ಸಾರಾಂಶ
ಮೀಸಲಾತಿ ಕುರಿತು ರಾಹುಲ್ ಗಾಂಧಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ರಾಹುಲ್ ಗಾಂಧಿ ಒಬ್ಬ ಅಪ್ರಬುದ್ಧ ವ್ಯಕ್ತಿಯಾಗಿದ್ದು, ದೇಶದ ಸಂಪತ್ತು ಲೂಟಿಗೆ ನಿಂತಿದ್ದಾರೆ ಎಂದು ಬಿಜೆಪಿ ಮಂಡಲದ ಎಸ್‌ಸಿ ಮೋರ್ಚಾದ ಅಧ್ಯಕ್ಷ ಸಿದ್ದು ಮಣ್ಣಿನವರ್ ಆಕ್ರೋಶ ವ್ಯಕ್ತಪಡಿಸಿದರು.
ಕುಕನೂರು: ಎಸ್‌ಸಿ-ಎಸ್‌ಟಿ ಮೀಸಲಾತಿ ಕಾಂಗ್ರೆಸ್ ನೀಡಿರುವ ಭಿಕ್ಷೆಯಲ್ಲ, ಅದು ನಮ್ಮ ಹಕ್ಕು. ಮೀಸಲಾತಿ ತೆಗೆಯುವುದಕ್ಕೆ ಕೈ ಹಾಕಿದರೆ ರಕ್ತಪಾತ ಆಗುತ್ತದೆ ಎಂದು ಬಿಜೆಪಿ ಮಂಡಲದ ಎಸ್‌ಸಿ ಮೋರ್ಚಾದ ಅಧ್ಯಕ್ಷ ಸಿದ್ದು ಮಣ್ಣಿನವರ್ ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ಕುರಿತು ರಾಹುಲ್ ಗಾಂಧಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ರಾಹುಲ್ ಗಾಂಧಿ ಒಬ್ಬ ಅಪ್ರಬುದ್ಧ ವ್ಯಕ್ತಿಯಾಗಿದ್ದು, ದೇಶದ ಸಂಪತ್ತು ಲೂಟಿಗೆ ನಿಂತಿದ್ದಾರೆ. ವಿದೇಶದಲ್ಲಿ ಭಾರತದ ಬಗ್ಗೆ ಅವಹೇಳನಕಾರಿ ಮಾತನಾಡುತ್ತಿದ್ದಾರೆ. ಅವರನ್ನು ಸಂಸದ ಸ್ಥಾನದಿಂದ ವಜಾಗೊಳಿಸಬೇಕು. ಕೂಡಲೇ ಅವರು ರಾಷ್ಟ್ರದ ಜನರ ಕ್ಷಮೆಯಾಚನೆ ಮಾಡಬೇಕು ಎಂದು ಆಗ್ರಹಿಸಿದರು.ರಾಹುಲ್ ಗಾಂಧಿ ಹೇಳಿಕೆ ಖಂಡಿಸಿ ಸೆ. 14ರಂದು ಯಲಬುರ್ಗಾ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದರು.
ಬಿಜೆಪಿ ಎಸ್ಟಿ ಮೋರ್ಚಾದ ಅಧ್ಯಕ್ಷ ದ್ಯಾಮಣ್ಣ ಉಚ್ಚಲಕುಂಟೆ ಮಾತನಾಡಿ, ರಾಹುಲ್ ಗಾಂಧಿ ಅವರಿಗೆ ಮೀಸಲಾತಿ ತೆಗೆಯುವ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಎಸ್‌ಸಿ-ಎಸ್‌ಟಿ ಜನರನ್ನು ವೋಟ್ ಬ್ಯಾಂಕ್ ಮಾಡಿಕೊಂಡು ರಾಹುಲ್ ಗಾಂಧಿ ಗೆದ್ದಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹ ರಾಹುಲ್ ಗಾಂಧಿ ಹೇಳಿಕೆ ಖಂಡಿಸಿಲ್ಲ. ಇದು ಖಂಡನೀಯ ಎಂದರು.ಬಿಜೆಪಿ ಮುಖಂಡ ನಾಗಪ್ಪ ಸಾಲ್ಮನಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸಹ ಕಾಂಗ್ರೆಸ್ ಕೆಟ್ಟದಾಗಿ ನಡೆಸಿಕೊಂಡಿತು. ಅಂಬೇಡ್ಕರ್ ಅವರು ಕಾಂಗ್ರೆಸ್ ಕಿರುಕುಳಕ್ಕೆ ತಾಳಲಾರದೆ ಆರ್‌ಪಿಐ ಎಂಬ ಹೊಸ ಪಕ್ಷ ಕಟ್ಟಿ ಎಸ್‌ಸಿ-ಎಸ್‌ಟಿ ಜನಾಂಗದ ಅಭಿವೃದ್ಧಿಗೆ ಶ್ರಮಿಸಿದರು ಎಂದರು.
ಯಲಬುರ್ಗಾ ಬಿಜೆಪಿ ಮಂಡಲದ ಅಧ್ಯಕ್ಷ ಮಾರುತಿ ಹೊಸಮನಿ, ಮಾದಿಗ ದಂಡೋರ ಸಮಿತಿ ಜಿಲ್ಲಾಧ್ಯಕ್ಷ ವಸಂತ ಭಾವಿಮನಿ, ಬಿಜೆಪಿ ಯಲಬುರ್ಗಾ ಮಂಡಲ ಕಾರ್ಯದರ್ಶಿ ಪ್ರಕಾಶ ತಹಸೀಲ್ದಾರ, ಪ್ರಮುಖರಾದ ಸುಭಾಷ ಪೂಜಾರ, ರಮೇಶ ಶಾಸ್ತ್ರಿ, ಶರಣಪ್ಪ ಕಾಳಿ, ಪಕ್ಕಣ್ಣ ಸಾಲ್ಮನಿ, ಲಕ್ಷ್ಮಣ ಕಾಳಿ, ಮುತ್ತು ತಳವಾರ, ನಾಗರಾಜ ನಾಯಕ, ಶಂಕರ ಮ್ಯಾದನೇರಿ, ದೇವರಾಜ ಮನ್ನಾಪುರ, ಜಗದೀಶ ಸೂಡಿ, ದುಡುಗಪ್ಪ ನಡುಲಮನಿ, ಬಸವರಾಜ ಭಾವಿಮನಿ, ಕನಕಪ್ಪ ಬ್ಯಾಡರ, ಲಿಂಗರಾಜ ಗುಳೆ, ಮಾರುತಿ ವಂಕಲಕುಂಟೆ, ಪರಶುರಾಮ ಶಿಡ್ಲಭಾವಿ ಇದ್ದರು.