ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಉತ್ತಮ ಫಲಿತಾಂಶವು ಪಾಲಕರಲ್ಲಿದ್ದ ಖಾಸಗಿ ಶಾಲೆಗಳ ವ್ಯಾಮೋಹ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದ್ದು, ತಾಲೂಕಿನ ಸರ್ಕಾರಿ ಶಾಲೆಗಳ ವ್ಯವಸ್ಥೆ ಬಲಪಡಿಸಲು ಸಂಕಲ್ಪ ಮಾಡಿದ್ದೇನೆ.
ಕನ್ನಡಪ್ರಭ ವಾರ್ತೆ ಗಜೇಂದ್ರಗಡ
ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಉತ್ತಮ ಫಲಿತಾಂಶವು ಪಾಲಕರಲ್ಲಿದ್ದ ಖಾಸಗಿ ಶಾಲೆಗಳ ವ್ಯಾಮೋಹ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದ್ದು, ತಾಲೂಕಿನ ಸರ್ಕಾರಿ ಶಾಲೆಗಳ ವ್ಯವಸ್ಥೆ ಬಲಪಡಿಸಲು ಸಂಕಲ್ಪ ಮಾಡಿದ್ದೇನೆ ಎಂದು ವಿಧಾನಸಭಾಧ್ಯಕ್ಷ ಜಿ.ಎಸ್.ಪಾಟೀಲ ಹೇಳಿದರು.ಪಟ್ಟಣದ ಕುಷ್ಟಗಿ ರಸ್ತೆಯ ಬಿಎಸ್ಎಸ್ ಕಾಲೇಜು ಬಳಿ ಜಿಲ್ಲಾಡಳಿತ, ಜಿಪಂ ಹಾಗೂ ಹಿಂದುಳಿದ ಕಲ್ಯಾಣ ಇಲಾಖೆ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಉದ್ಘಾಟಿಸಿ ಮಾತನಾಡಿದರು.
ಕಲಿಯುವ ಮನಸ್ಸಿದ್ದರೆ ಸಾಧನೆ ಸರಳ ಎನ್ನುವ ಅನೇಕ ಉದಾಹರಣೆಗಳು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಉತ್ತಮ ಫಲಿತಾಂಶದ ಪರಿಣಾಮ ಪಾಲಕರಲ್ಲಿ ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹ ಕಡಿಮೆ ಮಾಡಿಸಿ ಸರ್ಕಾರಿ ಶಾಲೆಗಳಲ್ಲಿ ಕಲಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಪ್ರತಿಭೆ ಇರುವ ಮಕ್ಕಳ ನಮ್ಮ ಸರ್ಕಾರಿ ಶಾಲೆಗಳಲ್ಲಿದ್ದಾರೆ. ನನಗೆ ಆರ್ಶೀವಾದ ಮಾಡಿದ ಸಂದರ್ಭದಲ್ಲಿ ತಾಲೂಕಿನ ಶಿಕ್ಷಣ ವ್ಯವಸ್ಥೆ ಬಲಪಡಿಸಲು ಶ್ರಮಿಸಿದ್ದೇನೆ. ಈ ಬಾರಿ ತಾಲೂಕಿನಲ್ಲಿ ಸೋರುವ ಹಾಗೂ ಶಿಥಿಲ ಕಟ್ಟಡಗಳ ದುರಸ್ತಿ ಜತೆಗೆ ಸುಭದ್ರ ಕಟ್ಟಡಗಳ ನಿರ್ಮಾಣಕ್ಕೆ ಸಂಕಲ್ಪ ಮಾಡಿದ್ದೇನೆ ಎಂದ ಅವರು, ವಿದ್ಯಾರ್ಥಿಗಳು, ಚಾಪೆ ಹಾಗೂ ಜಮಖಾನೆ ಮೇಲೆ ಮಲಗುವುದು ನಾನು ಸಹಿಸುವುದಿಲ್ಲ. ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಗುಣಮಟ್ಟದ ಊಟ ಹಾಗೂ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಬೇಕು. ಅವಶ್ಯಕತೆ ಬಿದ್ದರೆ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಗೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಶೀಘ್ರದಲ್ಲೇ ತಹಸೀಲ್ದಾರ್ ಕಚೇರಿ, ನ್ಯಾಯಾಲಯ ಉದ್ಘಾಟನೆ ಆಗಲಿದ್ದು, ೭ ಎಕರೆ ಜಮೀನಿನಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ₹೨ ಕೋಟಿ ಬಿಡುಗಡೆಯಾಗಿದೆ. ಎಲ್ಲ ವರ್ಗದ ಜನರಿಗೆ ಅನುಕೂಲವಾಗಲೆಂದು ಸರ್ಕಾರದ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು.ಪ್ರಾಸ್ತಾವಿಕವಾಗಿ ಹಿಂದುಳಿದ ವರ್ಗಗಳ ತಾಲೂಕು ಅಧಿಕಾರಿ ಎಂ.ಎಲ್. ಹಣಸಿ ಮಾತನಾಡಿ, ಪಟ್ಟಣದಲ್ಲಿ ಅಂದಾಜು₹೫ ಕೋಟಿ ೧೦ ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡವು ೨೦ ಕೊಠಡಿಗಳನ್ನು ಹೊಂದಿದ್ದು, ೧೫೬ ವಿದ್ಯಾರ್ಥಿನಿಯರು ಇರಲಿದ್ದಾರೆ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಎಂ.ಎಂ. ತುಮ್ಮರಮಟ್ಟಿ, ಪಿಡಿ ಎಂ.ಬಿ. ಚಳಗೇರಿ, ತಾಪಂ ಇಒ ಚಂದ್ರಶೇಖರ ಕಂದಕೂರ, ಮುಖಂಡರಾದ ಅಶೋಕ ಬಾಗಮಾರ, ಮಿಥುನ ಪಾಟೀಲ್, ಸಿದ್ದಣ್ಣ ಬಂಡಿ, ಸುಭಾಸ ಮ್ಯಾಗೇರಿ, ವೀರಣ್ಣ ಶೆಟ್ಟರ, ಶ್ರೀಕಾಂತ ಅವಧೂತ, ರಾಜು ಸಾಂಗ್ಲೀಕರ, ಶಿವರಾಜ ಘೋರ್ಪಡೆ, ಶ್ರೀಧರ ಬಿದರಳ್ಳಿ, ಶರಣಪ್ಪ ಚಳಗೇರಿ, ಇಮಾಮಸಾಬ ಬಾಗವಾನ, ಬಸವರಾಜ ಕೊಟಗಿ, ಶಶಿಧರ ಹೂಗಾರ, ಹಸನ ತಟಗಾರ, ಯಲ್ಲಪ್ಪ ಬಂಕದ, ಶಶಿಧರ ವಕ್ಕಲರ, ದುರಗಪ್ಪ ಮುಧೋಳ, ಶರಣು ಪೂಜಾರ, ಶಿವಕುಮಾರ ಚವ್ಹಾಣ, ಸಿದ್ದು ಗೊಂಗಡಶೆಟ್ಟಿಮಠ ಸೇರಿ ಇತರರು ಇದ್ದರು.