ಬೇಸಿಗೆಯ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದಂತೆಯೇ ಪಟ್ಟಣದ ವಿವಿಧ ವಾರ್ಡುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಮಹಾಲಿಂಗಪುರ ಪುರಸಭೆಯ ೧೪ ಮತ್ತು ೧೫ನೇ ವಾರ್ಡಿನ ಕೆಂಗೇರಿಮಡ್ಡಿ ನಿವಾಸಿಗಳು ನೀರಿಗಾಗಿ ಪರದಾಡುವಂತಾಗಿದೆ. ೧೫ ದಿನಗಳಿಂದ ಸಮರ್ಪಕ ನೀರು ಪೂರೈಕೆಯಾಗದ ಹಿನ್ನೆಲೆ ಆಕ್ರೋಶಗೊಂಡ ನಿವಾಸಿಗಳು ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದರು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಬೇಸಿಗೆಯ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದಂತೆಯೇ ಪಟ್ಟಣದ ವಿವಿಧ ವಾರ್ಡುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಮಹಾಲಿಂಗಪುರ ಪುರಸಭೆಯ ೧೪ ಮತ್ತು ೧೫ನೇ ವಾರ್ಡಿನ ಕೆಂಗೇರಿಮಡ್ಡಿ ನಿವಾಸಿಗಳು ನೀರಿಗಾಗಿ ಪರದಾಡುವಂತಾಗಿದೆ. ೧೫ ದಿನಗಳಿಂದ ಸಮರ್ಪಕ ನೀರು ಪೂರೈಕೆಯಾಗದ ಹಿನ್ನೆಲೆ ಆಕ್ರೋಶಗೊಂಡ ನಿವಾಸಿಗಳು ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದರು.೧೫ ದಿನಗಳ ಹಿಂದೆ ಪುರಸಭೆ ಮುಖ್ಯಾಧಿಕಾರಿ ನಾಮದೇವ ಲಮಾಣಿ ಸ್ಥಳಕ್ಕೆ ಭೇಟಿ ನೀಡಿ ನೀರಿನ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು. ಆದರೆ ಯಾವುದೇ ಪರಿಹಾರ ದೊರೆಯದ ಹಿನ್ನೆಲೆ ನಿವಾಸಿಗಳು ಮತ್ತೆ ಒಗ್ಗೂಡಿ ಪುರಸಭೆ ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಈಗಾಗಲೇ ೧೩ನೇ ವಾರ್ಡಿನಲ್ಲಿ ಬೋರ್ವೆಲ್ ಇದ್ದು, ಅದನ್ನು ದುರಸ್ತಿಗೊಳಿಸಿ ಕೆಂಗೇರಿಮಡ್ಡಿ ಭಾಗದ ಜನರಿಗೆ ಅನುಕೂಲವಾಗುವಂತೆ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಅಗತ್ಯವಿದ್ದಲ್ಲಿ ಬೋರ್ವೆಲ್ನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.ನಿವಾಸಿಗಳ ಅಹವಾಲು ಆಲಿಸಿದ ಮುಖ್ಯಾಧಿಕಾರಿ ನಾಮದೇವ ಲಮಾಣಿ ಅವರು, ಬೇಸಿಗೆಯ ಹಿನ್ನೆಲೆಯಲ್ಲಿ ಕೆಂಗೇರಿಮಡ್ಡಿ ಮಾತ್ರವಲ್ಲದೆ ಪಟ್ಟಣದ ಇತರೆ ಭಾಗಗಳಲ್ಲಿಯೂ ನೀರಿನ ಸಮಸ್ಯೆ ಎದುರಾಗಿದೆ. ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಸಮಸ್ಯೆ ಇರುವ ಪ್ರದೇಶಗಳಿಗೆ ಆದ್ಯತೆ ನೀಡಿ ಕೂಡಲೇ ಕ್ರಮ ಕೈಗೊಳ್ಳಲಾಗುವುದಾಗಿ ಭರವಸೆ ನೀಡಿದರು. ಮುಖ್ಯಾಧಿಕಾರಿ ಸೂಚನೆಯಂತೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ತಕ್ಷಣವೇ ನೀರಿನ ಸಮಸ್ಯೆಯ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಂಡು ನೀರಿನ ವ್ಯವಸ್ಥೆ ಕಲ್ಪಿಸಿದರು.
ಬೇಸಿಗೆಯಲ್ಲಿ ಪಟ್ಟಣದ ಯಾವುದೇ ವಾರ್ಡಿನ ನಿವಾಸಿಗಳು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ಕೇವಲ ಪ್ರತಿಭಟನೆ ಹಾಗೂ ಮುತ್ತಿಗೆ ನಡೆದಾಗ ಮಾತ್ರ ಅಧಿಕಾರಿಗಳು ಎಚ್ಚೆತ್ತುಕೊಳ್ಳದೆ, ಮುಂಚಿತವಾಗಿಯೇ ಸಮಸ್ಯೆ ಗುರುತಿಸಿ ಬೋರ್ವೆಲ್ ದುರಸ್ತಿ, ಪರ್ಯಾಯ ನೀರಿನ ಮೂಲಗಳ ವ್ಯವಸ್ಥೆ ಹಾಗೂ ಸಮರ್ಪಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ತಾತ್ಕಾಲಿಕ ಪರಿಹಾರಕ್ಕೆ ಸೀಮಿತವಾಗದೆ ಶಾಶ್ವತ ವ್ಯವಸ್ಥೆ ಕಲ್ಪಿಸಬೇಕು ಎಂಬುದು ನಿವಾಸಿಗಳ ಆಗ್ರಹವಾಗಿದೆ.ಈ ಸಂದರ್ಭದಲ್ಲಿ ತಿಪ್ಪಣ್ಣ ಬಂಡಿವಡ್ಡರ, ಶಂಕರ,ಕಾಂತು, ವಿಠ್ಠಲ ಅವಟಿ, ಈರಪ್ಪ ಧರ್ಮಟ್ಟಿ, ಶಂಕರ ಶಿರೋಳ, ಸಂಗಪ್ಪ ಮಡ್ಡೆನ್ನವರ, ರಾಜು ನಿಡೋಣಿ ಸೇರಿದಂತೆ ವಾರ್ಡಿನ ಮಹಿಳೆಯರಾದ ರುಕ್ಮವ್ವ ಚನ್ನಾಳ, ಸರೋಜಿನಿ ಆರಿ, ಶಾರದಾ ಜಿಡ್ಡಿಮನಿ, ಸಾವಿತ್ರಿ ಹೂಗಾರ, ಕಾವೇರಿ ಬರುಡ, ನಂದಾ ಹುಣಸ್ಯಾಳ, ಗೀತಾ ಗೌಡರ, ನೇತ್ರಾ ಕಡಕೋಳ, ಅನ್ನಪೂರ್ಣಾ ಚಿಮ್ಮಡ, ಪೂಜಾ ಅಸ್ಕಿ, ಸೀಮಾ ದರೂರ ಸೇರಿದಂತೆ ಅನೇಕ ನಿವಾಸಿಗಳಿದ್ದರು.
ಬಾಕ್ಸ್.ಮಳೆಕೊರತೆ ಹಾಗೂ ಬೇಸಿಗೆಯ ಹಿನ್ನೆಲೆ ಕೆಂಗೇರಿಮಡ್ಡಿ ಮಾತ್ರವಲ್ಲದೆ ಪಟ್ಟಣದ ಎಲ್ಲೆಡೆ ನೀರಿನ ಸಮಸ್ಯೆ ಎದುರಾಗುತ್ತಿದೆ. ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಸಮಸ್ಯೆ ಇರುವ ಸ್ಥಳಗಳಿಗೆ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲನೆ ನಡೆಸಿ, ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.
-ನಾಮದೇವ ಲಮಾಣಿ, ಪುರಸಭೆ ಮುಖ್ಯಾಧಿಕಾರಿ