ಕಮಲಾಪುರ ಪುರಸಭೆ ವ್ಯಾಪ್ತಿಯ ಎಲ್ಲ ಗ್ರಾಪಂಗಳ ಜನರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು.

ಹೊಸಪೇಟೆ: ಕಚೇರಿಗಳಿಗೆ ಅಲೆದಾಡಿ ಮಾಹಿತಿ ಪಡೆಯಲು ಸಾಧ್ಯವಾಗದ ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರವು ಪ್ರಜಾಸೇವೆ ಕಾರ್ಯಕ್ರಮ ಆಯೋಜಿಸಿದ್ದು, ಜನರ ಮನೆ ಬಾಗಿಲಿಗೆ ಸೇವೆ ಒದಗಿಸುವ ಮೂಲಕ ಕಾಲಮಿತಿಯೊಳಗೆ ಸಮಸ್ಯೆ ಬಗೆಹರಿಸಲಾಗುವುದು ಎಂದು ತಾಪಂ ಕಾರ್ಯ ನಿರ್ವಹಣಾಧಿಕಾರಿ ಆಲಂ ಭಾಷಾ ತಿಳಿಸಿದರು.

ತಾಲೂಕಿನ ಕಮಲಾಪುರ ಹೋಬಳಿಯ ಹಂಪಿ ಗ್ರಾಮದ ಗ್ರಾಪಂನಲ್ಲಿ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಪ್ರಜಾಸೇವಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಮಲಾಪುರ ಪುರಸಭೆ ವ್ಯಾಪ್ತಿಯ ಎಲ್ಲ ಗ್ರಾಪಂಗಳ ಜನರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು. ಕೇವಲ ನಿವೇಶನ ಮತ್ತು ಮನೆಗೆ ಸಂಬಂಧಿಸಿದ ಸಮಸ್ಯೆ ಮಾತ್ರವಲ್ಲದೆ, ಕೌಟುಂಬಿಕ ಸಮಸ್ಯೆ, ಬಾಲ್ಯ ವಿವಾಹ, ಶಿಕ್ಷಣ ವಂಚಿತ ಮಕ್ಕಳ ಸಮಸ್ಯೆ, ಶಾಂತಿ ​ಸುವ್ಯವಸ್ಥೆಗೆ ಧಕ್ಕೆ ತರುವ ವಿಚಾರಗಳು ಹಾಗೂ ಹೆಣ್ಣುಮಕ್ಕಳು ಬಹಿರಂಗವಾಗಿ ಹೇಳಿಕೊಳ್ಳಲಾಗದ ಸೂಕ್ಷ್ಮ ಸಮಸ್ಯೆ ಇಲ್ಲಿ ಮುಕ್ತವಾಗಿ ಹೇಳಿಕೊಳ್ಳಬಹುದು. ಜನರು ನೀಡುವ ಅರ್ಜಿ ವಿಳಂಬವಿಲ್ಲದೆ ಸಂಬಂಧಪಟ್ಟ ಇಲಾಖೆಗಳಿಗೆ ತಲುಪಿಸಿ ಕಾನೂನಿನ ಚೌಕಟ್ಟಿನಲ್ಲಿ ಪರಿಹರಿಸಲಾಗುವುದು. ಪರಿಹಾರವಾಗದಿದ್ದಲ್ಲಿ ಮೇಲಾಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಭರವಸೆ ನೀಡಿದರು.

ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತ ಗಿಡಮರ ಬೆಳೆಸಬೇಕು. ತೋಟಗಾರಿಕೆ ಇಲಾಖೆಯಲ್ಲಿ ಸಾಕಷ್ಟು ಸಸಿ ಲಭ್ಯವಿದ್ದು, ಜನರು ಅವುಗಳನ್ನು ಪಡೆದು ಬೆಳೆಸುವ ಮೂಲಕ ಹಸಿರು ನಮ್ಮ ಉಸಿರಾಗಲಿ ಎಂಬ ಆಶಯ ಸಾಕಾರಗೊಳಿಸಬೇಕು. ಅಲ್ಲದೆ ಗ್ರಾಪಂಗೆ ಬರುವ ಸಾರ್ವಜನಿಕರೊಂದಿಗೆ ಅಧಿಕಾರಿಗಳು ಸೌಜನ್ಯದಿಂದ ವರ್ತಿಸಿ ಸರಿಯಾಗಿ ಸ್ಪಂದಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜನರ ಅಹವಾಲುಗಳು:

ವಿಶ್ವ ಪಾರಂಪರಿಕ ತಾಣ ಹಂಪಿಗೆ ಆಗಮಿಸುವ ಸಾವಿರಾರು ಪ್ರವಾಸಿಗರ ವಾಸ್ತವ್ಯಕ್ಕಾಗಿ ಹಂಪಿ ಹಾಗೂ ಕಡ್ಡಿರಾಂಪುರ ಗ್ರಾಮಗಳಲ್ಲಿ ಹೋಮ್ ಸ್ಟೇ ನಡೆಸಲು ಪರವಾನಗಿ ನೀಡುವಂತೆ ಸ್ಥಳೀಯರು ಮನವಿ ಸಲ್ಲಿಸಿದರು.

ಹಂಪಿಯಲ್ಲಿ ಹೋಮ್ ಸ್ಟೇಗೆ ಪ್ರತ್ಯೇಕ ನಿಯಮಗಳಿದ್ದು, ಆ ಪ್ರಕ್ರಿಯೆ ಪ್ರಗತಿಯಲ್ಲಿದೆ. ನಿಯಮಾನುಸಾರ ಪರವಾನಗಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಮಲಪನಗುಡಿ ನಿವಾಸಿಯೊಬ್ಬರ ವಿದ್ಯುತ್ ಸಮಸ್ಯೆಗೆ ಸ್ಥಳದಲ್ಲೇ ಸ್ಪಂದಿಸಿದ ಇಒ, ಹಳೆಯ ವಿದ್ಯುತ್ ಕಂಬ ಬದಲಿಸಿ ಒಂದು ವಾರದೊಳಗೆ ಹೊಸ ಕಂಬ ಅಳವಡಿಸುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಕಾರ್ಯಕ್ರಮದಲ್ಲಿ ಹಂಪಿ ಗ್ರಾಪಂ ವ್ಯಾಪ್ತಿಯಲ್ಲಿ ಬಸ್ ನಿಲ್ದಾಣ ನಿರ್ಮಾಣ, ಕುರಿ ಸಾಕಾಣಿಕೆಗೆ ನೆರವು ಹಾಗೂ ಮಹಿಳೆಯೊಬ್ಬರ ಲೀಡ್ ಬ್ಯಾಂಕ್ ಸಂಬಂಧಿತ ಸಮಸ್ಯೆಗಳ ಕುರಿತು ಅರ್ಜಿ ಸಲ್ಲಿಕೆಯಾದವು. ತಹಸೀಲ್ದಾರ್ ಕಾರ್ತಿಕ, ಕಮಲಾಪುರ ಪುರಸಭೆ ಮುಖ್ಯ ಅಧಿಕಾರಿ ವೀರಣ್ಣ, ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ದಯಾನಂದ, ಹಂಪಿ ಗ್ರಾಪಂ ಪಿಡಿಒ ಗಂಗಾಧರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿ ಹಾಗೂ ಸಾರ್ವಜನಿಕರು ಉಪಸ್ತಿತರಿದ್ದರು.