ಧರ್ಮಸ್ಥಳ ಅಪಪ್ರಚಾರ ವಿರುದ್ಧ ಖಂಡನಾ ನಿರ್ಣಯ: 22ರಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಸಭೆ

| Published : Aug 19 2025, 01:00 AM IST

ಧರ್ಮಸ್ಥಳ ಅಪಪ್ರಚಾರ ವಿರುದ್ಧ ಖಂಡನಾ ನಿರ್ಣಯ: 22ರಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮಸ್ಥಳ ಸಂಸ್ಥೆಗಳ ವಿರುದ್ಧ ನಡೆಯುತ್ತಿರುವ ಅವಹೇಳನ, ಅಪಪ್ರಚಾರಗಳ ವಿರುದ್ಧ ಆ.22ರಂದು ಬೃಹತ್ ಪ್ರತಿಭಟನಾ ಸಭೆ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವ ಬಗ್ಗೆ ಭಾರತೀಯ ಜೈನ ಮಿಲನ್ ತೀರ್ಮಾನಿಸಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಕುರಿತು ಅವ್ಯಾಹತ ನಿಂದನೆ, ಅಪಪ್ರಚಾರ, ಅವಹೇಳನ ವಿರುದ್ಧ ಭಾರತೀಯ ಜೈನ್ ಮಿಲನ್ ಖಂಡನಾ ನಿರ್ಣಯ ಕೈಗೊಂಡಿದೆ. ನಗರದ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಸೋಮವಾರ ನಡೆದ ತುರ್ತು ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಸಭೆಯ ಬಳಿಕ ಮಂಗಳೂರಿನ ಸರ್ವ ಸಮಾಜಗಳ ಮುಖಂಡರೊಂದಿಗೆ ಸಮಾಲೋಚನಾ ಸಭೆ ನಡೆಯಿತು. ಧರ್ಮಸ್ಥಳ ಸಂಸ್ಥೆಗಳ ವಿರುದ್ಧ ನಡೆಯುತ್ತಿರುವ ಅವಹೇಳನ, ಅಪಪ್ರಚಾರಗಳ ವಿರುದ್ಧ ಆ.22ರಂದು ಬೃಹತ್ ಪ್ರತಿಭಟನಾ ಸಭೆ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವ ಬಗ್ಗೆ ಚರ್ಚೆ ನಡೆಯಿತು.

ಖಂಡನಾ ನಿರ್ಣಯ ಸಭೆಯಲ್ಲಿ ಮಾತನಾಡಿದ ಭಾರತೀಯ ಜೈನ್ ಮಿಲನ್ ವಲಯ 8ರ ಉಪಾಧ್ಯಕ್ಷ ವೀರ್ ಸುದರ್ಶನ್ ಜೈನ್, ಶ್ರೀ ಕ್ಷೇತ್ರ ಧರ್ಮಸ್ಥಳವು ಹಿಂದೂ-ಜೈನ ಧರ್ಮದ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ. ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಚಿಂತನೆ, ಖ್ಯಾತಿ ಹಾಗೂ ಅವರಿಗೆ ಸಲ್ಲುತ್ತಿರುವ ಮನ್ನಣೆಯನ್ನು ಸಹಿಸದ ಕೆಲವ್ಯಕ್ತಿಗಳ ಗುಂಪು ಆಧಾರ ರಹಿತ ಆರೋಪ, ಅಪಪ್ರಚಾರ ನಡೆಸುತ್ತಿರುವುದು ಖಂಡನೀಯ. ಎಸ್‌ಐಟಿ ತನಿಖೆ ನಡೆಯುತ್ತಿರುವ ಈ ಸಂದರ್ಭದಲ್ಲೂ ಸುಳ್ಳು ಮಾಹಿತಿಗಳನ್ನು ನಿರಂತರವಾಗಿ ಕೆಲವು ವ್ಯಕ್ತಿಗಳು ಹರಡಿಸುತ್ತಿದ್ದಾರೆ. ಅವರ ಮೇಲೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಭಾರತೀಯ ಜೈನ್ ಮಿಲನ್ ಪ್ರಮುಖರಾದ ದಿಲೀಪ್ ಜೈನ್, ರತ್ನಾಕರ ಜೈನ್, ಸುರೇಶ್ ಬಳ್ಳಾಲ್, ಕೆ ರಾಜವರ್ಮ ಬಳ್ಳಾಲ್, ಪುಷ್ಪರಾಜ್ ಜೈನ್, ದರ್ಶನ್ ಜೈನ್ ಮತ್ತಿತರರು ಇದ್ದರು.

ಸರ್ವ ಸಮಾಜಗಳ ಸಮಾಲೋಚನಾ ಸಭೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಮೋಹನ್ ಆಳ್ವ, ವಿಎಚ್‌ಪಿ ಮುಖಂಡರಾದ ಎಂ.ಬಿ. ಪುರಾಣಿಕ್, ಎಚ್‌.ಕೆ. ಪುರುಷೋತ್ತಮ್, ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಡಾ.ಕೆ.ಸಿ ನಾಯ್ಕ್‌, ಸಲಹೆಗಾರ ರಮೇಶ್ ಕೆ., ಪ್ರಮುಖರಾದ ಪ್ರದೀಪ್ ಕುಮಾರ್ ಕಲ್ಕೂರ, ಜಿತೇಂದ್ರ ಕೊಟ್ಟಾರಿ, ದಯಾನಂದ ಕತ್ತಲ್‌ಸಾರ್, ಅಜಿತ್‌ಕುಮಾರ್ ಮಾಲಾಡಿ, ನಾಗೇಂದ್ರ, ಉದಯ ಪೂಜಾರಿ ಬಳ್ಳಾಲ್‌ಬಾಗ್, ನಾಗರಾಜ್ ಶೆಟ್ಟಿ, ಸಂತೋಷ್ ಕುಮಾರ್ ಬೋಳಿಯಾರ್ ಮತ್ತಿತರರಿದ್ದರು.