ವಕ್ಫ್ ಕಾಯ್ದೆ ತಿದ್ದುಪಡಿ ವಿರೋಧಿಸಿ ನಿರ್ಣಯ: ರಾಜ್ಯಪಾಲರಿಗೆ ಮನವಿ

| Published : Mar 22 2025, 02:03 AM IST

ವಕ್ಫ್ ಕಾಯ್ದೆ ತಿದ್ದುಪಡಿ ವಿರೋಧಿಸಿ ನಿರ್ಣಯ: ರಾಜ್ಯಪಾಲರಿಗೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ವಕ್ಫ್ ಕಾಯಿದೆಯಿಂದ ರಾಜ್ಯದ ಸಾವಿರಾರು ರೈತರ ಜಮೀನುಗಳು ಮಠ-ಮಂದಿರಗಳು, ಸ್ಮಶಾನಗಳು, ಸಾರ್ವಜನಿಕ ಆಸ್ತಿ, ಸರ್ಕಾರಿ ಶಾಲೆಗಳು ಹೀಗೆ ಸಮಾಜದ ಎಲ್ಲಾ ವಿಭಾಗಗಳ ಆಸ್ತಿಗಳನ್ನು ವಕ್ಫ್ ಮಂಡಳಿ ಕಬಳಿಸುತ್ತಿದೆ. ಇದು ನಮ್ಮ ರಾಜ್ಯದ ಸಮಸ್ಯೆಯಲ್ಲ. ದೇಶದ ಸಮಸ್ಯೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ವಕ್ಫ್ ಕಾಯಿದೆ ತಿದ್ದುಪಡಿಗೆ ವಿರೋಧ ಮಾಡಿರುವ ನಿರ್ಣಯವನ್ನು ರೈತರ ಹಿತದೃಷ್ಟಿಯಿಂದ ರಾಜ್ಯಪಾಲರು ಅನುಮತಿ ನೀಡಬಾರದು ಎಂದು ಒತ್ತಾಯಿಸಿ ವಕ್ಫ್ ವಿರೋಧಿ ಒಕ್ಕೂಟದ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಒಕ್ಕೂಟದ ಪದಾಧಿಕಾರಿಗಳು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾಧಿಕಾರಿ ಕಚೇರಿ ಸಹಾಯಕರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ವಕ್ಫ್ ಕಾಯಿದೆಯಿಂದ ರಾಜ್ಯದ ಸಾವಿರಾರು ರೈತರ ಜಮೀನುಗಳು ಮಠ-ಮಂದಿರಗಳು, ಸ್ಮಶಾನಗಳು, ಸಾರ್ವಜನಿಕ ಆಸ್ತಿ, ಸರ್ಕಾರಿ ಶಾಲೆಗಳು ಹೀಗೆ ಸಮಾಜದ ಎಲ್ಲಾ ವಿಭಾಗಗಳ ಆಸ್ತಿಗಳನ್ನು ವಕ್ಫ್ ಮಂಡಳಿ ಕಬಳಿಸುತ್ತಿದೆ. ಇದು ನಮ್ಮ ರಾಜ್ಯದ ಸಮಸ್ಯೆಯಲ್ಲ. ದೇಶದ ಸಮಸ್ಯೆ. ಈ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಸಂಸತ್‌ನಲ್ಲಿ ಮಂಡಿಸುತ್ತಿರುವಾಗ ರಾಜ್ಯ ಸರ್ಕಾರ ವಿಧಾನ ಮಂಡಲದಲ್ಲಿ ಕಾಯಿದೆಗೆ ತಿದ್ದುಪಡಿ ತರಬಾರದು ಎಂದು ನಿರ್ಣಯ ತೆಗೆದುಕೊಂಡಿರುವುದು ರೈತ ವಿರೋಧಿ, ಜನವಿರೋಧಿ ನಿರ್ಣಯವಾಗಿದೆ ಎಂದು ಕಿಡಿಕಾರಿದರು.

ಮುಸ್ಲಿಂ ಮತ ಬ್ಯಾಂಕ್ ಉದ್ದೇಶಕ್ಕೆ, ಮುಸಲ್ಮಾನರನ್ನು ಓಲೈಸಲು ರಾಜ್ಯದ ರೈತರು ಹಾಗೂ ಬಹುಸಂಖ್ಯಾತರಿಗೆ ಸರ್ಕಾರ ದ್ರೋಹ ಮಾಡುತ್ತಿದೆ. ಹಿಂದುಳಿದ ವರ್ಗ, ಪ.ಜಾತಿ, ಪಂಗಡ ಹೀಗೆ ಎಲ್ಲಾ ವರ್ಗದವರ ಜಮೀನುಗಳನ್ನು ವಕ್ಫ್ ಮಂಡಳಿ ಕಬಳಿಸುತ್ತಿರುವಾಗ ಸರ್ಕಾರ ಇಂತಹದೊಂದು ನಿರ್ಣಯ ಕೈಗೊಂಡಿರುವುದು ಸಂವಿಧಾನ ವಿರೋಧಿ ಕಾಯ್ದೆಯನ್ನು ಬೆಂಬಲಿಸುತ್ತಿದೆ. ರಾಜ್ಯ ಸರ್ಕಾರ ಅಂಗೀಕರಿಸಿರುವ ನಿರ್ಣಯವನ್ನು ಅನುಮೋದಿಸದಂತೆ ರಾಜ್ಯಪಾಲರನ್ನು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಒಕ್ಕೂಟದ ಪದಾಧಿಕಾರಿಳಾದ ಹಾಡ್ಯ ರಮೇಶ್‌ರಾಜು, ಬೇಕ್ರಿ ರಮೇಶ್, ಅಪ್ಪಾಜಿ, ಜೋಸೆಫ್ ರಾಮು, ಮೋಹನ್ ಚಿಕ್ಕಮಂಡ್ಯ, ಹೆಮ್ಮಿಗೆ ಚಂದ್ರಶೇಖರ್, ಎಂ.ಕೆ.ಸಂಜಯ್‌ಕುಮಾರ್, ಬಿ.ರಮೇಶ್ ಇತರರಿದ್ದರು.