ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಭಾರತ ಅಭಿವೃದ್ಧಿಯಲ್ಲಿ ಹಿಂದುಳಿಯಲು ಜಾತಿ ಪದ್ಧತಿಯೇ ಕಾರಣ. ಅಂಬೇಡ್ಕರ್ ನೀಡಿದ ಸಂವಿಧಾನದಿಂದ ನಮಗೆಲ್ಲ ಮೀಸಲಾತಿ ಎಂಬುದು ದೊರೆತಿದೆ. ಆದ್ದರಿಂದಲೇ ಹಿಂದುಳಿದವರು ಮತ್ತು ದಲಿತರು ಮೇಲೆ ಬರಲು ಸಾಧ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.ನಗರ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ-2025 ಈಡೇರುವುದೇ ಸರ್ವ ಸಮುದಾಯಗಳ ನಿರೀಕ್ಷೆ ವಿಚಾರಗೋಷ್ಠಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಹುಟ್ಟಿನಿಂದಲೇ ಯೋಗ್ಯತೆ ಅಳೆಯುವ ಮತ್ತು ತಾರತಮ್ಯ ಮಾಡುವ ವ್ಯವಸ್ಥೆ ನಮ್ಮಲ್ಲಿದೆ. ಜಾತಿ ಹೋಗಲಾಡಿಸಲು ಮೀಸಲಾತಿ ಕೂಡ ಒಂದು ಕ್ರಮ. ಶೋಷಿತರಿಗೆ, ಹಿಂದುಳಿದವರಿಗೆ ಬಲ ತುಂಬಬೇಕು ಎಂದರೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಅಗತ್ಯ. ಎಲ್ಲ ಸಮುದಾಯಗಳನ್ನು ಒಳಗೊಂಡ ಸಮೀಕ್ಷೆ ಇದಾಗಿದೆ. ಈ ಸಮೀಕ್ಷೆ ಕುರಿತಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಸಮೀಕ್ಷೆಯಲ್ಲಿ ಏನೇ ದೋಷ ಕಂಡು ಬಂದರೂ ಅದನ್ನು ಸರಿಮಾಡಿಕೊಂಡು ಮುಂದೆ ಹೋಗುವ ಕೆಲಸ ಮಾಡಲಾಗುತ್ತಿದೆ. ಇದನ್ನು ಹಿಂದುಳಿದ ವರ್ಗಗಳು ಅರ್ಥ ಮಾಡಿಕೊಳ್ಳಬೇಕು. ಬುದ್ಧ ಬಸವ, ಅಂಬೇಡ್ಕರ್ ಸಂವಿಧಾನದಲ್ಲಿ ನಂಬಿಕೆ ಇಟ್ಟಿರುವವರು ಎಲ್ಲರೂ ಈ ಸಮೀಕ್ಷೆಯನ್ನು ಬೆಂಬಲಿಸಬೇಕು ಎಂದರು.ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್.ರಾಜಣ್ಣನವರು ಮಾತನಾಡಿ, ನಮ್ಮವರನ್ನು ನಾವು ಗೌರವಿಸುವ ಕೆಲಸವನ್ನು ಮಾಡಬೇಕು. ಬಲಾಢ್ಯರು ಅವಿದ್ಯಾವಂತರಾಗಿದ್ದರೂ ಅವರನ್ನು ಗೌರವದಿಂದ ಕಾಣುತ್ತೇವೆ. ವಿದ್ಯಾವಂತ ಬಂದರೂ ಅವ ಬಲಾಢ್ಯ ಅಲ್ಲ ಎನ್ನುವ ಕಾರಣಕ್ಕೆ ಗೌರವ ಕೊಡುವುದಿಲ್ಲ. ಇದು ಬದಲಾಗಬೇಕು ಎಂದರು.ಸಿದ್ದರಾಮಯ್ಯನವರು ಸಮೀಕ್ಷೆ ಎಂಬ ಗಟ್ಟಿ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಎಲ್ಲರ ಸರ್ವತೋಮುಖ ಅಭಿವೃದ್ಧಿ ಬಯಸುವಂತಹ ಜನರ ಕೈಲಿ ಅಧಿಕಾರ ಇರಬೇಕು. ಅವರೊಂದಿಗೆ ಗಟ್ಟಿಯಾಗಿ ನಾವು ನಿಲ್ಲಲಿದ್ದೇವೆ ಎಂದು ಹೇಳಿದರು.ಅಹಿಂದ ಹುಟ್ಟು ಹಾಕಿದ್ದೇ ಸಿದ್ದರಾಮಯ್ಯ ಮತ್ತು ಜಾಲಪ್ಪನವರು. ಅಹಿಂದಕ್ಕೆ ಹೆಚ್ಚು ಬಲ ತುಂಬಿದವರೇ ಸಿದ್ದರಾಮಯ್ಯ ನವರು. ಸಮಾಜದಲ್ಲಿ ದುರ್ಬಲರನ್ನೇ ಗುರಿಯಾಗಿಸಿ ಶೋಷಣೆ ಮಾಡಲಾಗುತ್ತದೆ. ಸಮಾನತೆ ಬರುವವರೆಗೂ ಮೀಸಲಾತಿ ಮುಂದುವರೆಯಬೇಕು ಎಂದರು.ಪರಮೇಶ್ವರ್ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಲಿ:ಅಹಿಂದ ಸಮುದಾಯದ ಜನ ಪ್ರತಿನಿಧಿಗಳು ಹೆಚ್ಚು ಹೆಚ್ಚು ಬರಬೇಕು. ನಾವು ಧ್ವನಿ ಇಲ್ಲದ ಸಮುದಾಯಗಳಿಗೆ ಧ್ವನಿಯಾಗಬೇಕು ಎಂದರಲ್ಲದೆ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸಾಮಾನ್ಯ ಕ್ಷೇತ್ರದಲ್ಲಿ ಚುನಾವಣೆ ಎದುರಿಸಿ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಎಂದು ಕೆ.ಎನ್. ರಾಜಣ್ಣ ನುಡಿದರು.ಜಾಗೃತ ಕರ್ನಾಟಕದ ಮುಖಂಡ ಡಾ.ಎಚ್.ವಿ.ವಾಸು ಅವರು ಮಾತನಾಡಿ, ಮೀಸಲಾತಿ ಕುರಿತು ಈ ದೇಶದಲ್ಲಿ ಬಹಳ ದೊಡ್ಡ ತಪ್ಪು ಅಭಿಪ್ರಾಯವಿದೆ ಎಂದರು.ವೈಕಂ ಸತ್ಯಾಗ್ರಹ ನಡೆದದ್ದು, ಈಳವ ಸಮುದಾಯಕ್ಕೆ ಶಿವನ ದೇವಸ್ಥಾನದ ರಸ್ತೆಗೆ ಪ್ರವೇಶಾವಕಾಶ ನೀಡಬೇಕು ಎಂದು. ದೇವಸ್ಥಾನದ ಪೂಜೆಗೆ ರೋಸ್ಟರ್ ಇರಲ್ಲ, ಎಕ್ಸಾಮ್ ಇರೋದಿಲ್ಲ. ಇದು ಹುಟ್ಟಿನ ಆಧಾರದ ಮೇಲೆ ತೀರ್ಮಾನವಾಗುತ್ತಿದೆ. ಹುಟ್ಟಿದ ಕಾರಣಕ್ಕೆ ಅಲಿಖಿತ ನಿಯಮವಾಗಿ ಮೀಸಲಾತಿ ಜಾರಿಯಾಗಿದೆ ಎಂದರು.ಮುಸ್ಲಿಮರಿಗೂ ಮೀಸಲಾತಿಗಾಗಿ ಶಿಫಾರಸ್ಸು ಮಾಡಿದ್ದು ಮತ್ತು ಹಿಂದುಳಿದ ಸಮುದಾಯಗಳಿಗಾಗಿ ಶಾಲೆಗಳು, ಹಾಸ್ಟೆಲ್‌ಗಳನ್ನು ಮಾಡುವಂತೆ ಶಿಫಾರಸ್ಸು ಮಾಡಿದ್ದು ಮಿಲ್ಲರ್ ಕಮಿಟಿ. ಅದನ್ನು ಜಾರಿ ಮಾಡಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್. ಈ ಸಮಾಜ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕಾದರೆ ಶಿಕ್ಷಣ ಅಗತ್ಯ. ಎಲ್ಲರನ್ನೂ ಒಳಗೊಳ್ಳಲು ಮೀಸಲಾತಿಯನ್ನು ಕಲ್ಪಿಸಬೇಕು. ಎಲ್ಲರ ಪಾಲ್ಗೊಳ್ಳುವಿಕೆ ಇಲ್ಲವಾದರೆ ರಾಜ್ಯ, ದೇಶ ಹಿಂದುಳಿಯುತ್ತದೆ. ಹಾಗಾಗಿ ಎಸ್ಸಿ, ಎಸ್ಟಿ ಎಂದ ಮಾತ್ರಕ್ಕೆ ನಾವು ಅಂಜಿಕೆ ಪಡುವುದನ್ನು ನಿಲ್ಲಿಸಬೇಕು. ನಮ್ಮ ಪ್ರತಿಭೆಯನ್ನು ಈ ದೇಶದ ಏಳಿಗೆಗೆ ಸಹಕಾರಿ ಎಂದು ಹೆಮ್ಮೆ ಪಡಬೇಕು ಎಂದರು.ಕಾರ್ಯ ಕ್ರಮದಲ್ಲಿ ಜಾಗೃತ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಅನಿಲ್ ಕುಮಾರ್ ಚಿಕ್ಕದಾಳವಟ್ಟ, ಆದಂ ಖಾನ್, ಚಂದನ್ ಡಿ. ಎನ್, ಕಿಶೋರ್, ನವೀನ್ ಪೂಜಾರಹಳ್ಳಿ, ದಯಾನಂದ್, ಟೂಡಾ ಶಶಿಧರ್, ಕಾಂಗ್ರೆಸ್ ಮುಖಂಡ ಹೆತ್ತೇನಹಳ್ಳಿ ಮಂಜುನಾಥ್, , ಮಧುಗಿರಿ ಕೆಡಿಪಿ ಸಭೆ ಸದಸ್ಯೆ ಜಯಲಕ್ಷ್ಮಿಜೆ.ಕೆ, ಹಿಂದುಳಿದ ರ್ಗಟಗಳ ಒಕ್ಕೂಟ ಅಧ್ಯಕ್ಷ ಧನಿಯಕುಮಾರ್, ತುಮಕೂರು ಮಹಾನಗರ ಪಾಲಿಕೆ ಮಾಜಿ ವಿರೋಧ ಪಕ್ಷದ ನಾಯಕ ಜೆ. ಕುಮಾರ್, ಮೈಲಪ್ಪ, ಡಿ. ಟಿ. ವೆಂಕಟೇಶ್, ಮೊಹಮ್ಮದ್ ಜಿಯಾವುಲ್ಲಾ, ಟಿ. ಆರ್ ಸುರೇಶ್, ಕಾಡುಗೊಲ್ಲರ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾರೋಗೆರೆ ಮಹೇಶ್, ಕರ್ನಾಟಕ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಟಿ. ಎನ್ ಮಧುಕರ್ ಇನ್ನಿತರರು ಇದ್ದರು