ಹರಿಹರ ಪೌರಾಯುಕ್ತ ಸುಬ್ರಮಣ್ಯ ವರ್ಗಾವಣೆಗೆ ನಿರ್ಣಯ

| Published : Dec 14 2024, 12:45 AM IST

ಹರಿಹರ ಪೌರಾಯುಕ್ತ ಸುಬ್ರಮಣ್ಯ ವರ್ಗಾವಣೆಗೆ ನಿರ್ಣಯ
Share this Article
  • FB
  • TW
  • Linkdin
  • Email

ಸಾರಾಂಶ

ಹರಿಹರ ನಗರಸಭೆ ಪೌರಾಯುಕ್ತ ಸುಬ್ರಮಣ್ಯ ಶ್ರೇಷ್ಠಿ ನಗರಸಭೆ ಅಧ್ಯಕ್ಷೆ, ಸದಸ್ಯರ ಮಾತುಗಳಿಗೆ ಬೆಲೆ ನೀಡದೇ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಆದಕಾರಣ, ಅವರನ್ನು ಬೇರೆಡೆಗೆ ವರ್ಗಾಯಿಸಬೇಕು ಎಂದು ನಗರಸಭೆ ತುರ್ತು ಸಭೆ ನಿರ್ಣಯ ಕೈಗೊಂಡು, ಒತ್ತಾಯಿಸಿದೆ.

- ಸದಸ್ಯರ ಮಾತಿಗೆ ಬೆಲೆ ಕೊಡದೇ ಸರ್ವಾಧಿಕಾರಿ ಧೋರಣೆ: ಆರೋಪ - - - ಕನ್ನಡಪ್ರಭ ವಾರ್ತೆ ಹರಿಹರ

ನಗರಸಭೆ ಪೌರಾಯುಕ್ತ ಸುಬ್ರಮಣ್ಯ ಶ್ರೇಷ್ಠಿ ನಗರಸಭೆ ಅಧ್ಯಕ್ಷೆ, ಸದಸ್ಯರ ಮಾತುಗಳಿಗೆ ಬೆಲೆ ನೀಡದೇ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಆದಕಾರಣ, ಅವರನ್ನು ಬೇರೆಡೆಗೆ ವರ್ಗಾಯಿಸಬೇಕು ಎಂದು ನಗರಸಭೆ ತುರ್ತು ಸಭೆ ನಿರ್ಣಯ ಕೈಗೊಂಡು, ಒತ್ತಾಯಿಸಿದೆ.

ನಗರಸಭೆ ಭವನದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷೆ ಕವಿತಾ ಬೇಡರ್ ಮಾತನಾಡಿ, ಪೌರಾಯುಕ್ತ ಸುಬ್ರಮಣ್ಯ ಶ್ರೇಷ್ಠಿ ಅವರು, ಸದಸ್ಯರಿಗ ಗೌರವ ಕೊಡುತ್ತಿಲ್ಲ. ಸದಸ್ಯರು ಪೌರಾಯುಕ್ತರ ಕೊಠಡಿಗೆ ತೆರಳಿದಾಗ ಸರಿಯಾಗಿ ಮಾತನಾಡುತ್ತಿಲ್ಲ. ತಮ್ಮ ವಾರ್ಡುಗಳ ಸಮಸ್ಯೆಗಳ ಬಗ್ಗೆ ಪ್ರಶ್ನಿಸಿದರೆ ಪರಿಹಾರೋಪಾಯ ಸೂಚಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಾಮಾನ್ಯ ಸಭೆ ನಡೆಸಲು ದಿನಾಂಕ ಗೊತ್ತುಪಡಿಸಲಾಗಿತ್ತು. ಆದರೆ, ಪೌರಾಯುಕ್ತರು ಸಭೆಗೆ ಅಜೆಂಡಾ ಸಿದ್ಧಪಡಿಸದೇ ಬೇಜವಾಬ್ದಾರಿ ಪ್ರದರ್ಶಿಸಿದ್ದಾರೆ. ಸದಸ್ಯರಿಗೆ ಸಭೆ ನಡೆಯುವ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಇದುವರೆಗೆ ಸರ್ವ ಸದಸ್ಯರ ಜೊತೆ ಯಾವುದೇ ವಿಷಯಗಳ ಕುರಿತು ಸಮಗ್ರವಾಗಿ ಚರ್ಚಿಸಿಲ್ಲ. ನಾನು ಪೌರಾಯುಕ್ತ, ನಾನು ಹೇಳಿದ ಹಾಗೆ ಅಧ್ಯಕ್ಷ, ಸದಸ್ಯರು ಕೇಳಬೇಕು ಎಂದು ಸರ್ವಾಧಿಕಾರ ಧೋರಣೆಯಿಂದ ವರ್ತಿಸುತ್ತಿದ್ದಾರೆ. ಈ ಹಿನ್ನೆಲೆ ಅವರನ್ನು ಬೇರೆಡೆಗೆ ವರ್ಗಾಯಿಸಿ ಎಂದು ಜಿಲ್ಲಾಧಿಕಾರಿ, ಪೌರಾಡಳಿತ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರಿಗೆ 21 ಸದಸ್ಯರು ಸಹಿ ಮಾಡಿ ಮನವಿ ನೀಡಲಾಗಿದೆ ಎಂದರು.

ಸದಸ್ಯರಾದ ಲಕ್ಷ್ಮೀ ಮೋಹನ್ ದುರುಗೊಜಿ, ನೂರಸಭಾ ಮನ್ಸೂರಖಾನ್, ರತ್ನಾ ಡಿ. ಉಜ್ಜೇಶ್, ಎಸ್.ಕೆ. ಷಹಜಾದ್ ಸನಾವುಲ್ಲಾ, ಜಮಾಲುದ್ದಿನ್, ಎಂ.ಬಾಬುಲಾಲ್, ದಾದಾ ಖಲಂದರ್, ಎ.ವಾಮನಮೂರ್ತಿ, ಎಂ.ವಿ. ಉಷಾಕಿರಣ ಮಂಜುನಾಥ್, ಪಾರ್ವತಮ್ಮ ಐರಣಿ, ಅಶ್ವಿನಿ ಕೃಷ್ಣಾ, ರೇಷ್ಮಾ ಬಾನು, ಬಿ. ಅಲ್ತಾಫ್, ಇಬ್ರಾಹಿಂ, ನಾಗರತ್ನಮ್ಮ ಎಸ್.ಕೆ, ಆಟೋ ಹನುಮಂತಪ್ಪ, ಪಿ.ಎನ್. ವಿರೂಪಾಕ್ಷಪ್ಪ, ಎಂ.ಆರ್. ಮುಜಾಮಿಲ್, ಎನ್. ರಜನಿಕಾಂತ, ನಿಂಬಕ್ಕ ಚಂದಾಪುರ ಸಭೆಯಲ್ಲಿ ಪಾಲ್ಗೊಂಡಿದ್ದರು.

- - -

ಬಾಕ್ಸ್* ಸಂಜೆ ಕಚೇರಿಗೆ ಬರುವ ಪೌರಾಯುಕ್ತ: ಅಧ್ಯಕ್ಷೆ ಟೀಕೆ

ನಿತ್ಯ ಕಚೇರಿ ಅವಧಿ ಮುಕ್ತಾಯಗೊಂಡ ನಂತರ ಸಂಜೆ ಕಚೇರಿಗೆ ಬರುತ್ತಾರೆ. ಅಧ್ಯಕ್ಷ- ಸದಸ್ಯರಿಗೆ ಸಂಜೆ ಸಮಯದವರೆಗೂ ಕಾಯಿಸಿ, ಸಂಜೆ ಸಮಸ್ಯೆಗಳ ಕುರಿತು ಮಾಹಿತಿ ಕೇಳುತ್ತಾರೆ. ಹೀಗಾಗಿ, ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ. ಸರ್ವ ಸದಸ್ಯರ ಸಾಮಾನ್ಯ ಸಭೆ ಕರೆಯುವಂತೆ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದ್ದರೂ, ಸ್ಪಂದಿಸಿಲ್ಲ ಎಂದು ಅಧ್ಯಕ್ಷೆ ಕವಿತಾ ಬೇಡರ್‌ ಕಿಡಿಕಾರಿದರು.

- - - -12ಎಚ್.ಆರ್.ಆರ್02:

ಹರಿಹರ ನಗರಸಭೆ ಸಭಾ ಭವನದಲ್ಲಿ ಸೇರಿದ್ದ ಸದಸ್ಯರು ಪೌರಾಯುಕ್ತರ ವಗಾವಣೆ ಕುರಿತು ಚರ್ಚಿಸಿ, ನಿರ್ಣಯ ಕೈಗೊಂಡರು.