ವಿಚ್ಛೇದನಕ್ಕೆ ಅವಕಾಶ ನೀಡದೇ ಸುಖಜೀವನಕ್ಕೆ ಸಂಕಲ್ಪ ಮುಖ್ಯ

| Published : Aug 27 2024, 01:35 AM IST / Updated: Aug 27 2024, 01:36 AM IST

ಸಾರಾಂಶ

ಸಾಮೂಹಿಕ ವಿವಾಹಗಳು ಪ್ರತಿ ವರ್ಷವೂ ಅಜ್ಜಯ್ಯನ ಕ್ಷೇತ್ರದಲ್ಲಿ ಜರುಗುತ್ತಿವೆ. ನವ ಜೋಡಿಗಳು ವಿಚ್ಛೇದನಕ್ಕೆ ಅವಕಾಶ ನೀಡದೇ ಸುಖಜೀವನ ಸಾಗಿಸಲು ಸಂಕಲ್ಪ ಮಾಡಬೇಕು ಎಂದು ಯಳನಾಡು ಮಹಾಸಂಸ್ಥಾನದ ಜ್ಞಾನಪ್ರಭು ಸಿದ್ಧರಾಮ ದೇಶೀಕೇಂದ್ರ ಸ್ವಾಮೀಜಿ ನುಡಿದಿದ್ದಾರೆ.

- ಉಕ್ಕಡಗಾತ್ರಿಯಲ್ಲಿ ಕಟ್ಟಡಗಳ ಲೋಕಾರ್ಪಣೆ, ಧಾರ್ಮಿಕ ಸಮಾರಂಭದಲ್ಲಿ ಜ್ಞಾನಪ್ರಭು ಸಿದ್ಧರಾಮ ಶ್ರೀ - - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಸಾಮೂಹಿಕ ವಿವಾಹಗಳು ಪ್ರತಿ ವರ್ಷವೂ ಅಜ್ಜಯ್ಯನ ಕ್ಷೇತ್ರದಲ್ಲಿ ಜರುಗುತ್ತಿವೆ. ನವ ಜೋಡಿಗಳು ವಿಚ್ಛೇದನಕ್ಕೆ ಅವಕಾಶ ನೀಡದೇ ಸುಖಜೀವನ ಸಾಗಿಸಲು ಸಂಕಲ್ಪ ಮಾಡಬೇಕು ಎಂದು ಯಳನಾಡು ಮಹಾಸಂಸ್ಥಾನದ ಜ್ಞಾನಪ್ರಭು ಸಿದ್ಧರಾಮ ದೇಶೀಕೇಂದ್ರ ಸ್ವಾಮೀಜಿ ನುಡಿದರು.

ಇಲ್ಲಿಗೆ ಸಮೀಪದ ಸುಕ್ಷೇತ್ರ ಉಕ್ಕಡಗಾತ್ರಿ ಗ್ರಾಮದಲ್ಲಿ ಶುಕ್ರವಾರ ವಿವಿಧ ನೂತನ ಕಟ್ಟಡಗಳ ಲೋಕಾರ್ಪಣೆ ಮತ್ತು ಸರ್ವಧರ್ಮ ಸಾಮೂಹಿಕ ವಿವಾಹ, ನವಜೋಡಿಗಳಿಗೆ ಹೊಲಿಗೆ ಯಂತ್ರ ವಿತರಣೆ, ಆದಿಯೋಗಿ ಶಿವ ಶಿಲಾಮೂರ್ತಿ ಉದ್ಘಾಟನೆ, ಕೃಷಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಫಲಕ ಅನಾವರಣ ಮತ್ತು ಧಾರ್ಮಿಕ ಸಮಾರಂಭದ ಸಾನಿಧ್ಯ ವಹಿಸಿ ಅವರು ಸಂದೇಶ ನೀಡಿದರು.

ಕೊಳಗುಂದ ಕೇದಿಗೆ ಮಠಾಧ್ಯಕ್ಷ ಜಯಚಂದ್ರಶೇಖರ ಮಹಾಸ್ವಾಮೀಜಿ ಮಾತನಾಡಿ, ಭರತ ಖಂಡದಲ್ಲಿ ಗುರುವಿಗೆ ಅಪಾರ ಸ್ಥಾನವಿದೆ. ಭಕ್ತರು ಧರ್ಮಿಕ ತಳಹದಿ ಮೇಲೆ ತಂದೆ ತಾಯಿ ದೇವರು ಎಂಬ ಭಾವನೆಯಿಂದ ಜೀವನ ಸಾಗಿಸಿದಲ್ಲಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಲು ಸಾಧ್ಯವಿದೆ. ನಂದಿಗುಡಿ ಪೀಠದ ಸ್ವಾಮೀಜಿ ಇಂತಹ ಉತ್ತಮ ಸಮಾರಂಭದಲ್ಲಿ ಹಾಜರಾಗಿ ಎಲ್ಲರನ್ನು ಪ್ರೀತಿಯಿಂದ ಸ್ವಾಗತಿಸದೆ ಗೈರಾಗಿರುವುದು ಬೇಸರ ತಂದಿದೆ ಎಂದರು.

ಲಿಂಗದಹಳ್ಳಿ ಮಠದ ವೀರಭದ್ರ ಮಹಾಸ್ವಾಮೀಜಿ ಅವರು, ಕರಿಬಸವೇಶ್ವರ ಗದ್ದಿಗೆ ಟ್ರಸ್ಟ್‌ ಪದಾಧಿಕಾರಿಗಳು ಪ್ರಾಮಾಣಿಕತೆಯಿಂದ ಕಂಕಣತೊಟ್ಟು ಧಾರ್ಮಿಕ ಕ್ಷೇತ್ರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಈ ಸ್ಥಳವನ್ನೇ ಧರ್ಮಸ್ಥಳವಾಗಿಸಿದ್ದಾರೆ. ಮಾನವರು ದೇವರಾಗುವ ಇಚ್ಛೆಯನ್ನು ಭಕ್ತರಲ್ಲಿ ಮೂಡಿಸಿದ್ದಾರೆ ಎಂದರು.

ತುಮ್ಮಿನಕಟ್ಟೆ ಪದ್ಮಶಾಲಿ ಪೀಠದ ಪ್ರಭುಲಿಂಗ ಸ್ವಾಮೀಜಿ ಅವರು, ಉಕ್ಕಡಗಾತ್ರಿ ಕ್ಷೇತ್ರಕ್ಕೆ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಕೇರಳ, ತಮಿಳುನಾಡು ಮತ್ತು ನಾಡಿನ ವಿವಿಧ ಮೂಲೆಗಳಿಂದ ಅಜ್ಜಯ್ಯನ ಕ್ಷೇತ್ರಕ್ಕೆ ಸಂಕಟ ನಿವಾರಣಗೆ ಭಕ್ತರು ಆಗಮಿಸಿದ್ದಾರೆ. ಅಭಿವೃದ್ಧಿಗೆ ಕಾರಣೀಭೂತರಾಗಿದ್ದಾರೆ. ಧರ್ಮ ಉಳಿಸಲು ಸರ್ವ ಹಿಂದೂಗಳು ಮನಸ್ಸು ಮಾಡಬೇಕಿದೆ ಎಂದರು.

ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಉಕ್ಕಡಗಾತ್ರಿ ಗ್ರಾಮವು ಪಾಪಮುಕ್ತ ಕ್ಷೇತ್ರವಾಗಿದೆ. ಭಕ್ತರು ಜೀವನದಲ್ಲಿ ಮನಸ್ಸಿನ ಮೈಲಿಗೆ ಬಿಟ್ಟು ಉತ್ತಮ ಮಾರ್ಗದಲ್ಲಿ ಸಾಗಿದಾಗ ಪವಿತ್ರ ಕ್ಷೇತ್ರವಾಗಲು ಪೂರಕವಾಗುತ್ತದೆ. ಭಕ್ತರು ತ್ರಿಕಾಲ ಇಷ್ಟ ಲಿಂಗಪೂಜೆ ನೆರವೇರಿಸಿ, ಕಾಯಕ, ದಾಸೋಹ, ಲಿಂಗಪೂಜೆ, ಭಕ್ತಿ, ಪ್ರೀತಿ, ಶಕ್ತಿವಂತರಾಗಿ ಬಾಳಲು ಸಲಹೆ ನೀಡಿದರು.

ಗೋಡೆಕೆರೆ ಚರಪಟ್ಟಾಧ್ಯಕ್ಷ ಮೃತ್ಯುಂಜಯ ದೇಶೀಕೇಂದ್ರ ಸ್ವಾಮೀಜಿ ಆಶೀರ್ವಚನದಲ್ಲಿ, ಭಕ್ತರು ಜೀವನ ಮೌಲ್ಯಗಳನ್ನು ಅರಿತು ಉತ್ತಮ ನಿಸ್ವಾರ್ಥ ಸೇವೆಯಿಂದ ಜೀವನ ನಡೆಸಬೇಕು ಎಂದರು.

ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಹಳೇಬೀಡಿನ ಪುಷ್ಪಗಿರಿ ಮಹಾಸಂಸ್ಥಾನದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಗವಿಮಠದ ಚಂದ್ರಶೇಖರ ಸ್ವಾಮೀಜಿ, ಯಲವಟ್ಟಿಯ ಗುರುಸಿದ್ದಾಶ್ರಮದ ಯೋಗಾನಂದ ಸ್ವಾಮೀಜಿ, ಕರಡಿ ಗವಿಮಠದ ಶಿವಶಂಕರ ಶಿವಯೋಗಿ ಸ್ವಾಮೀಜಿ, ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠದ ಸಾಯಿನಾಥ ಗುರುಗಳು, ಮಡಿವಾಳ ಪೀಠದ ಮಡಿವಾಳ ಮಾಚಿದೇವ ಸ್ವಾಮೀಜಿ ಮಾತನಾಡಿದರು.

ಕರಿಬಸವೇಶ್ವರ ಗದ್ದಿಗೆ ಟ್ರಸ್ಟ್‌ ಕಾರ್ಯದರ್ಶಿ ಎಸ್.ಸುರೇಶ್, ಭಕ್ತರಿಗೆ ನಿರ್ಮಿಸುವ ವಸತಿಗೃಹ, ತಂಗುದಾಣ, ಶಿಕ್ಷಣ ಸಂಸ್ಥೆ, ದಾಸೋಹ ವ್ಯವಸ್ಥೆ ಕಟ್ಟಡಗಳ ನಿರ್ಮಾಣ ಇತರೆ ವೆಚ್ಚಗಳನ್ನು ತಿಳಿಸಿದರು.

೨೦ ನವಜೋಡಿಗಳು ದಾಂಪತ್ಯಕ್ಕೆ ಹೆಜ್ಜೆಯರಿಸಿದರು. ನವದಂಪತಿಗಳಿಗೆ ಹೊಲಿಗೆ ಯಂತ್ರ, ಬಟ್ಟೆ, ತಾಳಿ ಮತ್ತು ಕಾಲುಂಗುರ, ಅಜ್ಜಯ್ಯನ ನೆನಪಿನ ಕಾಣಿಕೆ ವಿತರಿಸಲಾಯಿತು.

ಟ್ರಸ್ಟ್ ಉಪಾಧ್ಯಕ್ಷ ಜಿ.ನಂದಿಗೌಡ, ನಿರ್ದೇಶಕರಾದ ಹೊಸಳ್ಳಿ ಗದ್ದಿಗೆಪ್ಪ, ನಾಗರಾಜ ದಿಲ್ಲಿವಾಲ, ವಿವೇಕಾನಂದ ಪಾಟೀಲ್, ಗದ್ದಿಗಯ್ಯ ಪಾಟೀಲ್, ಇಂದೂಧರ ಎನ್. ಬಸವನಗೌಡ ಪಾಳ್ಯದ, ಪ್ರಕಾಶ್ ಕೋಟೇರ, ಎಚ್.ವೀರನಗೌಡ, ವಕೀಲ ಎನ್.ಪಿ. ತಿಮ್ಮನಗೌಡ, ಸಹಸ್ರಾರು ಭಕ್ತರು ಹಾಜರಿದ್ದರು.

- - -

ಬಾಕ್ಸ್‌ * ರಸ್ತೆ ಅಭಿವೃದ್ಧಿಗೆ ಅನುದಾನ: ಡಾ.ಪ್ರಭಾ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ಪ್ರತಿ ಮಳೆಗಾಲದಲ್ಲೂ ಉಕ್ಕಡಗಾತ್ರಿ- ತುಮ್ಮಿನಕಟ್ಟೆ, ಉಕ್ಕಡಗಾತ್ರಿ- ಫತ್ತೆಪೂರ್ ರಸ್ತೆಗಳ ಸಂಪರ್ಕ ಕಡಿತಗೊಳ್ಳುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಜೊತೆ ಚರ್ಚಿಸಿ, ಆಯವ್ಯಯದಲ್ಲಿ ರಸ್ತೆ ಅಭಿವೃದ್ಧಿಗೆ ಅನುದಾನ ಮೀಸಲಿಡಿಸಲು ಕೋರುವುದಾಗಿ ಹೇಳಿದರು.

- - - -ಚಿತ್ರ೧:

ಉಕ್ಕಡಗಾತ್ರಿ ಶ್ರೀ ಕ್ಷೇತ್ರದಲ್ಲಿ ನೂತನ ಕಟ್ಟಡಗಳ ಲೋಕಾರ್ಪಣೆ, ಧಾರ್ಮಿಕ ಸಮಾರಂಭವನ್ನು ವಿವಿಧ ಮಠಾಧೀಶರು ಉದ್ಘಾಟಿಸಿದರು.