ಉತಾರ ನೀಡುವಂತೆ ಕೆಂಗೇರಿಮಡ್ಡಿ ನಿವಾಸಿಗಳ ಆಗ್ರಹ

| Published : Mar 12 2024, 02:03 AM IST

ಸಾರಾಂಶ

ಮಹಾಲಿಂಗಪುರ ಪಟ್ಟಣದ ವ್ಯಾಪ್ತಿಯ ಕೆಂಗೇರಿಮಡ್ಡಿ ಬಡಾವಣೆಯ ಸರ್ವೇ ನಂ.29/1 ಜಮೀನಿನಲ್ಲಿ ವಾಸಿಸುತ್ತಿರುವ ಸುಮಾರು 520 ಬಡಕುಟುಂಬಗಳಿಗೆ ಸರ್ಕಾರ ಅಧಿಕೃತ ಉತಾರ ನೀಡಬೇಕು ಒತ್ತಾಯಿಸಿದ ಬಡವಾಣೆ ಸದಸ್ಯರು ಸೋಮವಾರ ಬೆಳಗ್ಗೆ ಸ್ಥಳೀಯ ಜಿ.ಎಲ್.ಬಿ.ಸಿ ಅತಿಥಿಗೃದಲ್ಲಿ ತಹಸೀಲ್ದಾರಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಪಟ್ಟಣದ ವ್ಯಾಪ್ತಿಯ ಕೆಂಗೇರಿಮಡ್ಡಿ ಬಡಾವಣೆಯ ಸರ್ವೇ ನಂ.29/1 ಜಮೀನಿನಲ್ಲಿ ವಾಸಿಸುತ್ತಿರುವ ಸುಮಾರು 520 ಬಡಕುಟುಂಬಗಳಿಗೆ ಸರ್ಕಾರ ಅಧಿಕೃತ ಉತಾರ ನೀಡಬೇಕು ಒತ್ತಾಯಿಸಿದ ಬಡವಾಣೆ ಸದಸ್ಯರು ಸೋಮವಾರ ಬೆಳಗ್ಗೆ ಸ್ಥಳೀಯ ಜಿ.ಎಲ್.ಬಿ.ಸಿ ಅತಿಥಿಗೃದಲ್ಲಿ ತಹಸೀಲ್ದಾರಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಸದಸ್ಯ ಶೇಖರ ಅಂಗಡಿ, ಪುರಸಭೆ ವ್ಯಾಪ್ತಿಯ ಕೆಂಗೇರಿಮಡ್ಡಿ ಬಡಾವಣೆ ಕಂದಾಯ ಇಲಾಖೆ ಮತ್ತು ಪುರಸಭೆಗೆ ಸೇರಿದ ಜಾಗದಲ್ಲಿ ಸುಮಾರು 520 ಬಡ ಕುಟುಂಬಗಳು 1-1-2010 ಕ್ಕಿಂತ ಮುಂಚಿತವಾಗಿ ಮನೆ ಅಥವಾ ನಿವೇಶನ ಹೊಂದಿಲ್ಲ. ಕರ್ನಾಟಕ ಭೂಕಂದಾಯ ನಿಯಮಾವಳಿ 1966, ನಿಯಮ 108ಯು ಮತ್ತು 108 ಆರ್.ಡಿ ಅಡಿಯಲ್ಲಿ ಈ ನಿವಾಸಿಗಳು ಆದೇಶ ಪತ್ರಗಳ ಸಕ್ರಮಕ್ಕೆ ಅರ್ಹರಿರುವುದಾಗಿ ತಹಸೀಲ್ದಾರ್‌ 8-3-2023ರಂದು ಶಾಸಕ ಸಿದ್ದು ಸವದಿ ನೇತೃತ್ವದಲ್ಲಿ ಹಂಗಾಮಿ ಆದೇಶ ಪತ್ರ ನೀಡಿದ್ದಾರೆ.

ಈ ನಿವಾಸಿಗಳು ಹಂಗಾಮಿ ಆದೇಶದ ಷರತ್ತುಗಳಿಗೆ ಅರ್ಹರಿದ್ದಾರೆ ಎಂದು ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದ್ದರೂ ಆದೇಶದ ಎಲ್ಲಾ ಷರತ್ತುಗಳನ್ನು ಫಲಾನುಭವಿಗಳು ಪೂರೈಸಲು ಸಿದ್ಧರಿದ್ದರೂ ಇದುವರೆಗೂ ಅಧಿಕೃತ ಉತಾರ ನೀಡಿಲ್ಲ.

ಇಲ್ಲಿನ ನಿವಾಸಿಗಳು ಕೂಲಿ ಕಾರ್ಮಿಕರು, ನಿರ್ಗತಿಕರು, ಕಡುಬಡವರಾಗಿದ್ದು, ಈ ಪತ್ರ ತಲುಪಿದ ಒಂದು ವಾರದೊಳಗೆ ಎಲ್ಲರಿಗೂ ಅಧಿಕೃತ ಉತಾರ ನೀಡಬೇಕು ಎಂದು ಒತ್ತಾಯಿಸಿದರು. ಈಗಾಗಲೇ ಕಂದಾಯ ಇಲಾಖೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ಸ್ಥಳೀಯ ಮುಖ್ಯಾಧಿಕಾರಿಗೂ ಮನವಿ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ವಾರ್ಡ್‌ ಸದಸ್ಯರಾದ ಮಹಾನಿಂಗ ಶಿವಣಗಿ, ಮಹಾದೇವ ಸಾವಂತ, ಶ್ರೀಶೈಲ ದೊಡಮನಿ, ನಾಗಲಿಂಗ ಬಡಗೇರ, ಶಿವಾನಂದ ಹೂಗಾರ, ಸುರೇಶ ಗೌಂಡಿ ಸೇರಿದಂತೆ ಹಲವರು ಇದ್ದರು.