ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನವನಗರದ ಸೆಕ್ಟರ್ ನಂ.47 ರಲ್ಲಿರುವ ಕರ್ನಾಟಕ ರಾಜ್ಯ ಬೀಜ ನಿಗಮದಲ್ಲಿರುವ ಯಂತ್ರಗಳಿಂದ ಆಗುತ್ತಿರುವ ಶಬ್ಧ ಮಾಲಿನ್ಯ ನಿಯಂತ್ರಣ ಮಾಡಬೇಕು ಎಂದು ಒತ್ತಾಯಿಸಿ ನವನಗರದ ಮುಚಖಂಡಿ ಅತಿಥಿ ಬಡಾವಣೆಯ ನಿವಾಸಿಗಳು ಪ್ರತಿಭಟನೆ ನಡೆಸಿದರು.

ನವನಗರದ ಸೆ.47ರಲ್ಲಿರುವ ಕರ್ನಾಟಕ ರಾಜ್ಯ ಬೀಜ ನಿಗಮದದ ಸಂಸ್ಕರಣಾ ಘಟಕದ ಮುಂದೆ ಪ್ರತಿಭಟನೆ ನಡೆಸಿದ ಮುಚಖಂಡಿ ಅತಿಥಿ ಬಡಾವಣೆಯ ನಿವಾಸಿಗಳು ಬೀಜ ಸಂಸ್ಕರಣಾ ಘಟಕದಿಂದ ಹೊರ ಬರುವ ಶಬ್ಧವನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿ ಮನವಿಯನ್ನು ನಿಗಮದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರೇಣುಕಾ ಹೂವಿನಹಳ್ಳಿ, ಮುಚಖಂಡಿ ಅತಿಥಿ ಬಡಾವಣೆಗೆ ಹತ್ತಿಕೊಂಡಿರುವ ಕರ್ನಾಟಕ ರಾಜ್ಯ ಬೀಜ ನಿಗಮದ ಸಂಸ್ಕರಣಾ ಘಟಕದಿಂದ ನಿತ್ಯ ಬೆಳಗ್ಗೆ 10.30ರಿಂದ ಸಂಜೆ 6 ಗಂಟೆಯವರೆಗೆ ಯಂತ್ರದಿಂದ ಬರುವ ಶಬ್ಧದಿಂದ ಮನೆಯಲ್ಲಿರಲು ಕಿರಿಕಿರಿಯಾಗುತ್ತಿದೆ. ಮನೆಯ ಬಾಗಿಲು ಹಾಕಿದರೂ ಜೋರಾದ ಶಬ್ಧ ಬರುತ್ತಿದೆ. ಕಿವಿಯಲಿ ಹತ್ತಿ ಇಟ್ಟುಕೊಳ್ಳುವ ಸ್ಥಿತಿ ಬಂದಿದೆ. ಇದನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕೃಷಿ ಇಲಾಖೆ ಅಧಿಕಾರಿಗಳು, ಕೃಷಿ ಸಚಿವರು ಸೇರಿ ಸಂಬಂಧಿಸಿದವರು ಇತ್ತ ಗಮನಹರಿಸಿ ಶಬ್ಧ ಮಾಲಿನ್ಯ ತಡೆಗಟ್ಟಬೇಕು ಎಂದು ಒತ್ತಾಯಿಸಿದರು.

ರೇಣುಕಾ ಹೆರಕಣ್ಣವರ ಮಾತನಾಡಿ, ಬೆಳಗ್ಗೆಯಿಂದ ಸಂಜೆಯವರೆಗೆ ಬೀಜ ನಿಗಮದ ಯಂತ್ರಗಳ ಶಬ್ಧ ಜೋರಾಗಿ ಕೇಳುತ್ತಿರುವುದರಿಂದ ಮನೆಯಲ್ಲಿ ಮಕ್ಕಳಿಗೆ ಅಭ್ಯಾಸ ಮಾಡಲು ಸಹ ಕಿರಿಕಿರಿಯಾಗುತ್ತಿದೆ. ಯಂತ್ರದ ಶಬ್ಧ ನಿಲ್ಲುವವರೆಗೂ ಮನೆಯ ಬಾಗಿಲು, ಕಿಟಕಿಗಳನ್ನು ಹಾಕಿಕೊಂಡೇ ಇರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟವರು 15 ದಿನದಲ್ಲಿ ಈ ಶಬ್ಧವನ್ನು ನಿಯಂತ್ರಸದಿದ್ದರೆ ಬೀಜ ನಿಗಮದ ಕಚೇರಿ ಮುಂದೆ ಬಡಾವಣೆಯ ನಿವಾಸಿಗಳುದೊಡ್ಡಮಟ್ಟದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


ವಕೀಲರಾದ ಎಸ್.ಪಿ.ಹೂವಿನಹಳ್ಳಿ ಮಾತನಾಡಿ, ಬೀಜ ನಿಗಮದ ಯಂತ್ರಗಳಿಂದ ಬರುವ ಶಬ್ಧ ನಿಯಂತ್ರಿಸಬೇಕು ಎಂದು ಮೌಖಿಕವಾಗಿ ನಿಗಮದಲ್ಲಿರುವ ವ್ಯವಸ್ಥಾಪಕರ ಗಮನಕ್ಕೆ ತಂದರೂ ಇದುವೆರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಜನವಸತಿ ಪ್ರದೇಶದಲ್ಲಿ ಇಷ್ಟೊಂದು ಯಂತ್ರದ ಶಬ್ಧ ಬರುತ್ತಿದ್ದರೂ ಅದಕ್ಕೆ ಪರ್ಯಾಯ ಮಾರ್ಗವನ್ನು ಇಲ್ಲಿಯ ಅಧಿಕಾರಿಗಳು ಕೈಗೊಂಡಿಲ್ಲ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಇತ್ತ ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಲಚ್ಚವ್ವ ಅಂಬಿಗೇರ ಮಾತನಾಡಿ, ವಯಸ್ಸಾದವರು ಮನೆಯಲ್ಲಿರದೇ ಸಂಜೆಯವರೆಗೂ ಮನೆಬಿಟ್ಟು ಬೇರೆ ಕಡೆ ಹೋಗಬೇಕಾಗಿದೆ. ಈ ಶಬ್ಧ ಮಾಲಿನ್ಯ ನಿಯಂತ್ರಿಸದಿದ್ದರೆ ನಮ್ಮ ಬಡಾವಣೆಯಲ್ಲಿ ವಯಸ್ಸಾದವರು ಮನೆಯಲ್ಲಿದ್ದಾಗ ಶಬ್ಧದಿಂದ ಆಘಾತಕ್ಕೆ ಒಳಗಾಗುವಂತಹ ಸ್ಥಿತಿ ಉಂಟಾಗಿದೆ. ಇನ್ನೂ ಮನೆಯಲ್ಲಿ ಮಧ್ಯಾಹ್ನ ವಿಶ್ರಾಂತಿ ಪಡೆಯಬೇಕಾದರೆ ನಿದ್ದೆ ಮಾಡುವಾಗಲೂ ಸಹ ಈ ಶಬ್ಧದಿಂದ ತಲೆ ನೋವು ಶುರುವಾಗಿದೆ. ಇದರ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಬೀಜ ನಿಗಮ ವ್ಯವಸ್ಥಾಪಕ ಆಸೀಫ್‌ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿ, ಪ್ರತಿಗಳನ್ನು ಕೃಷಿ ಸಚಿವ ಚೆಲುವರಾಯಸ್ವಾಮಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಹಾಗೂ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಕಳುಹಿಸಿದರು.

ಪ್ರತಿಭಟನೆಯಲ್ಲಿ ವಕೀಲ ಎಸ್.ಪಿ.ಹೂವಿನಹಳ್ಳಿ, ಎಂ.ಎಲ್.ಅಂಬಿಗೇರ, ದ್ರಾಕ್ಷಾಯಣಿ ಹೆರಕಣ್ಣವರ, ಈರವ್ವ ಬಣಕಾರ, ಚಂದ್ರವ್ವ ಅಂತಾಪುರ, ಬಸಪ್ಪ ಶಿಕ್ಕೇರಿ, ಡಿ.ವಿ.ಹೆರಕಣ್ಣವರ, ಲಕ್ಷ್ಮವ್ವ ನೀರಲಕೇರಿ, ಪಿ.ಜಿ.ಹೆರಕಣ್ಣವರ, ಎಸ್.ಎಚ್.ಹೆರಕಣ್ಣವರ, ಬಸಗಂಗವ್ವ ಗಾಣಿಗೇರ, ರೇಣುಕಾ ಗಾಣಿಗೇರ, ಗುರುಸಿದ್ದವ್ವ ಅಂಬಲಿಕೊಪ್ಪ, ಎಸ್.ಎಸ್.ಹಿರೇಮಠ, ಎಂ.ಎಲ್.ಅಂಬಿಗೇರ, ಸುನಂದ ಗಾಣಿಗೇರ, ಮಲ್ಲವ್ವ ಗಾಣಿಗೇರ , ಸಿ.ಎಸ್.ರಾಯಚೂರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.