ಮೀಸಲು: ಗುತ್ತಿಗೆ ನೌಕರರ ಹಿತಕ್ಕೆ ಧಕ್ಕೆಯಗದಿರಲಿ

| Published : Jun 18 2024, 12:45 AM IST

ಸಾರಾಂಶ

ಸರ್ಕಾರಿ ಇಲಾಖೆಗಳಲ್ಲಿ ಕಾಯಂ ನೌಕರರ ಕೊರತೆಯಿರುವ ಕಾರಣ ಹೊರಗುತ್ತಿಗೆ ನೌಕರರ ಸೇವೆಯನ್ನು ಹತ್ತಾರು ವರ್ಷಗಳಿಂದ ಪಡೆಯುತ್ತಿದ್ದರೂ ಕೂಡ ಇವರನ್ನು ಕಾಯಂ ಮಾಡಿಲ್ಲ. ಅವರನ್ನು ಸರ್ಕಾರ ಕೂಡಲೇ ಕಾಯಂ ಮಾಡಲಿ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸರ್ಕಾರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ನೌಕರರ ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರ ಮೀಸಲು ನೀತಿ ಜಾರಿಗೆ ತರಲು ಹೊರಟಿರುವುದು ಸ್ವಾಗತಾರ್ಹವಾದರೂ ಹೊಸದಾಗಿ ನೇಮಕ ಆಗುವವರಿಗೆ ಇದು ಅನ್ವಯವಾಗಬೇಕು. ಈ ನೀತಿ ಜಾರಿಯಾಗುವ ಮುನ್ನ ಇಲಾಖೆಯಲ್ಲಿ 10-15 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಹೊರಗುತ್ತಿಗೆ ನೌಕರರ ಉದ್ಯೋಗಕ್ಕೆ ಧಕ್ಕೆ ಆಗದಂತೆ ಸರ್ಕಾರ ಕ್ರಮವಹಿಸಬೇಕು ಎಂದು ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಸುಧಾಕರ್ ಸರ್ಕಾರವನ್ನು ಒತ್ತಾಯಿಸಿದರು. ನಗರದ ಸರ್ಕಾರಿ ನೌಕರರ ಭವನದಲ್ಲಿ ನಡೆಸಿದ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೊರಗುತ್ತಿಗೆ ನೌಕರರಿಗೆ ಉದ್ಯೋಗ ಭದ್ರತೆಯಿಲ್ಲ.ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಸಮಾನ ಕೆಲಸಕ್ಕೆ ಸಮಾನವೇತನ ನೀಡುತ್ತಿಲ್ಲ ಎಂದರು.

ಗುತ್ತಿಗೆ ನೌಕರರನ್ನು ಕಾಯಂ ಮಾಡಿ

ರಾಜ್ಯದ ಉದ್ದಗಲಕ್ಕೂ ಇರುವ ಸರ್ಕಾರಿ ಇಲಾಖೆಗಳಲ್ಲಿ ಕಾಯಂ ನೌಕರರ ಕೊರತೆಯಿರುವ ಕಾರಣ ಹೊರಗುತ್ತಿಗೆ ನೌಕರರ ಸೇವೆಯನ್ನು ಹತ್ತಾರು ವರ್ಷಗಳಿಂದ ಪಡೆಯುತ್ತಿದ್ದರೂ ಕೂಡ ಇವರನ್ನು ಕಾಯಂ ಮಾಡಿಲ್ಲ. ಸರ್ಕಾರ ಕೂಡಲೇ ಈ ಬಗ್ಗೆ ಚಿಂತನೆ ಮಾಡಿ, ಕ್ರಮತೆಗೆದುಕೊಳ್ಳದೇ ಹೋದರೆ ರಾಜ್ಯಮಟ್ಟದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು. ಗುತ್ತಿಗೆ ನೌಕರರ ಬೇಡಿಕೆಗಳು

ಖಾಸಗಿ ಏಜೆನ್ಸಿಗಳ ಮೂಲಕ ತನಗೆ ಬೇಕಾದ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ತೆಗೆದುಕೊಳ್ಳುತ್ತಾ ಬಂದಿದೆ.ಹೀಗಿದ್ದರೂ ಕೆಲವು ಗುತ್ತಿಗೆ ಸಂಸ್ಥೆಗಳು ಈ ವರ್ಗಕ್ಕೆ ಸಕಾಲಕ್ಕೆ ಇಎಸ್‌ಐಸಿ, ಪಿಎಫ್ ಪಾವತಿಸುತ್ತಿಲ್ಲ. ಹೊರಗುತ್ತಿಗೆ ಕೆಲಸಕ್ಕೆ ನೇಮಿಸಿಕೊಳ್ಳುವ ಏಜೆನ್ಸಿಗಳು ನೌಕರರಿಗೆ ನೇಮಕಾತಿ ಆದೇಶ ಪತ್ರ ನೀಡುತ್ತಿಲ್ಲ. ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ನಮಗೆ ತಿಂಗಳ ಮೊದಲ ವಾರದಲ್ಲಿಯೇ ವೇತನ ಪಾವತಿಸಬೇಕು. ಹೊರಗುತ್ತಿಗೆ ನೌಕರರಿಗೆ ಮೇಲಧಿಕಾರಿಗಳಿಂದ ಆಗುತ್ತಿರುವ ದೈಹಿಕ, ಮಾನಸಿಕ ಕಿರುಕುಳ ತಪ್ಪಿಸಬೇಕು. ಮಹಿಳಾ ನೌಕರರಿಗೆ 6 ತಿಂಗಳ ಕಾಲ ಹೆರಿಗೆ ವೇತನ ಸಹಿತ ರಜೆ ನೀಡಬೇಕು. 2019ರ ನಂತರ ಗ್ರಾಮ ಪಂಚಾಯಿತಿಗಳಲ್ಲಿ ನೇಮಕ ಮಾಡಿಕೊಂಡಿರುವ ಆರ್‌ಡಿಪಿಆರ್ ನೌಕರರನ್ನು ನಿಯೋಜನೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷ ಎನ್.ಗಂಗಾಧರ್, ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗರಾಜ್, ಸಂಘಟನಾ ಕಾರ್ಯದರ್ಶಿ ರಾಜೇಶ್, ನಿರ್ದೇಶಕರಾದ, ವೆಂಕಟೇಶ್, ಮೂರ್ತಿ ಮತ್ತಿತರರು ಇದ್ದರು.

ಸಿಕೆಬಿ-5 ಚಿಕ್ಕಬಳ್ಳಾಪುರ ನಗರದ ಸರ್ಕಾರಿ ನೌಕರರ ಭವನದಲ್ಲಿ ಜಿಲ್ಲಾ ಹೊರಗುತ್ತಿಗೆ ನೌಕರರ ಸಂಘದಿಂದ ನಡೆಸಿದ ಸಭೆಯಲ್ಲಿ ರಾಜ್ಯಾಧ್ಯಕ್ಷ ಸುಧಾಕರ್ ಮಾತನಾಡಿದರು.