ಕುಷ್ಟಗಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪೊಲೀಸ್‌ ಇಲಾಖೆ ವತಿಯಿಂದ ‘ಡ್ರಗ್ಸ್ ಬೇಡ ಬ್ರೋ’ ಅಭಿಯಾನದ ಜಾಗೃತಿ ಕಾರ್ಯಕ್ರಮ ನಡೆಯಿತು.

ಕುಷ್ಟಗಿ: ಡ್ರಗ್ಸ್ ಪಿಡುಗು ಯುವ ಸಮುದಾಯವನ್ನು ಆವರಿಸುತ್ತಿರುವ ಆತಂಕದ ನಡುವೆ, ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಸಂಕಲ್ಪ ತೊಡಬೇಕು ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪೊಲೀಸ್‌ ಇಲಾಖೆ ವತಿಯಿಂದ ನಡೆದ ‘ಡ್ರಗ್ಸ್ ಬೇಡ ಬ್ರೋ’ ಅಭಿಯಾನದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಬ್ಬ ವ್ಯಕ್ತಿ ದುಶ್ಚಟಕ್ಕೆ ಬಲಿಯಾದರೆ ಅದರ ಪರಿಣಾಮ ಇಡೀ ಕುಟುಂಬವೇ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಡ್ರಗ್ಸ್ ವಿರುದ್ಧ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿದ್ದರೂ ನಿರೀಕ್ಷಿತ ಫಲಿತಾಂಶ ದೊರೆಯುತ್ತಿಲ್ಲ ಎಂದರು.

ಮಾತ್ರೆ, ಇಂಜೆಕ್ಷನ್, ಪೌಡರ್ ಸೇರಿದಂತೆ ವಿವಿಧ ರೂಪಗಳಲ್ಲಿ ಡ್ರಗ್ಸ್ ಲಭ್ಯವಾಗುತ್ತಿದ್ದು, ಯುವಕರನ್ನು ಗುರಿಯಾಗಿಸಿಕೊಂಡು ಮಾರಾಟ ಜಾಲ ವಿಸ್ತರಿಸುತ್ತಿದೆ. ಡ್ರಗ್ಸ್ ಆಕ್ಟೋಪಸ್‌ನಂತೆ ತನ್ನ ಬಾಹುಗಳನ್ನು ಎಲ್ಲೆಡೆ ಚಾಚುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು.

ಯುವಕರು ಸ್ನೇಹಿತರ ಸಹವಾಸದ ಬಗ್ಗೆ ಎಚ್ಚರಿಕೆ ವಹಿಸಬೇಕು. ‘ಮಜಾ ಮಾಡೋಣ ಬಾ’ ಎಂಬ ಆಮಿಷಕ್ಕೆ ಒಳಗಾಗಿ ದುಶ್ಚಟಕ್ಕೆ ಬಲಿಯಾಗಬಾರದು. ಒಮ್ಮೆ ಡ್ರಗ್ಸ್ ವ್ಯಸನಕ್ಕೆ ಸಿಲುಕಿದರೆ ಅದರಿಂದ ಹೊರಬರುವುದು ಕಷ್ಟವಾಗುತ್ತದೆ. ಯುವಕರು ಹಿರಿಯರ ಮಾತು ಕೇಳಿ ತಮ್ಮ ಭವಿಷ್ಯದ ಬಗ್ಗೆ ಜವಾಬ್ದಾರಿ ವಹಿಸಬೇಕು ಎಂದರು.

ಡ್ರಗ್ಸ್ ಹಾಗೂ ಗಾಂಜಾ ಡಬ್ಬಾ ಅಂಗಡಿಗಳಲ್ಲಿಯೇ ಸುಲಭವಾಗಿ ಸಿಗುತ್ತಿದ್ದು, ಸಣ್ಣ ವಯಸ್ಸಿನ ಮಕ್ಕಳು ಬಲಿಯಾಗುತ್ತಿರುವುದು ಆತಂಕಕಾರಿ. ಭವಿಷ್ಯದ ಪೀಳಿಗೆ ಅಪಾಯದಲ್ಲಿದ್ದು, ಮಾದಕ ವಸ್ತುಗಳ ಜಾಲಕ್ಕೆ ಕಡಿವಾಣ ಹಾಕುವುದು ಪೊಲೀಸ್ ಇಲಾಖೆ ಹಾಗೂ ನಮ್ಮೆಲ್ಲರ ಜವಾಬ್ದಾರಿ. ಪಾಲಕರು ಮಕ್ಕಳಿಗೆ ದುಶ್ಚಟಗಳ ಅಪಾಯ ತಿಳಿಹೇಳಿ ಸರಿದಾರಿಗೆ ತರುವ ಕೆಲಸ ಮಾಡಬೇಕು ಎಂದು ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್‌ ಹೇಳಿದರು.

ಕೊಪ್ಪಳ ಎಸ್ಪಿ ಸಾಹಿಲ್ ಬಾಗ್ಲಾ ಮಾತನಾಡಿ, ಸಿಗರೇಟಿನಂತಹ ಆರಂಭಿಕ ದುಶ್ಚಟಗಳು ಮುಂದಿನ ದಿನಗಳಲ್ಲಿ ಗಂಭೀರ ವ್ಯಸನಗಳಿಗೆ ಕಾರಣವಾಗುವ ಸಾಧ್ಯತೆ ಇರುವುದರಿಂದ ಆರಂಭದಲ್ಲಿಯೇ ಅವುಗಳಿಗೆ ಕಡಿವಾಣ ಹಾಕಬೇಕು. ಡ್ರಗ್ಸ್ ಸೇವನೆ ಅಥವಾ ಮಾರಾಟದ ಕುರಿತು ಮಾಹಿತಿ ದೊರೆತರೆ ಪೊಲೀಸರಿಗೆ ತಿಳಿಸಬೇಕು. ಮಾಹಿತಿ ನೀಡುವವರ ವಿವರವನ್ನು ಗೌಪ್ಯವಾಗಿಡಲಾಗುವುದು ಎಂದು ಹೇಳಿದರು.

ತುಂಗಭದ್ರಾ ಕಾಡಾ ನಿಗಮದ ಅಧ್ಯಕ್ಷ ಹಸನಸಾಬ್ ದೋಟಿಹಾಳ ಮಾತನಾಡಿ, ಡ್ರಗ್ಸ್ ಸೇವನೆ ಹಾಗೂ ಮಾರಾಟದ ಕುರಿತು ಮಾಹಿತಿ ದೊರೆತ ಕೂಡಲೇ ಪೊಲೀಸ್ ಇಲಾಖೆಗೆ ತಿಳಿಸುವ ಮೂಲಕ ಮಾದಕ ವಸ್ತುಗಳ ವಿರುದ್ಧದ ಹೋರಾಟಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಸಿಪಿಐ ವಿಶ್ವನಾಥ ಹಿರೇಗೌಡ ಮಾತನಾಡಿ, ಡ್ರಗ್ಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಈಗಾಗಲೇ ಮೂರು ಪ್ರಕರಣಗಳನ್ನು ದಾಖಲಿಸಲಾಗಿದ್ದು, ಡಾಬಾ ಮಾಲೀಕರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದರು.

ಮಾಜಿ ಶಾಸಕ ಕೆ. ಶರಣಪ್ಪ ವಕೀಲರು, ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡ, ಪಿಎಸ್ಐ ಹನುಮಂತಪ್ಪ ತಳವಾರ, ತಹಸೀಲ್ದಾರ್‌ ಅಶೋಕ ಶಿಗ್ಗಾಂವಿ, ತಾಪಂ ಇಒ ಅಮರೇಶ್ ಯಾದವ್, ಪುರಸಭೆ ಮುಖ್ಯಾಧಿಕಾರಿ ವೆಂಕಪ್ಪ ಬೀಳಗಿ, ಜೀವನಸಾಬ್ ಬಿನ್ನಾಳ, ನಟರಾಜ ಸೋನಾರ ಉಪಸ್ಥಿತರಿದ್ದರು.