ಸಾರಾಂಶ
ಕಾರಟಗಿ: ಇಲ್ಲಿನ ೬ನೇ ವಾರ್ಡ್‌ನ ಗದ್ದೇರ ಓಣಿಯಲ್ಲಿನ ಇಕ್ಕಟ್ಟಾದ ರಸ್ತೆ ಅಗಲೀಕರಣಕ್ಕೆ ನಿವಾಸಿಗಳೆ ಮುಂದಾಗಿ ರಸ್ತೆಯ ಮೇಲೆ ಇದ್ದ ಕಟ್ಟೆ, ಕೋಟೆಗಳನ್ನು ಸ್ವತಃ ತೆರವುಗೊಳಿಸಿದ್ದಾರೆ.
ಡಾ. ರಾಜಕುಮಾರ ರಂಗ ಮಂದಿರದ ಮುಂಭಾಗದಿಂದ ಕಾಳಪ್ಪ ಬಡಿಗೇರ ಅವರ ಮನೆಯ ವರೆಗೂ ರಸ್ತೆಯ ಇಕ್ಕೆಲಗಳಲ್ಲಿ ನಿವಾಸಿಗಳು ತಮ್ಮ ಮನೆಗಳ ಮುಂದಿನ ರಸ್ತೆಯ ಜಾಗ ಅತಿಕ್ರಮಿಸಿ ಕಾಂಪೌಂಡ್, ಮೆಟ್ಟಿಲುಗಳನ್ನು, ಶೌಚಾಲಯಗಳನ್ನು, ಸಿಮೆಂಟ್ ಕಟ್ಟೆಗಳನ್ನು ಅಲ್ಲದೇ ಕೆಲವರು ಕೋಣೆಗಳನ್ನು ಕಟ್ಟಿಕೊಂಡಿದ್ದರು. ಇದರಿಂದಾಗಿ ಬಂಡಿಗಳು ಓಡಾಡುತ್ತಿದ್ದ ರಸ್ತೆಗಳಲ್ಲಿ ದ್ವಿಚಕ್ರ ವಾಹನ ಓಡಾಟ ಕಠಿಣವಾಗಿತ್ತು. ಮನುಷ್ಯರು ಸುಲಭವಾಗಿ ತಿರುಗಾಡುವುದು ಕಷ್ಟಸಾಧ್ಯವಾಗಿತ್ತು. ತಮ್ಮ ಮನೆಗಳಿಗೆ ಸರಕು ಸರಂಜಾಮುಗಳನ್ನು ಸಾಗಿಸಲು ಸಾಧ್ಯವಾಗದೆ ಹೊತ್ತುಕೊಂಡೇ ತಿರುಗಾಡುವಂತಹ ಪರಿಸ್ಥಿತಿ ಬಂದೊದಗಿತ್ತು.ಈ ಒಣಿಯಲ್ಲಿ ದಿಢೀರ್ ಅನಾರೋಗ್ಯಕ್ಕೆ ತುತ್ತಾದಲ್ಲಿ ಅವರನ್ನು ಬೈಕ್ ಮತ್ತು ಇನ್ನಿತರ ಯಾವುದೇ ವಾಹನದಲ್ಲಿ ಸಾಗಿಸಲು ಸಾಧ್ಯವಾಗದಂಥ ದುಸ್ಥಿತಿ ಇಲ್ಲಿತ್ತು. ಕಳೆದ ವರ್ಷ ಈ ಓಣಿಯಲ್ಲಿ ಇಬ್ಬರಿಗೆ ಹೃದಯಾಘಾತವಾದಾಗ ಸಕಾಲಕ್ಕೆ ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅವರು ಮೃತಪಟ್ಟಿದ್ದರು. ಈ ಎಲ್ಲ ಅಂಶಗಳನ್ನು ನೆನದ ನಿವಾಸಿಗಳು ಗುರುವಾರ ಇಕ್ಕೆಲಗಳಲ್ಲಿನ ತಮ್ಮ ತಮ್ಮ ಮನೆಗಳ ಮುಂದಿನ ಆವರಣ ಗೋಡೆ, ಮನೆ ಚಾವಡಿ, ಮೆಟ್ಟಿಲು, ಶೌಚಾಲಯ, ಸಿಮೆಂಟ್ ಕಟ್ಟೆಗಳನ್ನು- ತೆರವು ಮಾಡಿ ಪುರಸಭೆ ರಸ್ತೆಯ ಅಗಲೀಕರಣ ಕಾರ್ಯಕ್ಕೆ ಸಹಕರಿಸಿ ಮಾದರಿಯಾಗಿದ್ದಾರೆ. ಸ್ವಯಂ ಪ್ರೇರಿತರಾಗಿ ಎಚ್ಚೆತ್ತುಕೊಂಡು ತಮ್ಮ ಓಣಿಯ ಇಕ್ಕಟ್ಟಾದ ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದಾರೆ.
ಪುರಸಭೆ ಮುಖ್ಯಾಧಿಕಾರಿ ಸುರೇಶ ಶೆಟ್ಟರ್ ಗುರುವಾರ ಜೆಸಿಬಿ ಮತ್ತು ತಮ್ಮ ಸಿಬ್ಬಂದಿಯೊಂದಿಗೆ ವಾರ್ಡ್‌ಗೆ ಆಗಮಿಸಿ, ರಸ್ತೆ ಅಗಲೀಕರಣಕ್ಕೆ ಮುಂದಾದಾಗ ವಾರ್ಡ್‌ನ ಸದಸ್ಯ ಹಿರೇಬಸಪ್ಪ ಸಜ್ಜನ್ ಹಾಗೂ ನಿವಾಸಿಗಳಾದ ಅಮರೇಶಪ್ಪ ಸಾಲಗುಂದಾ, ಬಸವರಾಜ ಗದ್ದಿ, ಚನ್ನಕುಮಾರ ಕೊಟಗಿ ಇನ್ನಿತರರು ರಸ್ತೆಯ ಉದ್ದಕ್ಕೂ ಅತಿಕ್ರಮವಾಗಿ ಕಟ್ಟಿದ ಎಲ್ಲ ಕಟ್ಟಡಗಳನ್ನು ತೆರವುಗೊಳಿಸಲು ಸಹಕರಿಸಿದರು.ಈ ಕುರಿತು ಮುಖ್ಯಾಧಿಕಾರಿ ಸುರೇಶ ಮಾತನಾಡಿ, ರಸ್ತೆ ಅಗಲೀಕರಣ ಮಾಡಿ ನಗರೋತ್ಥಾನ ಯೋಜನೆಯ ಅನುದಾನದಡಿ, ಡ್ರೈನೇಜ್ ಮತ್ತು ಫೇವರ್ಸ್ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.ಡಾ. ರಾಜಕುಮಾರ್ ರಂಗಮಂದಿರದಿಂದ ಗದ್ದಿ ಮತ್ತು ಕೊಟಗಿ ಅವರ ಮನೆಗಳನ್ನು ದಾಟಿ ಶರಣಬಸವೇಶ್ವರ ಹಾಗೂ ಸುಂಕಲಮ್ಮ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಇದಾಗಿದೆ. ಆರು ಮತ್ತು ಏಳನೇ ವಾರ್ಡ್‌ಗೂ ಮತ್ತು ಅಲ್ಲಿಂದ ಮುಂದೆ ವಾರ್ಡ್ ನಂ. ಒಂದು ಹಾಗೂ ಎರಡನೇ ವಾರ್ಡ್‌ಗೂ ತೆರಳುವ ಮುಖ್ಯರಸ್ತೆ ಇದಾಗಿದೆ. ಆ ಕಾರಣಕ್ಕೆ ನಾವೇ ಸ್ವಯಂ ಪ್ರೇರಿತವಾಗಿ ಕಟ್ಟಡಗಳನ್ನು ತೆರವುಗೊಳಿಸಿ ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದೇವೆ ಎಂದು ವಾರ್ಡ್ ನಿವಾಸಿಗಳಾದ ರುದ್ರಯ್ಯಸ್ವಾಮಿ ಮತ್ತು ಶಂಭು ಗುಂಜಳ್ಳಿ ಹೇಳುತ್ತಾರೆ.