ಸಾರಾಂಶ
ಕನ್ನಡಪ್ರಭ ವಾರ್ತೆ ಖಾನಾಪುರ
ಭೀಮಗಡ ವನ್ಯಧಾಮದ ವ್ಯಾಪ್ತಿಯಲ್ಲಿ ಬರುವ ಹಲವು ಗ್ರಾಮಗಳ ಸ್ಥಳಾಂತರದ ಕುರಿತಾಗಿ ಚರ್ಚಿಸಲು ಶುಕ್ರವಾರ ಪಟ್ಟಣದ ಶಿವಸ್ಮಾರಕ ಸಭಾಗೃಹದಲ್ಲಿ ಶುಕ್ರವಾರ ನಡೆದ ಸರ್ವಪಕ್ಷಗಳ ಮುಖಂಡರ ಮತ್ತು ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ಶೀಘ್ರದಲ್ಲೇ ಅರಣ್ಯ ಸಚಿವರ ಬಳಿ ತಾಲೂಕಿನ ಮುಖಂಡರ ನಿಯೋಗ ಕರೆದೊಯ್ಯುಲು ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಅರವಿಂದ ಪಾಟೀಲ, ಈಗಾಗಲೇ ನೂರಾರು ವರ್ಷಗಳಿಂದ ಅರಣ್ಯದಲ್ಲಿ ವಾಸಿಸುವವರಿಗೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ, ಹಳಿಯಾಳ, ದಾಂಡೇಲಿ ತಾಲೂಕಿನ ಅರಣ್ಯದೊಳಗಿನ ಗ್ರಾಮಗಳಿಗೆ ನೀಡಿದ ಮಾದರಿಯಲ್ಲಿ ಸವಲತ್ತು ದೊರೆಯುವಂತೆ ಮಾಡಬೇಕು. ಉತ್ತರ ಕನ್ನಡದ ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿ ಅಭಿವೃದ್ಧಿ ಕಾಮಗಾರಿ ಅವಕಾಶ ಇದೆ. ಆದರೆ, ಭೀಮಗಡ ವನ್ಯಧಾಮದಲ್ಲೇಕೆ ನಡೆಯಲು ಅನುಮತಿ ನೀಡುವುದಿಲ್ಲ ಎಂದು ಸರ್ಕಾರವನ್ನು ಪ್ರಶ್ನಿಸಬೇಕು. 1974ರಲ್ಲಿ ಹುಕ್ಕೇರಿ ತಾಲೂಕಿನಿಂದ ನಮ್ಮ ತಾಲೂಕಿಗೆ ಸ್ಥಳಾಂತರಗೊಂಡವರಿಗೆ ಇದುವರೆಗೂ ಅಗತ್ಯ ಸೌಲಭ್ಯ ಸಿಕ್ಕಿಲ್ಲ. ಮುಂದೆ ಭೀಮಗಡ ವನ್ಯಧಾಮದಿಂದ ಹೊರಬರುವವರ ಪರಿಸ್ಥಿತಿಯೂ ಹೀಗಾಗಬಾರದು ಎಂಬುದನ್ನು ಎಲ್ಲರೂ ಅರಿಯಬೇಕು ಎಂದರು.
ಮಾಜಿ ಶಾಸಕ ದಿಗಂಬರ ಪಾಟೀಲ, ವಕೀಲರ ಸಂಘದ ಅಧ್ಯಕ್ಷ ಈಶ್ವರ ಘಾಡಿ, ಎಂಇಎಸ್ ಮುಖಂಡ ಮುರಳೀಧರ ಪಾಟೀಲ ಮತ್ತಿತರರು ಮಾತನಾಡಿ, ಅರಣ್ಯದಲ್ಲಿ ಮುತ್ತಜ್ಜರ ಕಾಲದಿಂದಲೂ ಇರುವ ತಮ್ಮ ಹೊಲ-ಮನೆಗಳನ್ನು ಅರಣ್ಯ ಇಲಾಖೆಯ ಒಪ್ಪಿಸಿ ಹೊರಬರುವವರಿಗೆ ಸರ್ಕಾರದಿಂದ ಯಾವ್ಯಾವ ಸೌಲಭ್ಯಗಳು ದೊರೆಯಲಿವೆ ಎಂಬುದನ್ನು ಖಾತ್ರಿ ಪಡಿಸಿಕೊಂಡ ಬಳಿಕವೇ ಸ್ಥಳಾಂತರಗೊಳ್ಳುವ ನಿರ್ಧಾರದ ಮಾಡಬೇಕು, ಸ್ಥಳಾಂತರಗೊಳ್ಳುವವರಿಗೆ ಎಲ್ಲ ರೀತಿಯ ಮೂಲ ಸೌಕರ್ಯ ದೊರೆಯಬೇಕು. ಈ ಕುರಿತು ಶಾಸಕರು ಮತ್ತು ಸಂಸದರು ಸ್ಥಳಾಂತರಕ್ಕೆ ಗುರುಸಿರುವ ಗ್ರಾಮಗಳ ಪ್ರಮುಖರು ಮತ್ತು ತಾಲೂಕಿನ ಮುಖಂಡರ ನಿಯೋಗ ಕರೆದೊಯ್ದು ಸಚಿವರ ಮತ್ತು ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಬೇಕು ಎಂದು ಹೇಳಿದರು.ಸಭೆಯಲ್ಲಿ ತಾಲೂಕಿನ ಹಾಲಿ, ಮಾಜಿ ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಾಮಾಜಿಕ ಕಾರ್ಯಕರ್ತರು, ಪರಿಸರವಾದಿಗಳು, ಭೀಮಗಡ ವನ್ಯಧಾಮ ವ್ಯಾಪ್ತಿಯ ವಿವಿಧ ಗ್ರಾಮಗಳ ಪ್ರಮುಖರು, ಹಿರಿಯರು ಭಾಗವಹಿಸಿ ತಮ್ಮ ಸಲಹೆ ಸೂಚನೆ ನೀಡಿದರು. ವಾಸುದೇವ ಚೌಗುಲೆ ಸಭೆಯ ಕಾರ್ಯಕಲಾಪ ನಿರ್ವಹಿಸಿದರು. ಬಾಳಾಸಾಹೇಬ ಶೇಲಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಪ್ಪ ಮಾರಿಹಾಳ ವಂದಿಸಿದರು.ಅಭಯಾರಣ್ಯದಿಂದ ಮುಖ್ಯವಾಹಿನಿಗೆ ಬರಲು ಇಚ್ಛಿಸುವ ಕಾಡಿನ ವಾಸಿಗಳಿಗೆ ಸರ್ಕಾರದಿಂದ ಮೂಲ ಸೌಲಭ್ಯ ಒದಗಿಸುವುದು ಸೇರಿ ಭೀಮಗಡ ವನ್ಯಧಾಮದ ಜನರ ಸ್ಥಳಾಂತರದ ಮಾಹಿತಿ ಕ್ರೋಡೀಕರಿಸಲು ಈ ಸಭೆ ಆಯೋಜಿಸಿದ್ದು, ಸಭೆಯಲ್ಲಿ ಭಾಗವಹಿಸಿದ್ದ ವನ್ಯಧಾಮ ವ್ಯಾಪ್ತಿಯ ವಿವಿಧ ಗ್ರಾಮಗಳ ಮುಖಂಡರು, ತಾಲೂಕಿನ ವಿವಿಧ ಪಕ್ಷಗಳು ಮತ್ತು ಕ್ಷೇತ್ರಗಳ ಗಣ್ಯರು ಸ್ಥಳಾಂತರಕ್ಕೆ ಒಪ್ಪುವ ಗ್ರಾಮಸ್ಥರಿಗೆ ಸರ್ಕಾರದಿಂದ ಹೆಚ್ಚಿನ ಸೌಲಭ್ಯ ಒದಗಿಸಬೇಕು, ಸ್ಥಳಾಂತರಕ್ಕೆ ಒಪ್ಪದವರ ಗ್ರಾಮಗಳಿಗೆ ರಸ್ತೆ, ಸೇತುವೆ ಒದಗಿಸುವ ಬಗ್ಗೆ ಪ್ರಯತ್ನ ನಡೆಯಬೇಕು ಎಂದು ಹೇಳಿದ್ದಾರೆ. ಭೀಮಗಡ ವನ್ಯಧಾಮದ ಜನತೆಯ ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ಆಯೋಜಿಸಿರುವ ಚೊಚ್ಚಲ ಸಭೆ ಫಲಪ್ರದವಾಗಿದೆ. ಸಭೆಯಲ್ಲಿ ಮಹತ್ವದ ಚರ್ಚೆಗಳು ನಡೆದಿವೆ.
-ವಿಠ್ಠಲ ಹಲಗೇಕರ ಶಾಸಕ