ಬೀದಿನಾಯಿ, ಬಿಡಾಡಿ ದನದ ಉಪಟಳ ತಡೆಗೆ ನಿರ್ಣಯ

| Published : Aug 11 2025, 12:54 AM IST / Updated: Aug 11 2025, 12:55 AM IST

ಸಾರಾಂಶ

ನಗರಸಭೆಯಿಂದ ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ತಕ್ಷಣ ಟೆಂಡರ್ ಪ್ರಕ್ರಿಯೆಯನ್ನು ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ದಾಂಡೇಲಿ: ತಾಲೂಕು ತಹಶೀಲ್ದಾರ ಶೈಲೇಶ ಪರಮಾನಂದ ಅಧ್ಯಕ್ಷತೆಯಲ್ಲಿ ನಡೆದ ಸಭೆಯು ನಗರದಲ್ಲಿ ಹೆಚ್ಚಾಗಿರುವ ಬೀದಿ ನಾಯಿಗಳು ಮತ್ತು ಬೀಡಾಡಿ ದನಗಳ ಉಪಟಳವನ್ನು ತಡೆಯುವ ಕುರಿತು ತಹಶೀಲ್ದಾರ ಕಚೇರಿಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.ಸಭೆಯಲ್ಲಿ ಮಾತನಾಡಿದ ನಗರ ಸಭೆಯ ಪೌರಾಯುಕ್ತರು, ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡುವುದಕ್ಕಾಗಿ ಅನಿಮಲ್ ವೆಲ್ಫೇರ್ ಬೋರ್ಡ್ ಅವರಿಂದ ಅನುಮತಿ ನೀಡುವಂತೆ ನಗರಸಭೆಯಿಂದ ಈಗಾಗಲೇ ಪಶು ವೈದ್ಯಕೀಯ ಇಲಾಖೆಗೆ ಪತ್ರ ಬರೆದು ತಕ್ಷಣ ಪರವಾನಗಿ ನೀಡುವಂತೆ ತಿಳಿಸಲಾಗಿದೆ. ಈ ಕುರಿತು ಕಾರವಾರದ ಪಶು ಸಂಗೋಪಣಾ ಇಲಾಖೆಯ ಉಪನಿರ್ದೇಶಕರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಅನುಮತಿ ಪತ್ರ ನೀಡಲು ದಾಂಡೇಲಿ ಪಶು ವೈದ್ಯಾಧಿಕಾರಿ ಅವರಿಗೆ ನಿರ್ದೇಶನ ನೀಡಿರುವುದಾಗಿ ತಿಳಿಸಿದರು. ನಗರಸಭೆಯಿಂದ ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ತಕ್ಷಣ ಟೆಂಡರ್ ಪ್ರಕ್ರಿಯೆಯನ್ನು ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.ಇನ್ನು ಎಲ್ಲ ಮಾಲೀಕತ್ವದ ಬೀದಿ ದನಗಳನ್ನು ತಕ್ಷಣವೇ ಗುರುತಿಸಿ ಟ್ಯಾಗ್ ಮಾಡುವಂತೆ ದಾಂಡೇಲಿ ಮುಖ್ಯ ಪಶುವೈದ್ಯಾಧಿಕಾರಿ ಅವರಿಗೆ ತಿಳಿಸಲಾಯಿತು. ಬೀದಿ ದನಗಳನ್ನು ಅದರ ಮಾಲೀಕರು ತಮ್ಮ ಮನೆಗಳಲ್ಲಿ ಕಟ್ಟಿ ಹಾಕುವಂತೆ ನಗರಸಭೆಯಿಂದ ಈಗಾಗಲೇ ಕಸ ವಿಲೇವಾರಿ ವಾಹಗಳಲ್ಲಿ, ವಿಶೇಷ ಆಟೋರಿಕ್ಷಾ ಮೂಲಕ ಧ್ವನಿವರ್ಧಕದಲ್ಲಿ ಹೇಳಿದ್ದು, ನಗರದ ಬೀದಿಯಲ್ಲಿ ಓಡಾಡಿ ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆ ತೊಂದರೆ ಮಾಡುತ್ತಿರುವ ಬೀದಿ ದನಗಳನ್ನು ನಗರಸಭೆಯಿಂದ ತಕ್ಷಣ ಗೋಚರೆಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಲಾಯಿತು.

ಸಭೆಯಲ್ಲಿ ನಗರಸಭೆ ಅಧ್ಯಕ್ಷ ಅಷ್ಪಾಕ್ ಶೇಖ, ಉಪಾಧ್ಯಕ್ಷೆ ಶೀಲ್ಪಾ ಕೊಡೆ, ನಗರಸಭಾ ಸದಸ್ಯರಾದ ಸಂಜು ನಂದ್ಯಾಳಕರ, ಮೋಹನ ಹಲವಾಯಿ, ಮಹಾದೇವ ಜಮಾದಾರ, ಅನೀಲ ನಾಯ್ಕರ, ಪ್ರೀತಿ ನಾಯರ, ರುಕ್ಮೀಣಿ ಬಾಗಡೆ, ದಾಂಡೇಲಿ ತಾಪಂ ಇಒ ಟಿ.ಸಿ. ಹಾದಿಮನಿ, ದಾಂಡೇಲಿ ನಗರ ಪೊಲೀಸ್‌ ಠಾಣೆಯ ಪೊಲೀಸ್‌ ಉಪನಿರೀಕ್ಷಕ ಅಮೀನ ಎಂ. ಅತ್ತಾರ, ಪಶು ವೈದ್ಯಾಧಿಕಾರಿ ಅರ್ಚನಾ ಸಿಹ್ನಾ ಇದ್ದರು.