ಸಾರಾಂಶ
ಗದಗ/ಮುಂಡರಗಿ: ವಿಶ್ವ ಪ್ರಜಾಪ್ರಭುತ್ವ ದಿನಾಚರಣೆಯನ್ನು ಮಾನವ ಸರಪಳಿ ರಚಿಸುವ ಮೂಲಕ ರಾಜ್ಯದಲ್ಲಿ ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಸಂಕಲ್ಪ ಮಾಡಿ ರಾಷ್ಟ್ರಸೇವೆಯಲ್ಲಿ ಎಲ್ಲರೂ ತೊಡಗಬೇಕು ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಭಾನುವಾರ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿ ನಿರ್ಮಿಸುವ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಕೆ ಓದಿ ಪಾಲ್ಗೊಂಡು ಮಾತನಾಡಿದರು.ಪ್ರಜಾಪ್ರಭುತ್ವವು ಜನ ಸಾಮಾನ್ಯರಿಗೆ ಬಲ ತುಂಬುವ ವ್ಯವಸ್ಥೆಯಾಗಿದ್ದು ಹಾಗಾಗಿ ಸಾರ್ವಜನಿಕರಿಗೆ ಪ್ರಜಾಪ್ರಭುತ್ವ ಬಗ್ಗೆ ಜಾಗೃತ ಮೂಡಿಸುವ ಸಲುವಾಗಿ ಈ ಮಾನವ ಸರಪಳಿ ಕಾರ್ಯಕ್ರಮ ಜರುಗಿದ್ದು ಡಾ.ಬಿ.ಆರ್. ಅಂಬೇಡ್ಕರ್ ನೀಡಿದ ಸಂವಿಧಾನದ ಆಶಯದಂತೆ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕು. ಸ್ವಾತಂತ್ರ್ಯ ಹೋರಾಟದಲ್ಲಿ ಮುಂಡರಗಿ ಭೀಮರಾಯರ ಪಾತ್ರ ಈ ಭಾಗದಲ್ಲಿ ಬಹು ದೊಡ್ಡದಾಗಿದೆ ಎಂದರು.
ದೇಶದಲ್ಲಿ ಅನೇಕ ಧರ್ಮ,ಸಾವಿರಾರು ಜಾತಿ,ನೂರಾರು ಭಾಷೆಗಳು ಇದ್ದರೂ ಎಲ್ಲರೂ ಒಂದಾಗಿ ಪರಸ್ಪರ ನಂಬಿಕೆ ವಿಶ್ವಾಸ ಗೌರವ ಪ್ರೀತಿಯಿಂದ ನಡೆದುಕೊಳ್ಳುತ್ತೇವೆ, ಎಲ್ಲಿಯವರೆಗೆ ಈ ಭ್ರಾತೃತ್ವ ಭಾವನೆ ಇರುತ್ತದೆಯೊ ಅಲ್ಲಿಯವರೆಗೆ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿರುತ್ತದೆ. ಪ್ರಜಾಪ್ರಭುತ್ವವು ಕಡು ಬಡವ, ದಲಿತರಿಗೆ ಶೋಷಿತರಿಗೆ ಬಲ ತುಂಬುತ್ತದೆ ಈ ವ್ಯವಸ್ಥೆ ಕೆಡಿಸುವ ಮನಸ್ಸಿನವರಿಗೆ ತಕ್ಕ ಉತ್ತರ ನೀಡಿ ಸಂವಿಧಾನದ ಪ್ರಸ್ತಾವನೆಯಲ್ಲಿರುವ ಆಶಯ ಈಡೇರಿಸಿ ಪ್ರತಿಯೊಬ್ಬ ನಾಗರಿಕನಿಗೂ ನ್ಯಾಯ ಮುಟ್ಟಬೇಕು. ಮಾನವ ಸರಪಳಿ ನಿರ್ಮಿಸಿದ ಸಂದರ್ಭದಲ್ಲಿ ಎಲ್ಲರೂ ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಸಂಕಲ್ಪ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆ ಭದ್ರಗೊಳಿಸಿ ರಾಷ್ಟ್ರ ನಿರ್ಮಾಣದಲ್ಲಿ ತೊಡಗಬೇಕು ಎಂದರು.ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಜಿಲ್ಲೆಯ ಬಾಲೇಹೊಸೂರು ಗ್ರಾಮದಿಂದ ಮುಂಡರಗಿ ಮಾರ್ಗವಾಗಿ ಕೊಪ್ಪಳ ಜಿಲ್ಲೆ ಅಳವಂಡಿವರೆಗೆ ಒಟ್ಟು 61 ಕಿಮೀ ಮಾನವ ಸರಪಳಿ ರಚಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಗದಗ ಜಿಲ್ಲೆಯಿಂದ 112652 ಜನರು ನೋಂದಾಯಿಸಿದಕ್ಕೆ ಗದಗ ಜಿಲ್ಲೆ ನೋಂದಣಿಯಲ್ಲಿ ಮುಂಚೂಣಿ ಸ್ಥಾನದಲ್ಲಿದೆ ಎಂದರು.
ಇದೇ ವೇಳೆ ಸಂವಿಧಾನದ ಸಾರುವ ಪ್ರಸ್ತಾವನೆ ಓದಿ ಹಾಗೂ ಪ್ರಜಾಪ್ರಭುತ್ವದ ರಕ್ಷಣೆಯ ಹೊಣೆಗಾರಿಕೆ ನೆನಪಿಸುವ ಜಾಗೃತಿ ಮೂಡಿಸಿ ಸ್ಥಳದಲ್ಲಿದ್ದ ಮಾನವ ಸರಪಳಿಯಲ್ಲಿ ಪಾಲ್ಗೊಂಡು ಘೋಷಣೆ ಕೂಗಿ ನಂತರ ಪ್ರವಾಸಿ ಮಂದಿರದಲ್ಲಿ ಗಿಡಗಳನ್ನೂ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ರೋಣ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಮಹತ್ವದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಮುಂಡರಗಿ ಪಟ್ಟಣದಲ್ಲಿ ಆಯೋಜಿಸಿ ಮಾನವ ಸರಪಳಿ ನಿರ್ಮಿಸಿ ಪ್ರಜಾಪ್ರಭುತ್ವದ ಪ್ರಾಮುಖ್ಯತೆ ಸಾರಲು ಪಾಲ್ಗೊಂಡು ಎಲ್ಲರಿಗೂ ಅಭಿನಂದನೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ, ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ, ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಸಮಾಜ ಕಲ್ಯಾಣ ಇಲಾಖೆಯ ಮಹೇಶ ಪೊತದಾರ, ಮುಂಡರಗಿ ತಹಸೀಲ್ದಾರ್ ಯರ್ರಿಸ್ವಾಮಿ ಹಾಜರಿದ್ದರು. ಡಾ.ನಿಂಗು ಸೊಲಗಿ ನಿರೂಪಿಸಿದರು.