ಸಾರಾಂಶ
ಯುವಕ, ಯುವತಿಯರು ಮನಸ್ಸು ಮಾಡಿದರೆ ಉತ್ತಮ ಸಮಾಜ ನಿರ್ಮಿಸಬಹುದು ಎಂದು ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗಡೆ ಹೇಳಿದರು.
ಕನ್ನಡಪ್ರಭ ವಾರ್ತೆ ತುಮಕೂರುಯುವಕ, ಯುವತಿಯರು ಮನಸ್ಸು ಮಾಡಿದರೆ ಉತ್ತಮ ಸಮಾಜ ನಿರ್ಮಿಸಬಹುದು ಎಂದು ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗಡೆ ಹೇಳಿದರು.ನಗರದ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ಮತ್ತು ಪಾವಗಡದ ಶ್ರೀಶಾರದಾ ದೇವಿ ಕಣ್ಣಿನ ಆಸ್ಪತ್ರೆ, ಬೆಂಗಳೂರಿನ ನಯೋನಿಕ್ ಐಕೇರ್ ಟ್ರಸ್ಟ್, ಡಾ.ಚಂದ್ರಶೇಖರ್ ಸ್ಪೀಚ್ ಆ್ಯಂಡ್ ಹಿಯರಿಂಗ್ ಇನ್ಟಿಟ್ಯೂಟ್, ಜಿಲ್ಲಾ ಆರೋಗ್ಯ ಕೇಂದ್ರ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ನೂತನ ಆರೋಗ್ಯ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪ್ರತಿಯೊಬ್ಬರು ತೃಪ್ತಿ ಮತ್ತು ಮಾನವೀಯತೆ ಎಂಬ ಎರಡು ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಜೀವನದ ಅಗತ್ಯಗಳನ್ನು ಪೂರೈಸಲು ಹಣ ಸಂಪಾದನೆ ಅನಿವಾರ್ಯವಾಗಿದೆ. ಕಷ್ಟಪಟ್ಟು ಕಲಿತ ವಿದ್ಯೆಯಿಂದ ನ್ಯಾಯ ಮತ್ತು ರಾಜಾಮಾರ್ಗದಲ್ಲಿ ಸಂಪಾದನೆ ಮಾಡಬೇಕೆ ಹೊರತು, ಇನ್ನೊಬ್ಬರ ಜೇಬಿನಿಂದ ಕಸಿಯಬಾರದು. ಬೇರೆಯವರ ಹೊಟ್ಟೆಯ ಮೇಲೆ ಹೊಡೆದು ಸಂಪಾದನೆಗೆ ಇಳಿಯಬಾರದು ಎಂದರು.
ಪ್ರಸ್ತುತ ದಿನಗಳಲ್ಲಿ ಮನುಷ್ಯ ದುರಾಸೆಗೆ ಬಿದ್ದು ಶ್ರೀಮಂತನಾಗಲು ಹವಣಿಸುತ್ತಿದ್ದಾನೆ. ಸಮಾಜದ ಎಲ್ಲಾ ಸಮಸ್ಯೆಗಳಿಗೆ ಇದೇ ಮೂಲ. ಇದು ಅವನ ತಪ್ಪಾಲ್ಲ, ಸಮಾಜದ ತಪ್ಪು. ಜೈಲಿಗೆ ಹೋಗಿ ಬಂದವರನ್ನು ಹೂವಿನ ಹಾರ ಹಾಕಿ ಸನ್ಮಾನ ಮಾಡುವ ಸ್ಥಿತಿಯಲ್ಲಿ ನಾವಿರುವುದು ಶೋಚನೀಯ. ಕ್ಯಾನ್ಸರ್, ಕೋರೋನಾ ಮಾರಕ ರೋಗಳಿಗೆ ಮದ್ದಿದೆ. ಆದರೆ ದುರಾಸೆಗೆ ಯಾವುದೇ ಮದ್ದಿಲ್ಲ. ಜೀವನದಲ್ಲಿ ಏನು ಆಗುವ ಮೊದಲು ಮಾನವನಾಗು, ಮಾನವೀಯತೆಯನ್ನು ಬೆಳೆಸಿಕೊಳ್ಳದೇ ಹೋದರೆ ಜೀವನ ಸಾರ್ಥಕವಾಗುವುದಿಲ್ಲ. ಲೋಕ್ತಾಯುಕ್ತ ಹುದ್ದೆಗೆ ಬರುವ ಮುನ್ನಾ ಕೂಪಮಂಡೂಕನ್ನಾಗಿದ್ದೆ ಈ ಹುದ್ದೆಗೆ ಬಂದ ನಂತರವೇ ಜನರ ಕಷ್ಟ ಕಾರ್ಪಣ್ಯ ಅರಿವಾಯಿತು ಎಂದು ಹೇಳಿದರು.ಪಾವಗಡದ ಶ್ರೀ ಶಾರದದೇವಿ ಕಣ್ಣಿನ ಆಸ್ಪತ್ರೆ ಅಧ್ಯಕ್ಷ ಸ್ವಾಮಿ ಜಪಾನಂದ ಜೀ ಮಹಾರಾಜ್ ಮಾತನಾಡಿ, ವೈದ್ಯರೇ ದೇಶದ ಆಸ್ತಿ, ಭವಿಷ್ಯ. ಪಾವಗಡ ತಾಲೂಕಿನ ನುರಿತ ವೈದ್ಯರ ಸಹಾಯದಿಂದ 800 ಮಕ್ಕಳಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮೂಲಕ ಬೆಳಕು ಮೂಡಿಸಲಾಗಿದೆ. ಹಳ್ಳಿ ಜೀವನ ಇಂದು ಕಷ್ಟಕರವಾಗಿದೆ. ವೈದ್ಯರು ಕಡೆ ಪಕ್ಷ ಒಂದು, ಎರಡು ವರ್ಷವಾದರೂ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವ ಸಂಕಲ್ಪ ಮಾಡುವ ಹೃದಯವಂತಿಕೆ ಮೆರೆಯಬೇಕು ಎಂದರು.ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ನಿಯೋನಿಕ್ ಸಂಸ್ಥೆ ಮಕ್ಕಳ ಕಣ್ಣಿನ ದೋಷ ನಿವಾರಣೆಗಾಗಿ ಉತ್ತಮ ಕೆಲಸ ಮಾಡುತ್ತಿದೆ. ರಾಜ್ಯಾದ್ಯಂತ 13 ಕೇಂದ್ರಗಳನ್ನು ಸ್ಥಾಪಿಸಿ ಮಕ್ಕಳಲ್ಲಿನ ಕಣ್ಣಿನ ದೋಷ ನಿವಾರಣೆ ಮಾಡಿ ಲಕ್ಷಾಂತರ ಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ. ಇಂತಹ ಮಾನವೀಯ ಕೆಲಸಕ್ಕೆ ಶ್ರೀದೇವಿ ಮೆಡಿಕಲ್ ಕಾಲೇಜು ಸಂಶೋಧನಾ ಕೇಂದ್ರ, ಸದಾ ಬೆಂಬಲ- ಸಹಕಾರ ನೀಡಲಿದೆ. ಇಂತಹ ಮಕ್ಕಳಿಗೆ ಸಂಸ್ಥೆಯ ವತಿಯಿಂದ ಉಚಿತ ಚಿಕಿತ್ಸೆ ನೀಡಲಾಗುವುದು. ಬೇರೆಯವರ ನೋವು-ಸಂಕಷ್ಟ ಅರ್ಥ ಮಾಡಿಕೊಂಡರೆ ಮಾನವೀಯತೆ ಗುಣ ತಾನಾಗಿಯೇ ಮೂಡುತ್ತದೆ ಎಂದು ಹೇಳಿದರು.ದೃಷ್ಟಿದೋಷ ಮಕ್ಕಳಿಗೆ ನಿಯೋನಿಕಾ ಐ ಕೇರ್ ಸಂಸ್ಥೆಯ ವತಿಯಿಂದ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಯಿತು. ಎಸ್.ನಾಗಣ್ಣ, ಡಾ.ಎಸ್.ಆರ್. ಚಂದ್ರಶೇಖರ್, ಸಿ.ಎ. ಸುರೇಶ್ ಬಾಬು, ಖಜಾಂಚಿ ವಿ.ಎಸ್.ಶಾಂತವದನ, ಶ್ರೀದೇವಿ ವೈದ್ಯಕೀಯ ನಿರ್ದೇಶಕ ಡಾ.ರಮಣ್ ಎಂ ಹುಲಿನಾಯ್ಕರ್, ಶ್ರೀದೇವಿ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್.ಪಾಟೀಲ್, ಟ್ರಸ್ಟಿ ಡಾ.ಲಾವಣ್ಯ, ನಿಯೋನಿಕಾ ಐ ಕೇರ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಪ್ರಶಾಂತ್ ಭಾಗವಹಿಸಿದ್ದರು.