ಆಂಧ್ರಪ್ರದೇಶ ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಅತಿಯಾದ ನಿಯಮಾವಳಿ ಮತ್ತು ಜಟಿಲ ಕಾನೂನು ಪ್ರಕ್ರಿಯೆಗಳಿವೆ. ಇದರಿಂದ ಹೂಡಿಕೆದಾರರು ಕರ್ನಾಟಕದಿಂದ ಹಿಂದೆ ಸರಿಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಪೌತಿ ಖಾತೆ ವರ್ಗಾವಣೆ ಪ್ರಕ್ರಿಯೆ ತೀವ್ರವಾಗಿ ವಿಳಂಬವಾಗುತ್ತಿದೆ.
ಕನ್ನಡಪ್ರಭ ವಾರ್ತೆ, ತುಮಕೂರು
ಗ್ರಾಮ ಪಂಚಾಯಿತಿ, ಪುರಸಭೆ, ನಗರಸಭೆ, ಕಾರ್ಪೊರೇಷನ್ ವ್ಯಾಪ್ತಿ ಎಲ್ಲಾ ಇ-ಖಾತಾಗಳನ್ನು ಕಳೆದ 45 ದಿನಗಳಿಂದ ಸ್ಥಗಿತಗೊಳಿಸಿರುವುದು ಗಂಭೀರ ಸಮಸ್ಯೆಯಾಗಿದೆ. ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಬೇಕು ಎಂದು ಜಿಲ್ಲಾ ಲ್ಯಾಂಡ್ ಡೆವಲಪರ್ಸ್ ಅಸೋಸಿಯೇಷನ್ ಅಧ್ಯಕ್ಷರೂ ಆದ ಸ್ಫೂರ್ತಿ ಡೆವಲಪರ್ಸ್ ಮಾಲೀಕ ಎಸ್.ಪಿ. ಚಿದಾನಂದ್ ಒತ್ತಾಯಿಸಿದರು.ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ಇ-ಪೌತಿ ಸಾಫ್ಟ್‌ವೇರ್ ಅಳವಡಿಕೆಯ ಕಾರಣದಿಂದ ಈ ಸ್ಥಗಿತ ಉಂಟಾಗಿದೆ. ಸರ್ಕಾರ ಯಾವುದೇ ಹೊಸದನ್ನು ಜಾರಿಗೆ ತರುವಾಗ ಪರ್ಯಾಯ ವ್ಯವಸ್ಥೆ ಮಾಡಬೇಕು ಅಥವಾ ಒಂದು ಹಳ್ಳಿ ಅಥವಾ ಪಟ್ಟಣವನ್ನು ಪೈಲೆಟ್ ಪ್ರಾಜೆಕ್ಟ್ ಆಗಿ ಮಾಡಿಕೊಂಡು ಹೊಸ ವ್ಯವಸ್ಥೆ ಅಲ್ಲಿ ಜಾರಿ ಮಾಡಿ, ಅದರ ಸಾಧಕಬಾಧಕಗಳನ್ನು ಪರಿಶೀಲಿಸಿದ ನಂತರ ರಾಜ್ಯಾದ್ಯಂತ ಜಾರಿ ಮಾಡಬೇಕು ಎಂದು ಹೇಳಿದರು.ಇ-ಖಾತಾ ಸ್ಥಗಿತದಿಂದ ಬ್ಯಾಂಕುಗಳಿಂದ ಸಾಲಸೌಲಭ್ಯಗಳು ದೊರೆಯದೆ ಅಭಿವೃದ್ಧಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಸಿ.ಸಿ ಮತ್ತು ಒ.ಸಿ. ಪಡೆಯುವ ಪ್ರಕ್ರಿಯೆ ಸುಮಾರು ಎರಡು ವರ್ಷಗಳಿಂದ ವಿಳಂಬವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ ಎಸ್.ಪಿ.ಚಿದಾನಂದ್ ಅವರು, ಕಟ್ಟಡ ಪರವಾನಗಿಗಳು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಆಗದೆ ಇರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ತಡೆ ಉಂಟಾಗಿದೆ. ಪೂರ್ಣಗೊಂಡಿರುವ ರೆಸಿಡೆನ್ಸಿಯಲ್ ಲೇಔಟ್, ಪ್ಲಾಟ್‌ಗಳಿಗೆ ಲೈಸೆನ್ಸ್ ನೀಡುವಲ್ಲಿ ಅಧಿಕಾರಿಗಳ ವಿಳಂಬ ವರ್ತನೆ ತೋರುತ್ತಿದ್ದಾರೆಂದು ದೂರಿದರು.
ಆಂಧ್ರಪ್ರದೇಶ ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಅತಿಯಾದ ನಿಯಮಾವಳಿ ಮತ್ತು ಜಟಿಲ ಕಾನೂನು ಪ್ರಕ್ರಿಯೆಗಳಿವೆ. ಇದರಿಂದ ಹೂಡಿಕೆದಾರರು ಕರ್ನಾಟಕದಿಂದ ಹಿಂದೆ ಸರಿಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಪೌತಿ ಖಾತೆ ವರ್ಗಾವಣೆ ಪ್ರಕ್ರಿಯೆ ತೀವ್ರವಾಗಿ ವಿಳಂಬವಾಗುತ್ತಿದೆ ಎಂದು ಚಿದಾನಂದ ಆಪಾದಿಸಿದರು.ಎಂಇಆರ್-19 ಅಡಿಯಲ್ಲಿ ಲೈಸೆನ್ಸ್ ನೀಡುವ ವಿಷಯದಲ್ಲಿ ಸ್ಪಷ್ಟ ಮಾರ್ಗಸೂಚಿಗಳ ಕೊರತೆ ಇದೆ. ಪಾರ್ಕ್, ಸಿಎ ಹಾಗೂ ರಸ್ತೆಗಳಿಗೆ ಸಂಬಂಧಿಸಿದ ಡೀಡ್ ನೀಡುವ ಪ್ರಕ್ರಿಯೆಯಲ್ಲಿನ ವಿಳಂಬವೂ ಅಭಿವೃದ್ಧಿಗೆ ಅಡ್ಡಿಯಾಗಿದೆ. ಸರ್ಕಾರ ಮತ್ತು ಸಂಬಂಧಿತ ಇಲಾಖೆಗಳು ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಬೇಕು. ಇ-ಖಾತಾ ಸಾಫ್ಟ್‌ವೇರ್ ಅನ್ನು ತುರ್ತು ಪರಿಷ್ಕರಣೆ ಮಾಡಿ ಸರಿಹೋಗುವವರೆಗೂ ಹಿಂದಿನ ವ್ಯವಸ್ಥೆಯನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಲ್ಯಾಂಡ್ ಡೆವಲಪರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಟಿ.ಜೆ.ಸನತ್, ಮುಖಂಡರಾದ ಕೆ.ಜೆ.ಹನುಮಂತರಾಜು, ಗೋಪಿ, ಭಾರಧ್ವಾಜ್, ಜೆ.ಎಸ್.ಅನಿಲ್‌ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.