ಸಾರಾಂಶ
ಬ್ಯಾಡಗಿ: ಸರ್ಕಾರಿ ಉದ್ಯೋಗಗಳಲ್ಲಿ ಕ್ರೀಡಾಪಟುಗಳಿಗೆ ಶೇ. 2ರಷ್ಟು ಮೀಸಲಾತಿ ಘೋಷಿಸಿರುವುದು ಸ್ವಾಗತಾರ್ಹ. ಇದರಿಂದ ಕ್ರೀಡಾಪಟುಗಳಿಗೆ ಬದುಕಿನ ಭದ್ರತೆ ಜತೆಗೆ ಆತ್ವವಿಶ್ವಾಸ ಹೆಚ್ಚಲಿದ್ದು, ಪರೋಕ್ಷವಾಗಿ ಬಹುತೇಕ ಕ್ರೀಡೆಗಳಿಗೆ ಉತ್ತೇಜನ ಸಿಗಲಿದೆ ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ದಾನಪ್ಪ ಚೂರಿ ಅಭಿಪ್ರಾಯಪಟ್ಟರು.
ತಾಲೂಕಾಡಳಿತ ತಾಲೂಕು ಪಂಚಾಯಿತಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿವಿಧ ಕ್ರೀಡಾ ಸಂಘಗಳ ಆಶ್ರಯದಲ್ಲಿ ಪಟ್ಟಣದ ಎಸ್‌ಜೆಜೆಎಂ ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡ ಕ್ರೀಡಾಪಟುಗಳಿಗೆ ‘ಡಿ’ ದರ್ಜೆ ಉದ್ಯೋಗವು ಕೂಡ ಸಿಗುತ್ತಿರಲಿಲ್ಲ. ಇದನ್ನರಿತ ಸರ್ಕಾರ ಶೇ. 2ರಷ್ಟು ಹುದ್ದೆಗಳನ್ನು ಕ್ರೀಡಾಪಟುಗಳಿಗೆ ಮೀಸಲಾತಿ ನೀಡಿದೆ ಎಂದು ಶ್ಲಾಘಿಸಿದರು.ಹಾವೇರಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಸಿ.ಜಿ. ಚಕ್ರಸಾಲಿ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಕ್ರೀಡೆ ಉದ್ಯಮವಾಗಿ ಹೊರಹೊಮ್ಮುತ್ತಿದೆ. ಬಹುತೇಕ ಉದ್ಯಮಿಗಳು ಕ್ರೀಡಾಪಟುಗಳ ಮೇಲೆ ಹಣ ಹೂಡಿಕೆಯನ್ನು ಮಾಡುತ್ತಿದ್ದಾರೆ. ಇದರಿಂದ ಕ್ರೀಡಾಪಟುಗಳು ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಿದ್ದಾರೆ. ಆರೋಗ್ಯದ ಜತೆಗೆ ಹಣವನ್ನೂ ಕ್ರೀಡೆಗಳಿಂದ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಮುಖ್ಯಾಧಿಕಾರಿ ವಿನಯಕುಮಾರ ಮಾತನಾಡಿ, ಕ್ರೀಡಾಪಟುಗಳು ಒಂದು ಉತ್ತಮ ಗುರಿಯೊಂದಿಗೆ ಸಾಧನೆ ಮಾಡಬೇಕು. ಕೇವಲ ಅಲ್ಪತೃಪ್ತಿಗಾಗಿ ಕ್ರೀಡಾಂಗಣಕ್ಕೆ ಇಳಿಯುವುದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಯುವಕರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋಟಿಗಟ್ಟಲೇ ಹಣ ವ್ಯಯಿಸಿ ಕ್ರೀಡಾಂಗಣಗಳನ್ನು ನಿರ್ಮಿಸಿದ್ದು, ಕ್ರೀಡಾಪಟುಗಳು ಇದರ ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.ವೇದಿಕೆಯಲ್ಲಿ ಶಿವಾನಂದ ಯಮನಕ್ಕನವರ, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ಕೆ.ಎಸ್. ಪಮ್ಮಾರ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಂ.ಎಫ್. ಕರೇಣ್ಣನವರ, ಕಬಡ್ಡಿ ಕೋಚ್ ಮಂಜುಳಾ ಭಜಂತ್ರಿ, ಶಿಕ್ಷಕರ ಸಂಘದ ಎಸ್.ಯು. ಮಾಸ್ತಿ, ಎಂ.ಎಸ್. ಕರ್ಜಗಿ, ಬಸವರಾಜಪ್ಪ, ಬಸವರಾಜ ಬಸಪ್ಪನವರ, ಎಸ್.ಆರ್. ಬಡ್ಡಿ, ಜಿತೇಂದ್ರ ಸುಣಗಾರ, ವಿ.ಡಿ. ಅಕ್ಕೂರ, ಮಲ್ಲಿಕಾರ್ಜುನ ಕೋಡಿಹಳ್ಳಿ ಇತರರಿದ್ದರು. ಎ.ಟಿ. ಪೀಠದ ಸ್ವಾಗತಿಸಿ ವಂದಿಸಿದರು.;Resize=(128,128))
;Resize=(128,128))
;Resize=(128,128))