ಉದ್ಯೋಗದಾತರಾಗಲು ಸಂಕಲ್ಪ ಮಾಡಿ: ಸುತ್ತೂರುಶ್ರೀ

| Published : Sep 29 2024, 01:32 AM IST

ಸಾರಾಂಶ

ನಾವು ಗಳಿಸಿದ್ದೇ ಜ್ಞಾನ ಎಂದು ಭಾವಿಸಿದ್ದರೆ ಗ್ರಂಥಾಲಯಗಳೇ ಜ್ಞಾನಿಗಳಾಗಿರುತ್ತಿದ್ದವು. ಜ್ಞಾನ ನಾವು ಗಳಿಸಿದಂತೆ ಬಳಸಿಕೊಂಡಂತೆ ವಿಕಾಸವಾಗುತ್ತಾ ಹೋಗುತ್ತದೆ. ಎಲ್ಲಿ ಜ್ಞಾನವಿರುವುದೋ ಅಲ್ಲಿ ಅಜ್ಞಾನವಿರುವುದಿಲ್ಲ. ಬೆಳಕಿರುವ ಕಡೆ ಕತ್ತಲು ಇರುವುದಿಲ್ಲ. ಸತ್ಯವಿರುವೆಡೆ ಅಸತ್ಯ ಸುಳಿಯುವುದಿಲ್ಲ. ಜ್ಞಾನವಿಲ್ಲದವನು ಪಶುವಿಗೆ ಸಮಾನ ಎಂಬ ಮಾತಿದೆ. ಹಾಗಾಗಿ ಜ್ಞಾನದ ಅಭಿಮುಖವಾಗಿ ಪದವೀಧರರು ಬೆಳವಣಿಗೆ ಸಾಧಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಎಂಜಿನಿಯರಿಂಗ್ ಪದವೀಧರರು ಉದ್ಯೋಗಿಗಳಾಗದೆ ಉದ್ಯೋಗದಾತರಾಗಬೇಕು ಎಂದು ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ ಸಲಹೆ ನೀಡಿದರು.

ನಗರದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ನಡೆದ ೧೫ನೇ ವರ್ಷದ ಪದವಿ ಪ್ರದಾನ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಪದವೀಧರರಾದವರು ಉದ್ಯೋಗ ಗಳಿಸುವುದನ್ನೇ ಗುರಿಯಾಗಿಸಿಕೊಳ್ಳದೆ ಕೌಶಲ್ಯವಂತರಾಗಿ ಹೊರಹೊಮ್ಮಬೇಕು. ಆ ಕೌಶಲ್ಯ ಸಾಧನೆಯ ತರಬೇತಿ ನೀಡುವುದರೊಂದಿಗೆ ಕಂಪನಿ, ಉದ್ದಿಮೆಗಳನ್ನು ತೆರೆದು ಉದ್ಯೋಗ ಸೃಷ್ಟಿ ಮಾಡುವ ಮೂಲಕ ನೀವು ಕಲಿತ ಶಿಕ್ಷಣವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದರು.

ನಾವು ಗಳಿಸಿದ್ದೇ ಜ್ಞಾನ ಎಂದು ಭಾವಿಸಿದ್ದರೆ ಗ್ರಂಥಾಲಯಗಳೇ ಜ್ಞಾನಿಗಳಾಗಿರುತ್ತಿದ್ದವು. ಜ್ಞಾನ ನಾವು ಗಳಿಸಿದಂತೆ ಬಳಸಿಕೊಂಡಂತೆ ವಿಕಾಸವಾಗುತ್ತಾ ಹೋಗುತ್ತದೆ. ಎಲ್ಲಿ ಜ್ಞಾನವಿರುವುದೋ ಅಲ್ಲಿ ಅಜ್ಞಾನವಿರುವುದಿಲ್ಲ. ಬೆಳಕಿರುವ ಕಡೆ ಕತ್ತಲು ಇರುವುದಿಲ್ಲ. ಸತ್ಯವಿರುವೆಡೆ ಅಸತ್ಯ ಸುಳಿಯುವುದಿಲ್ಲ. ಜ್ಞಾನವಿಲ್ಲದವನು ಪಶುವಿಗೆ ಸಮಾನ ಎಂಬ ಮಾತಿದೆ. ಹಾಗಾಗಿ ಜ್ಞಾನದ ಅಭಿಮುಖವಾಗಿ ಪದವೀಧರರು ಬೆಳವಣಿಗೆ ಸಾಧಿಸಬೇಕು. ದೇಶದ ಸದೃಢ ಬೆಳವಣಿಗೆಗೆ ಎಲ್ಲರೂ ಸಂಕಲ್ಪ ಮಾಡುವಂತೆ ಸಲಹೆ ನೀಡಿದರು.

ಎಂಜಿನಿಯರ್‌ಗಳು ಮನಸ್ಸು ಮಾಡಿದರೆ ದೇಶವನ್ನು ನಾಲ್ಕೈದು ವರ್ಷಗಳಲ್ಲಿ ಬದಲಾವಣೆಯನ್ನು ತರಬಹುದು. ರಾಷ್ಟ್ರವನ್ನು ಬಹುಮುಖವಾಗಿ, ಸುಂದರವಾಗಿ ರೂಪಿಸುವ ಶಕ್ತಿ ಎಂಜಿನಿಯರ್‌ಗಳಿಗಿದೆ. ನೀವು ಕಲಿತ ಶಿಕ್ಷಣವನ್ನು ರಾಷ್ಟ್ರದ ಸಮಗ್ರ ಬೆಳವಣಿಗೆಗೆ ಸಹಕಾರಿಯಾಗುವಂತೆ ಬಳಸುವಂತೆ ತಿಳಿಸಿದರು.

ಹೆತ್ತವರು ನಿಮ್ಮ ವಿದ್ಯಾಭ್ಯಾಸಕ್ಕಾಗಿ ಇಡೀ ಬದುಕನ್ನೇ ತ್ಯಾಗ ಮಾಡಿರುತ್ತಾರೆ. ಅವರ ಶ್ರಮವನ್ನು ವ್ಯರ್ಥವಾಗುವಂತೆ ಮಾಡಬೇಡಿ. ಉತ್ತಮ ಶಿಕ್ಷಣ ಕಲಿತು ವಿದ್ಯಾವಂತರಾಗಿ ಹೆತ್ತವರನ್ನೂ ಕೊನೆಯವರೆಗೆ ಕೈ ಹಿಡಿದು ಕಾಪಾಡಬೇಕು. ಶಿಕ್ಷಣದ ಜೊತೆಗೆ ಸಂಸ್ಕೃತಿ-ಸಂಸ್ಕಾರವನ್ನು ರೂಢಿಸಿಕೊಂಡಾಗ ವ್ಯಕ್ತಿತ್ವ ವಿಕಾಸವಾಗುತ್ತದೆ ಎಂದರು.

ಮೈಸೂರು ವಿಶ್ವವಿದ್ಯಾಲಯ ಬೆಳವಣಿಗೆ ಸಾಧಿಸಬೇಕಾದರೆ ಕೆ.ವಿ.ಶಂಕರಗೌಡರ ಪಾತ್ರ ಪ್ರಮುಖವಾಗಿದೆ. ಪಿಇಎಸ್ ಎಂಜಿನಿಯರಿಂಗ್ ಕಾಲೇಜು ತೆರೆದು ಗ್ರಾಮೀಣ ಮಕ್ಕಳಿಗೆ ಹೆಚ್ಚು ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ. ಕಾಲೇಜು ವಿದ್ಯಾರ್ಥಿಗಳಿಗೆ ಶೈಕ್ಷ ಣಿಕವಾಗಿ ಅನುಕೂಲವಾಗುವಂತಹ ಎಲ್ಲಾ ಸೌಲಭ್ಯ ಒಳಗೊಂಡಿದೆ. ಶಿಕ್ಷಣಕ್ಕೆ ಪೂರಕವಾದ ವಾತಾವರಣವಿರುವ ಕಾಲೇಜಿನಲ್ಲಿ ಓದಿದವರು ಉನ್ನತ ಹುದ್ದೆಯಲ್ಲಿದ್ದಾರೆ. ಅದೇ ರೀತಿ ಪದವೀಧರರೂ ಉನ್ನತ ಸ್ಥಾನ ಅಲಂಕರಿಸಿ ಕಾಲೇಜಿನ ಕೀರ್ತಿಯನ್ನು ಬೆಳಗಿಸಬೇಕು ಎಂದರು.

ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್‌ಆನಂದ್ ಮಾತನಾಡಿ, ಪದವಿ ಪಡೆದ ವಿದ್ಯಾರ್ಥಿಗಳು ತಂದೆ-ತಾಯಿ ಋಣ ತೀರಿಸುವ ಕೆಲಸ ಮಾಡಬೇಕು. ಅವರು ನಿಮ್ಮ ಭವಿಷ್ಯಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿರುತ್ತಾರೆ. ನೀವು ಪದವಿ ಗಳಿಸಿ ದೊಡ್ಡ ಸಾಧನೆಯನ್ನು ಮಾಡಿದಾಗ ಹೆತ್ತವರ ಶ್ರಮ ಸಾರ್ಥಕತೆಯನ್ನು ಪಡೆಯುತ್ತದೆ. ಆ ದಿಸೆಯಲ್ಲಿ ನಿಮ್ಮ ಪ್ರಯತ್ನವಿರಲಿ ಎಂದು ಆಶಿಸಿದರು.

ಪದವೀಧರರ ಆಲೋಚನೆಗಳು ದೊಡ್ಡದಾಗಿರಬೇಕು. ವಿಶಾಲವಾದ ದೃಷ್ಟಿಯನ್ನು ಹೊಂದಿದ್ದಾಗ ಮಹತ್ವದ ಸಾಧನೆಗಳನ್ನು ಮಾಡಲು ಸಾಧ್ಯವಾಗುತ್ತದೆ. ಪದವಿ ಎನ್ನುವುದನ್ನು ಉದ್ಯೋಗ ಪಡೆಯುವುದಕ್ಕಷ್ಟೇ ಸೀಮಿತವಾಗಿ ಉಳಿಸದೆ ಪದವಿಯೊಂದಿಗೆ ಮುಂದೆ ಏನೆಲ್ಲಾ ಸಾಧನೆ ಮಾಡುವುದಕ್ಕೆ ಅವಕಾಶಗಳಿವೆ ಎಂಬುದನ್ನು ಅರಿತು ಸಾಧನೆಯ ಕಡೆಗೆ ದೃಷ್ಟಿ ಇಡಬೇಕು. ನಿರಂತರ ಪರಿಶ್ರಮ, ಛಲ, ಆತ್ಮವಿಶ್ವಾಸದಿಂದ ಗುರಿಸಾಧನೆ ಮಾಡುವಂತೆ ಕಿವಿಮಾತು ಹೇಳಿದರು.

ಪಿಇಟಿ ಉಪಾಧ್ಯಕ್ಷ ಬಸವಯ್ಯ ಮಾತನಾಡಿ, ಗುರುಗಳ ಋಣ ತೀರಿಸುವುದು ವಿದ್ಯಾರ್ಥಿಗಳ ಆದ್ಯ ಕರ್ತವ್ಯ. ವಿದ್ಯಾರ್ಥಿಗಳು ಗುರುವನ್ನು ಮೀರಿಸುವ ಶಿಷ್ಯರಾಗಬೇಕು. ನಿರಂತರ ಪರಿಶ್ರಮವೇ ತಪಸ್ಸು. ಅದೇ ರೀತಿ ಪದವೀಧರರು ತಮಗೆ ದೊರಕಿರುವ ಪದವಿಯನ್ನು ಸದುಪಯೋಗಪಡಿಸಿಕೊಂಡು ದೇಶಸೇವೆಯಲ್ಲಿ ತೊಡಗಿಸುವುದೂ ಕೂಡ ತಪಸ್ಸು ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ೧೧ ವಿಭಾಗಗಳಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಚಿನ್ನದ ಪದಕ, ಪದವಿ ಪ್ರಮಾಣಪತ್ರ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಂ.ನಂಜುಂಡಸ್ವಾಮಿ, ಉಪಪ್ರಾಂಶುಪಾಲ ಡಾ.ಎಸ್.ವಿನಯ್, ಪಿಇಟಿ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್, ಡಾ.ಡಿ.ದಿನೇಶ್ ಪ್ರಭು, ಡಾ.ಕೆ.ಜೆ.ಮಹೇಂದ್ರ ಬಾಬು ಇತರರಿದ್ದರು.