Residents demand relocation of liquor shop
-ಕುಡುಕರ ಅಡ್ಡೆಯಾಗಿ ಮಾರ್ಪಟ್ಟ ಕೊಪ್ಪದ ವಿನೋಬಾ ರಸ್ತೆ । ಮಹಿಳೆಯರು, ಮಕ್ಕಳ ಓಡಾಟಕ್ಕೆ ಸಂಚಕಾರ
--ಕನ್ನಡಪ್ರಭ ವಾರ್ತೆ ಕೊಪ್ಪ
ಪ್ರಮುಖ ವಾಣಿಜ್ಯ ಕೇಂದ್ರ ಹಾಗೂ ಬಸ್ ನಿಲ್ದಾಣದ ಸಮೀಪದ ವಿನೋಬಾ ರಸ್ತೆ (ಕಲಿಯುಗ ಕಾಂಪ್ಲೆಕ್ಸ್ ಹಿಂಭಾಗ) ಸಂಜೆಯಾಗುತ್ತಿದ್ದಂತೆಯೇ ಕುಡುಕರ ಅಡ್ಡೆಯಾಗಿ ಮಾರ್ಪಡುತ್ತಿದ್ದು, ಸುತ್ತಲಿನ ನಿವಾಸಿಗಳು, ಮಹಿಳೆಯರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ತೀವ್ರ ಮುಜುಗರ ಮತ್ತು ಆತಂಕದಲ್ಲೇ ಓಡಾಡುವ ದುಸ್ಥಿತಿ ನಿರ್ಮಾಣವಾಗಿದೆ.ಅಬಕಾರಿ ನಿಯಮ ಉಲ್ಲಂಘನೆ:
ಕಲಿಯುಗ ಕಾಂಪ್ಲೆಕ್ಸ್ ಒಳಭಾಗದ ಎಂಎಸ್ಐಎಲ್ ಮದ್ಯ ಮಾರಾಟ ಮಳಿಗೆಗೆ ಮುಖ್ಯ ರಸ್ತೆಯ ಶ್ರೀರಂಗ ಮೆಡಿಕಲ್ ಮತ್ತು ಲಕ್ಷ್ಮೀ ಬಟ್ಟೆ ಶೋರೂಂ ಮಧ್ಯಭಾಗದಿಂದ ಗ್ರಾಹಕರಿಗೆ ಪ್ರವೇಶ ಕಲ್ಪಿಸಲಾಗಿದೆ. ಅಬಕಾರಿ ಇಲಾಖೆಯ ಕಟ್ಟುನಿಟ್ಟಿನ ನಿಯಮಗಳ ಪ್ರಕಾರ, ಎಂಎಸ್ಐಎಲ್ ಮಳಿಗೆಗಳಲ್ಲಿ ಕೇವಲ ಮದ್ಯ ಖರೀದಿಸಿ ತೆಗೆದುಕೊಂಡು ಹೋಗಲು (ಪಾರ್ಸೆಲ್) ಮಾತ್ರ ಅವಕಾಶವಿದೆ; ಮಳಿಗೆಯ ಆವರಣದಲ್ಲಾಗಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಾಗಲಿ ನಿಂತು ಅಥವಾ ಕುಳಿತು ಮದ್ಯ ಸೇವಿಸುವುದು ಕಾನೂನುಬಾಹಿರ.ಆದರೆ, ಈ ಮಳಿಗೆಯ ಹಿಂಭಾಗದಿಂದಲೂ ಅನಧಿಕೃತ ಪ್ರವೇಶಕ್ಕೆ ದಾರಿ ಮಾಡಿಕೊಡಲಾಗಿದ್ದು, ಸಂಜೆಯಾದರೆ ಸಾಕು ಮದ್ಯವ್ಯಸನಿಗಳ ಗುಂಪು ಇಲ್ಲಿ ಜಮಾಯಿಸುತ್ತದೆ. ಕೊಪ್ಪದಲ್ಲಿ ಅಬಕಾರಿ ಇಲಾಖೆ ಕಣ್ಣುಮುಚ್ಚಿ ಕುಳಿತಿದೆಯೇ ಎಂದು ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಪೊಲೀಸರಿಗೂ ಕ್ಯಾರೇ ಎನ್ನದ ಮದ್ಯವ್ಯಸನಿ:
ಈ ಅಕ್ರಮ ಚಟುವಟಿಕೆಯ ಕುರಿತು ಸ್ಥಳೀಯರು ಹಲವು ಬಾರಿ ಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿಗೆ ಸ್ಪಂದಿಸಿದ ಪ್ರಾಮಾಣಿಕ ಪಿಎಸ್ಐ ಮಧು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿ, ಕಠಿಣ ಎಚ್ಚರಿಕೆ ನೀಡಿದ್ದಾರೆ. ಆದಾಗ್ಯೂ, ಪೊಲೀಸರ ಗಸ್ತು ವಾಹನ ಬರುವಾಗ ಅಲ್ಲೇ ಪೊದೆಗಳಲ್ಲಿ ಅಡಗಿಕೊಳ್ಳುವ ಕುಡುಕರು, ಪೊಲೀಸರು ತೆರಳಿದ ತಕ್ಷಣ ಮತ್ತೆ ತಮ್ಮ ಹಾವಳಿ ಮುಂದುವರಿಸುತ್ತಿದ್ದಾರೆ. ರಸ್ತೆ ಬದಿಯಲ್ಲೇ ಮದ್ಯ ಸೇವನೆ, ಧೂಮಪಾನ ಮಾಡುವುದಲ್ಲದೆ, ತಿಂದು-ಕುಡಿದ ಪ್ಲಾಸ್ಟಿಕ್ ತ್ಯಾಜ್ಯವನ್ನು ಅಲ್ಲೇ ಎಸೆದು, ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಮನೆಗಳಿಗೆ ತೆರಳುವ ಮಹಿಳೆಯರು ಮತ್ತು ಮಕ್ಕಳ ಎದುರು ಅಸಭ್ಯವಾಗಿ ವರ್ತಿಸುತ್ತಿರುವುದು ಜನವಸತಿ ಪ್ರದೇಶದ ಕುಟುಂಬಗಳಿಗೆ ನೆಮ್ಮದಿಯಿಲ್ಲದಂತೆ ಮಾಡಿದೆ.ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯ:
ಒಂದೆಡೆ ಕುಡುಕರ ಹಾವಳಿಯಾದರೆ, ಮತ್ತೊಂದೆಡೆ ಕೊಪ್ಪ ಪಟ್ಟಣ ಪಂಚಾಯಿತಿಯ ನಿರ್ಲಕ್ಷ್ಯದಿಂದ ಈ ಭಾಗದಲ್ಲಿ ಹಲವು ತಿಂಗಳುಗಳಿಂದ ಸ್ವಚ್ಛತಾ ಕಾರ್ಯ ನಡೆದಿಲ್ಲ. ಗಿಡಗಂಟೆಗಳು ಹಾಗೂ ವಿಲೇವಾರಿಯಾಗದ ಕಸದ ರಾಶಿಯ ನಡುವೆ ಮದ್ಯದ ಬಾಟಲಿ, ಪ್ಲಾಸ್ಟಿಕ್ ಕವರ್ಗಳು ಸೇರಿಕೊಂಡು ಇಡೀ ಪ್ರದೇಶ ಅನೈರ್ಮಲ್ಯ ತಾಣ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಸುಂದರ ಕೊಪ್ಪ ಪಟ್ಟಣ ''''''''ತ್ಯಾಜ್ಯ ನಗರಿ''''''''ಯಾಗಿ ಮಾರ್ಪಡುವುದರಲ್ಲಿ ಸಂಶಯವಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.ಪ್ರತಿಭಟನೆಯ ಎಚ್ಚರಿಕೆ:
ಜನವಸತಿ ಪ್ರದೇಶದ ಶಾಂತಿ ಮತ್ತು ಸ್ವಚ್ಛತೆಗೆ ಭಂಗ ತರುತ್ತಿರುವ ಈ ಸಮಸ್ಯೆಗೆ ಪ.ಪಂ, ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ತಕ್ಷಣವೇ ಶಾಶ್ವತ ಪರಿಹಾರ ಕಲ್ಪಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಕಠಿಣ ಕ್ರಮ ಕೈಗೊಳ್ಳದಿದ್ದರೆ, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿ, ಈ ಎಂಎಸ್ಐಎಲ್ ಮಳಿಗೆಯನ್ನು ಜನವಸತಿ ಪ್ರದೇಶದಿಂದ ಸ್ಥಳಾಂತರಿಸುವಂತೆ ಒತ್ತಾಯಿಸಿ ಬೀದಿಗಿಳಿದು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ವಿನೋಬಾ ರಸ್ತೆಯ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.