ಸಾರಾಂಶ
ಕನ್ನಡಪ್ರಭ ವಾರ್ತೆ ಆಳಂದ
ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜಾರಿಗೊಳಿಸಿದ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ನೋಡಿಕೊಳ್ಳಲು ಜಿಲ್ಲಾಡಳಿತವು ಮುನ್ನೆಚ್ಚರಿಕೆ ಕ್ರಮವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಸರಹದಿನಲ್ಲಿ ಪ್ರತ್ಯೇಕ ಚೆಕ್‍ಪೋಸ್ಟ್ ಸ್ಥಾಪಿಸುವ ಮೂಲಕ ತೀವ್ರ ತರಹದ ಕಟ್ಟೆಚ್ಚರ ವಹಿಸಿ ಚಲನ ವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ.ಬೀದರ್ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿರುವ ಆಳಂದ ತಾಲೂಕು ಮಹಾರಾಷ್ಟ್ರಕ್ಕೆ ಹೊಂದಿಕೊಂಡಿದ್ದು, ಈ ತಾಲೂಕಿನ ಖಜೂರಿ ಮತ್ತು ಹಿರೋಳಿ ಗಡಿಯಲ್ಲಿ ಸೇರಿ ನಾಲ್ಕು ಚೆಕ್‌ಪೋಸ್ಟ್ ಸ್ಥಾಪಿಸಿರುವ ಆಡಳಿತವು ಪೊಲೀಸ್ ಹಾಗೂ ಕಂದಾಯ ಸೇರಿ ತನಿಖಾ ಅಧಿಕಾರಿಗಳನ್ನು ನಿಯೋಜಿಸಿ ಒಳ ಬರುವ ವಾಹನಗಳ ತಪಾಸಣೆ ಕೈಗೊಂಡು ಪ್ರವೇಶ ನೀಡಲಾಗುತ್ತಿದೆ.
ಚುನಾವಣಾಧಿಕಾರಿ ವರ್ಗಾವಾಣೆ: ತಹಸೀಲ್ದಾರರಾಗಿದ್ದ ಸಹಾಯಕ ಚುನಾವಣಾಧಿಕಾರಿ ಸುರೇಶ ಅಂಕಲಗಿ ಅವರ ವರ್ಗಾವಣೆಯಾಗಿದ್ದು, ಆ ಸ್ಥಾನಕ್ಕೆ ಮಹಾಂತೇಶ ಮುಳಗೊಂಡ ನಿಯೋಜಿತರಾಗಿದ್ದಾರೆ.ಒಟ್ಟು ಮತದಾರರು: ಒಟ್ಟು ತಾಲೂಕಿನಲ್ಲಿ 249837 ಮತದಾರರ ಪೈಕಿ 129731 ಪುರುಷ ಹಾಗೂ 120065 ಮಹಿಳಾ ಮತ್ತು ಇತರೆ ಮತದಾರರು 41 ಅಲ್ಲದೆ, ಸರ್ವಿಸ್ ವೋಟರ್ಸ್ 269, ಯುವ ಮತದಾರರು 4,334 ಮತ್ತು ಹಿರಿಯ (85 ವಯಸ್ಸಿನ ಮೇಲ್ಪಟ್ಟವರು), 2.621 ಮತದಾರರು ಸೇರಿ 249837 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ: ಪಟ್ಟಣದ ತಾಲೂಕು ಆಡಳಿತಸೌಧ ಸಭಾಂಗಣದಲ್ಲಿ ಮಂಗಳವಾರ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾನ ನಡೆಸುವ ಪ್ರಯುಕ್ತ ಮುಂಜಾಗ್ರತವಾಗಿ ಮತಗಟ್ಟೆ ಅಧಿಕಾರಿಗಳ ಮತ್ತು ಸಹಾಯ ಸಿಬ್ಬಂದಿಗಳ ಸಭೆ ಕರೆದ ತರಬೇತಿ ನೀಡಲಾಯಿತು.ಸಭೆಯಲ್ಲಿ ಸಹಾಯಕ ಚುನಾವಣಾಧಿಕಾರಿ ಆಗಿರುವ ತಹಸೀಲ್ದಾರ ಮಹಾಂತೇಶ ಅವರು ಮಾತನಾಡಿ, ಚುನಾವಣೆಯ ಕಟ್ಟುನಿಟ್ಟಾಗಿ ನಿಮಾವಳಿಯಂತೆ ಕೈಗೊಳ್ಳಲು ಸೂಚಿಸಿದ ಅವರು, ಪಿಡಬ್ಲೂಡಿ ಮತ್ತು 85ಕ್ಕೂ ಹೆಚ್ಚು ವಯಸ್ಸಿನ ಮತದಾರರಿಗೆ ಯಾವ ರೀತಿ ಮತದಾನ ಕೈಗೊಳ್ಳಬೇಕು ಎಂಬುವ ಕುರಿತು ಮಾಹಿತಿ ನೀಡಲಾಯಿತು. ಚುನಾವಣೆ ಶಾಖೆ ಶಿರಸ್ತೆದಾರ ಮಹೇಶ ಸಜನ್ ಇತರರು ಇದ್ದರು. ಖಜೂರಿ, ಹಿರೋಳಿ, ಮಾದನಹಿಪ್ಪರಗಾ, ನಿಂಬಾಳ ಗಡಿಯಲ್ಲಿ ಚೆಕ್‍ಪೋಸ್ಟ್ ಸ್ಥಾಪಿಸಿದ್ದು, ಮದ್ಯ ಸೇರಿ ಯಾವುದೇ ಕಾನೂನು ಬಾಹೀರ ವಸ್ತುಗಳನ್ನು ಅಕ್ರಮವಾಗಿ ಸಾಗಾಣೆ ಮಾಡದಂತೆ ನಿಗಾ ವಹಿಸಲಾಗುತ್ತಿದೆ. ರಾಜಕೀಯ ಪಕ್ಷದವರ ಸಭೆ, ಸಮಾರಂಭ ನಡೆಸಲು ಕಡ್ಡಾಯವಾಗಿ ಚುನಾವಣೆಯ ಆಯೋಗದ ಅನುಮತಿ ಪಡೆಯಬೇಕಿದೆ. ತಾಲೂಕಿನಲ್ಲಿ ಒಟ್ಟು 254 ಮತಗಟ್ಟೆಗಳಿದ್ದು, 5 ಅತಿ ಸೂಕ್ಷ್ಮ, 39 ಸೂಕ್ಷ್ಮ ಮತಗಟ್ಟೆ ಕೇಂದ್ರಗಳೆಂದು ಗುರುತಿಸಲಾಗಿದೆ. ಯಾವುದೇ ರೀತಿಯಾದ ಅಕ್ರಮಗಳ ಕಂಡುಬಂದಲ್ಲಿ ದೂ.08477-202428ಗೆ ಕರೆ ಮಾಡಿ ಮಾಹಿತಿ ಕೊಡಬೇಕು.
- ಮಹಾಂತೇಶ ಮುಳಗೊಂಡ ತಹಸೀಲ್ದಾರರು, ಸಹಾಯಕ ಚುನಾವಣಾಧಿಕಾರಿ ಆಳಂದ.