ಹಾವೇರಿ: ಹಾವೇರಿ ವಿಶ್ವವಿದ್ಯಾಲಯ ಪದವಿ ವಿದ್ಯಾರ್ಥಿಗಳ ಸೆಮಿಸ್ಟರ್ ಪರೀಕ್ಷೆ ವೇಳಾಪಟ್ಟಿ ಗೊಂದಲ ಪರಿಹರಿಸಿ, ಕೆಲವು ವಿಷಯ ಪರೀಕ್ಷೆಗಳನ್ನು ಮುಂದೂಡುವಂತೆ ಆಗ್ರಹಿಸಿ ಎಸ್‌ಎಫ್‌ಐ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗಾಂಧಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಎದುರು ಪ್ರಾಂಶುಪಾಲರ ಮೂಲಕ ಹಾವೇರಿ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಸುರೇಶ್ ಜಂಗಮಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾ ಮುಖಂಡ ಅರುಣ್ ನಗವತ್ ಮಾತನಾಡಿ, ಹಾವೇರಿ ವಿವಿ ವ್ಯಾಪ್ತಿಯಲ್ಲಿ ಬರುವ ಪದವಿ ವಿದ್ಯಾರ್ಥಿಗಳ ಪರೀಕ್ಷೆ ವೇಳಾಪಟ್ಟಿಯನ್ನು ದಿಢೀರ್‌ ಪ್ರಕಟಿಸುತ್ತಿದ್ದಾರೆ. ವಿದ್ಯಾರ್ಥಿ ವಿರೋಧಿ ನೀತಿಯನ್ನು ಮುಂದುವರಿಸಿಕೊಂಡು ಬರುತ್ತಿರುವ ವಿವಿ ಆಡಳಿತ ಮಂಡಳಿ ನೀತಿ ಸರಿಯಿಲ್ಲ. ಶೈಕ್ಷಣಿಕ ವರ್ಷದ ವೇಳಾಪಟ್ಟಿ ಸರಿದೂಗಿಸುವ ಉದ್ದೇಶದಿಂದ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುವುದು ಸರಿಯಲ್ಲ. ಒಂದೇ ದಿನದಲ್ಲಿ ಎರಡು ಪರೀಕ್ಷೆಗಳನ್ನು ನಡೆಸಿದರೆ ವಿದ್ಯಾರ್ಥಿಗಳ ಮಾನಸಿಕ ಒತ್ತಡ, ಹಿಂಸೆ ನೀಡಿದಂತೆ ಆಗುತ್ತದೆ. ಆದರಿಂದ ಕೂಡಲೇ ಈಗಾಗಲೇ ಬಿಡುಗಡೆ ಮಾಡಿದ ಪರೀಕ್ಷಾ ವೇಳಾಪಟ್ಟಿ ಹಿಂಪಡೆದು ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ವೇಳಾಪಟ್ಟಿ ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿದರು.

ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸದಿದ್ದರೆ ಹಾವೇರಿ ವಿವಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವಿದ್ಯಾರ್ಥಿನಿ ಜ್ಯೋತಿ ಮಾತನಾಡಿ, ಒಂದೇ ದಿನದಲ್ಲಿ ಎರಡು ಪರೀಕ್ಷೆ ಬರೆಯುವುದು ತುಂಬಾ ಕಷ್ಟವಾಗುತ್ತದೆ. ಓದುವುದು, ಪರೀಕ್ಷೆಗೆ ತರಾತುರಿಯಲ್ಲಿ ತಯಾರಿಯಾಗಬೇಕಿದೆ. ಸಮಯಕ್ಕೆ ಸರಿಯಾಗಿ ಬಸ್‌ಗಳು ಇಲ್ಲದೆ ಪರೀಕ್ಷೆ ಎದುರಿಸಲು ಹಿನ್ನಡೆ ಆಗುತ್ತದೆ. ನಮ್ಮ ಮನವಿಗೆ ಸ್ಪಂದಿಸಿ ವಿದ್ಯಾರ್ಥಿಗಳಿಗೆ ಆದ ಅನ್ಯಾಯ ಸರಿಪಡಿಸಬೇಕು ಎಂದರು.

ಮುಖಂಡರಾದ ಕಿರಣ್ ನಾಯ್ಕ್, ದಿಲ್ಲೇಪ್ಪ ಗೋಣೆಪ್ಪನವರ, ಕಿರಣ್ ಪೂಜಾರ್, ಸುನಿಲ್ ಎಲ್., ನಾಗರಾಜ್ ದೊಡ್ಡಮನಿ, ನಾಗರಾಜ್ ತಿಮ್ಮಣ್ಣನವರ್, ನರಶಿಮ್ಮ ಮ್ಯಗಳಕಟ್ಟಿ, ಪ್ರೇಮ್‌ಕುಮಾರ್ ಲಮಾಣಿ, ಆಕಾಶ್ ನಾಯ್ಕ್, ವಿನೋದ್ ಎಲ್., ಸಾಗರ್ ರಂಗಣ್ಣನವರ, ಪರಶುರಾಮ್ ಬಸಾಪುರ, ಸುನೀಲ್ ಲಮಾಣಿ, ಪ್ರೀತಿ ಭದ್ರಪುರ, ಲಕ್ಷ್ಮೀ ಕೊಲ್ಲೂರು, ಕೀರ್ತಿ ಎನ್., ಪೂಜಾ ಮೇಲ್ಮುರಿ, ಪವಿತ್ರಾ ಕಂಚರಗಟ್ಟಿ, ಸೌಂದರ್ಯ ಎಲ್., ಪಲ್ಲವಿ ಗೆಜ್ಜೆಹಳ್ಳಿ ಉಪಸ್ಥಿತರಿದ್ದರು.