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಮಾಜಿ ಸಚಿವ ರಾಜುಗೌಡ ಮಾತನಾಡಿ, ಸಮಾಜಕ್ಕೆ ಅನ್ಯಾಯವಾದಾಗಲೆಲ್ಲ ಹೋರಾಟ ನಡೆಸಲಾಗಿದೆ. ಮೀಸಲಾತಿ ವಿಚಾರದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟವಾಗಿ ಮಾತನಾಡಬೇಕು. ಎಸ್ಟಿ ಸಮುದಾಯದ ಮಕ್ಕಳ ಭವಿಷ್ಯಕ್ಕಾಗಿ ಸದನದಲ್ಲಿ ಧ್ವನಿ ಎತ್ತಬೇಕು. ಕಾಂಗ್ರೆಸ್ಸಿನಲ್ಲಿರುವ ಎಸ್ಟಿ ಸಮುದಾಯದ ಸಚಿವರು ಸರ್ಕಾರದ ವಿರುದ್ಧ ಧ್ವನಿ ಎತ್ತಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ ಹೊರಬರಲಿ ಎಂದು ಆಗ್ರಹಿಸಿದರು.
ಮಾಜಿ ಶಾಸಕ ಸೋಮಲಿಂಗಪ್ಪ ಮಾತನಾಡಿ, ಎಸ್ಟಿ ಸಮುದಾಯದ ವಿಚಾರದಲ್ಲಿ ಸರ್ಕಾರ ಬೇಕಾಬಿಟ್ಟಿಯಾಗಿ ನಡೆದುಕೊಳ್ಳುತ್ತಿದೆ. ವಾಲ್ಮೀಕಿ ಸಮಾಜದ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ. ಮೀಸಲಾತಿಗಾಗಿ ಹೋರಾಟ ಮುಂದುವರಿಯಲಿದ್ದು, ಸರ್ಕಾರದ ಧೋರಣೆ ಬದಲಾಗದಿದ್ದರೆ 10 ಲಕ್ಷ ಜನರನ್ನು ಸೇರಿಸಿ ವಿಧಾನಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕಾಗಿ ಆಂತರಿಕ ಸಂಘರ್ಷದಲ್ಲಿ ತೊಡಗಿದೆ. ಆದರೆ ಎಸ್ಟಿ ಸಮುದಾಯದ ಸಮಸ್ಯೆಗಳ ಕುರಿತು ಧ್ವನಿ ಎತ್ತುತ್ತಿಲ್ಲ. ಮೀಸಲಾತಿ ಕುರಿತ ಪ್ರಕರಣ ನ್ಯಾಯಾಲಯದಲ್ಲಿದ್ದು, ಸರ್ಕಾರ ಕಾನೂನು ಹೋರಾಟ ಬಲಪಡಿಸಿ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದರು.
ಸಮಾವೇಶದಲ್ಲಿ ವಾದಿರಾಜ್ ಎಸ್ಟಿ ಮೀಸಲಾತಿಗೆ ಸಂಬಂಧಿಸಿದಂತೆ ಪಿಪಿಟಿ ಮೂಲಕ ಮಾಹಿತಿ ನೀಡಿದರು.ಮಾಜಿ ಸಂಸದ ಸಣ್ಣ ಫಕೀರಪ್ಪ, ಸಿದ್ದರಾಜು, ಅಪ್ಪಣ್ಣ, ಎಸ್.ವಿ. ರಾಮಚಂದ್ರಪ್ಪ, ನವೀನ್ ಗುಳಗಣ್ಣವರ, ನಾಗರಾಜ ಬಿಲ್ಗಾರ್, ಶಿವಕುಮಾರ್, ಓಬಳೇಶ, ರಾಜು ನಾಯ್ಕರ್, ರಮೇಶ ನಾಡಿಗೇರ, ರೂಪಾ ನಾಯಕ್, ಗೀತಾ ಮುತ್ತಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ₹187 ಕೋಟಿ ಹಗರಣದ ಹಣ ಚುನಾವಣೆಗೆ ಬಳಕೆಯಾಗಿದೆ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, 2028ರ ವಿಧಾನಸಭಾ ಚುನಾವಣೆಯಲ್ಲಿ ಜನತೆ ಬಿಜೆಪಿ ಬೆಂಬಲಿಸಬೇಕು ಎಂದು ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ತಿಳಿಸಿದ್ದಾರೆ.ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಬಿಜೆಪಿ ಸರ್ಕಾರ ಕ್ರಮ ಕೈಗೊಂಡಿತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಮೀಸಲಾತಿ ವಿಚಾರದಲ್ಲಿ ಅನ್ಯಾಯ ಮಾಡುತ್ತಿದೆ. ನೇಮಕಾತಿಯಲ್ಲೂ ಎಸ್ಟಿ ಸಮುದಾಯಕ್ಕೆ ತಾರತಮ್ಯವಾಗುತ್ತಿದೆ ಎಂದು ಮಾಜಿ ಸಚಿವ ಶಿವನಗೌಡ ನಾಯಕ್ ತಿಳಿಸಿದ್ದಾರೆ.
ಗವಿಸಿದ್ದಪ್ಪ ನಾಯಕ್ ಕುಟುಂಬಕ್ಕೆ ₹12 ಲಕ್ಷ ನೆರವು:ಕಳೆದ ವರ್ಷ ಕೊಪ್ಪಳದಲ್ಲಿ ಕೊಲೆಯಾದ ಗವಿಸಿದ್ದಪ್ಪ ನಾಯಕ್ ಅವರ ಕುಟುಂಬಕ್ಕೆ ಬಿಜೆಪಿ ಮುಖಂಡರು ಒಟ್ಟಾಗಿ ಸಂಗ್ರಹಿಸಿದ ₹12 ಲಕ್ಷ ಮೊತ್ತದ ಚೆಕ್ ಅನ್ನು ಹಸ್ತಾಂತರಿಸಿದರು. ಕುಟುಂಬದ ಪರವಾಗಿ ಸದಾ ನಿಲ್ಲುವುದಾಗಿ ಹಾಗೂ ನ್ಯಾಯಕ್ಕಾಗಿ ಹೋರಾಟ ನಡೆಸುವುದಾಗಿ ಮುಖಂಡರು ಭರವಸೆ ನೀಡಿದರು.
ನೀಟ್ ಸಾಧಕ ಪುಟ್ಟರಾಜುಗೆ ಸನ್ಮಾನ:ದೇಶದ ನೀಟ್ ಪರೀಕ್ಷೆಯಲ್ಲಿ ಎಸ್ಟಿ ವಿಭಾಗದಲ್ಲಿ 694ನೇ ರ್ಯಾಂಕ್ ಪಡೆದ ತಾಲೂಕಿನ ಹನುಮನಹಳ್ಳಿ ಗ್ರಾಮದ ಪುಟ್ಟರಾಜು ಭೀಮನೂರು ಅವರನ್ನು ಬಿಜೆಪಿ ಎಸ್ಟಿ ಮೋರ್ಚಾ ವತಿಯಿಂದ ಸನ್ಮಾನಿಸಲಾಯಿತು. ಇದೇ ವೇಳೆ ಅವರಿಗೆ ಆರ್ಥಿಕ ನೆರವು ನೀಡಲಾಯಿತು.
