ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು ವಸತಿ ಶಾಲೆ ವಿದ್ಯಾರ್ಥಿಗಳು ಗಾಂಜಾ, ವೈಟ್ನರ್ ಹಾಗೂ ಧೂಮಪಾನದ ಅಮಲಿನಲ್ಲಿ ತೇಲಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೋಷಕರು ಹಾಗೂ ಸಾರ್ವಜನಿಕರು ಸಮಾಜ ಕಲ್ಯಾಣ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಕೆಡಿಪಿ ಸದಸ್ಯರಾದ ಚೇತನ್, ನಂದೀಶ್, ಜ್ಯೋತಿ ಆಗ್ರಹಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ಸರ್ಕಾರಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ರಾಜಾರೋಷವಾಗಿ ವಿದ್ಯಾರ್ಥಿಗಳು ಗಾಂಜಾ , ವೈಟ್ನರ್, ಮದ್ಯ ಸಿಗರೇಟ್ ಸೇದುತ್ತಿರುವ ಅಪ್ರಾಪ್ತ ವಿದ್ಯಾರ್ಥಿಗಳ ವಿಡಿಯೋ ವೈರಲ್ ಆಗಿದ್ದು ಹಾಸ್ಟೆಲ್ ಅವ್ಯವಸ್ಥೆಗೆ ಕೈಗನ್ನಡಿಯಾಗಿದೆ.ಬಡ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮೀಣ ಭಾಗದ ಅನುಕೂಲಕ್ಕಾಗಿ ಸರ್ಕಾರ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ಮೂಲಭೂತ ಸೌಕರ್ಯಗಳನ್ನು ನೀಡಿದೆ. ಆದರೆ ಕೆಲವು ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳು ಸರ್ಕಾರ ನೀಡುವ ಸೌಕರ್ಯದಿಂದ ವಂಚಿತರಾಗುತ್ತಿದ್ದಾರೆ, ಆದರೆ ಈಗ ಗಾಯದ ಮೇಲೆ ಬರೆ ಎಂಬಂತೆ ಬಿಕ್ಕೋಡು ಸರ್ಕಾರಿ ವಿದ್ಯಾರ್ಥಿನಿಲಯದಲ್ಲಿ ಸಿಗರೇಟ್, ಗಾಂಜಾದ ಅಮಲು ವಿಡಿಯೋದಿಂದ ಸಮಾಜ ಕಲ್ಯಾಣ ಇಲಾಖೆಯ ಕಾರ್ಯವೈಖರಿಯನ್ನೇ ಪ್ರಶ್ನೆ ಮಾಡುವಂತಾಗಿದೆ.ಬಿಕ್ಕೋಡು ವಿದ್ಯಾರ್ಥಿ ನಿಲಯದಲ್ಲಿ ೮ರಿಂದ ೧೦ನೇ ತರಗತಿಯ ಸುಮಾರು ೩೮ ವಿದ್ಯಾರ್ಥಿಗಳು ವಿದ್ಯಾಬ್ಯಾಸ ಮಾಡುತ್ತಿದ್ದಾರೆ. ವಸತಿ ನಿಲಯದಲ್ಲಿ ಉಸ್ತುವಾರಿಗಾಗಿ ಒಬ್ಬ ವಾರ್ಡನ್ ಇಬ್ಬರು ಸಹಾಯಕರು ಇದ್ದಾರೆ. ಇವರೆಲ್ಲ ಇದ್ದರೂ ಕೆಲವು ವಿದ್ಯಾರ್ಥಿಗಳು ಕದ್ದುಮುಚ್ಚಿ ಬೀಡಿ, ಸಿಗರೇಟ್ ಸೇದುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಸತಿ ನಿಲಯದ ಭದ್ರತೆಯ ಬಗ್ಗೆ ಅನುಮಾನ ಉಂಟಾಗುತ್ತಿದೆ. ಇಷ್ಟೆಲ್ಲಾ ಪ್ರಕರಣ ಬೆಳಕಿಗೆ ಬಂದಿದ್ದರೂ ವಾರ್ಡನ್ ಹಾಗೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿರುವುದು ನೋಡಿದರೆ ಇದರಲ್ಲಿ ಕಾಣದ ಕೈಗಳು ಇವೆ ಎಂದು ಪೋಷಕರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಡಿಪಿ ಸದಸ್ಯರಾದ ನಂದೀಶ್, ಚೇತನ್, ಜ್ಯೋತಿ ನಾವು ಈ ಹಿಂದೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ನಡೆಯುತ್ತಿರುವ ಹಾಸ್ಟೆಲ್‌ಗಳ ಅವ್ಯವಸ್ಥೆ ವಿದ್ಯಾರ್ಥಿನಿಲಯದ ಪಾಲಕರ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ತಲೆಕೆಡಿಸಿಕೊಳ್ಳದ ಕಾರಣ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ತಾಲೂಕಿನಲ್ಲಿ ನಡೆಯುತ್ತಿರುವ ಸಮಾಜ ಕಲ್ಯಾಣ ಇಲಾಖೆ ಎಲ್ಲಾ ವಸತಿ ನಿಲಯಗಳಲ್ಲಿ ಸ್ವಚ್ಛತೆ ಇಲ್ಲವಾಗಿದೆ. ಕೆಲ ವಾರ್ಡನ್‌ಗಳು ಸ್ಥಳದಲ್ಲಿ ಇರದೆ ಅಡುಗೆ ಹಾಗೂ ಸಹಾಯಕರ ಮೇಲೆ ಜವಾಬ್ದಾರಿ ಬಿಟ್ಟು ಬೇರೆ ಕೆಲಸಕ್ಕೆ ಹೋಗುತ್ತಿರುವ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲು ಹೋದಾಗ ನಮಗೆ ಹಣದ ಆಮಿಷವನ್ನು ಒಡ್ಡಿರುವ ದಾಖಲೆಗಳು ನಮ್ಮ ಬಳಿ ಇದೆ. ಕೇವಲ ಒಬ್ಬರಿಗೆ ಶಿಕ್ಷೆಯಾದರೆ ಸಾಲದು ಇದರಲ್ಲಿ ಯಾರೇ ತಪ್ಪಿತಸ್ಥರು ಆಗಿದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ನಾವು ಸಮಾಜಕಲ್ಯಾಣ ಇಲಾಖೆ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ದಾಖಲೆ ಸಮೇತ ದೂರು ಸಲ್ಲಿಸುತ್ತೇವೆ ಎಂದರು.ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿ, ವಿಡಿಯೋ ವೈರಲ್ ಆಗಿರುವ ಬಗ್ಗೆ ಮಾಹಿತಿ ನೀಡಿದರು. ಇದು ಈ ವರ್ಷ ನಡೆದಿರುವ ಘಟನೆಯಲ್ಲ, ಇದು ಹಿಂದಿನ ವರ್ಷ ಆಗಿರುವ ಘಟನೆ. ಹಿಂದೆ ಇದ್ದ ವಿದ್ಯಾರ್ಥಿಗಳು ವಸತಿ ನಿಲಯಕ್ಕೆ ಆಗಮಿಸಿ ಧೂಮಪಾನ ಮಾಡಿರುವ ಬಗ್ಗೆ ವಿಡಿಯೋ ವೈರಲ್ ಮಾಡಿದ್ದಾರೆ. ಈ ಕೂಡಲೇ ವಾರ್ಡನ್ ಚಂದ್ರಶೇಖರ್, ಅಡುಗೆ ಸಿಬ್ಬಂದಿ ಹಾಗೂ ವಾಚ್‌ಮನ್ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಮೇಲಾಧಿಕಾರಿಗಳು ಸೂಚಿಸಿದ್ದು ಕೂಡಲೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಹೇಳಿಕೆ-1ವಿದ್ಯಾರ್ಥಿಗಳು ಓದಿ ವಿದ್ಯಾವಂತರಾಗಲಿ ಎಂದು ಪೋಷಕರು ಮಕ್ಕಳನ್ನು ವಿದ್ಯಾರ್ಥಿ ನಿಲಯಕ್ಕೆ ಸೇರಿಸಿರುತ್ತಾರೆ. ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ದಿನದಲ್ಲಿ ಇಂತಹ ಕೆಲಸ ಮಾಡುವುದು ತಪ್ಪು. ಕೂಡಲೇ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಹಾಗೂ ವಾರ್ಡನ್‌ಗಳ ಸಭೆ ಕರೆದು ಮಾಹಿತಿಯನ್ನು ಪಡೆದುಕೊಳ್ಳುವುದಲ್ಲದೆ, ಇದರಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ.
- ಎಚ್ ಕೆ ಸುರೇಶ್ ,ಶಾಸಕ* ಬಾಕ್ಸ್ ನ್ಯೂಸ್ : ಸಿಬ್ಬಂದಿಯ ನಿರ್ಲಕ್ಷ್ಯ
ತಹಸೀಲ್ದಾರ್ ಮಮತಾ ಎಂ ಹಾಸ್ಟೆಲ್ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಅಲ್ಲದೇ ವಸತಿ ನಿಲಯದೊಳಗೆ ಬೇರೆ ವಿದ್ಯಾರ್ಥಿಗಳು ಒಳ ಬರಲು ಯಾರು ಅವಕಾಶ ಮಾಡಿಕೊಟ್ಟರು ಎಂದು ಗೊತ್ತಾಗಬೇಕಿದೆ. ಮೇಲ್ನೋಟಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಕೂಡಲೇ ಜಿಲ್ಲಾಧಿಕಾರಿಗಳು ವಾರ್ಡನ್ ಸೇರಿದಂತೆ ಇತರರನ್ನು ಅಮಾನತು ಮಾಡಲು ಸೂಚನೆ ನೀಡಿದ್ದು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.