ಸಂವಿಧಾನವು ಸ್ವಾತಂತ್ರದ ದಿಕ್ಕು ತೋರಿಸುವ ದೀಪಸ್ತಂಭವಾಗಿದೆ. ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಶ್ರಮದ ಫಲವಾಗಿ ನಮಗೆ ಪ್ರಪಂಚದಲ್ಲಿಯೇ, ಪ್ರಜಾಸತ್ತಾತ್ಮಕ ರಾಷ್ಟ್ರಗಳಲ್ಲಿಯೇ ಉತ್ಕೃಷ್ಟ ಸಂವಿಧಾನ ದೊರಕಿಸಿ ಕೊಟ್ಟಿದ್ದಾರೆ.
ಹುಬ್ಬಳ್ಳಿ:
ಸಂವಿಧಾನದ ಆಶೋತ್ತರ ಗೌರವಿಸಿ ಕಾಪಾಡುವುದು ನಮ್ಮೆಲ್ಲರ ಮೇಲಿದ್ದು ಪ್ರಜಾಪ್ರಭುತ್ವ ಕಾಪಾಡಬೇಕಿದೆ ಎಂದು ಹುಬ್ಬಳ್ಳಿ ಶಹರ ತಹಸೀಲ್ದಾರ್ ಮಹೇಶ ಭಗವಂತ ಗಸ್ತೆ ಹೇಳಿದರು.ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ಹುಬ್ಬಳ್ಳಿ ನಗರ ತಾಲೂಕು ಗಣರಾಜ್ಯೋತ್ಸವ ಸಮಿತಿಯಿಂದ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಸಂವಿಧಾನವು ಸ್ವಾತಂತ್ರದ ದಿಕ್ಕು ತೋರಿಸುವ ದೀಪಸ್ತಂಭವಾಗಿದೆ. ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಶ್ರಮದ ಫಲವಾಗಿ ನಮಗೆ ಪ್ರಪಂಚದಲ್ಲಿಯೇ, ಪ್ರಜಾಸತ್ತಾತ್ಮಕ ರಾಷ್ಟ್ರಗಳಲ್ಲಿಯೇ ಉತ್ಕೃಷ್ಟ ಸಂವಿಧಾನ ದೊರಕಿಸಿ ಕೊಟ್ಟಿದ್ದಾರೆ. ಇದರ ಜತೆಗೆ ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿದೆ ಎಂದರು.ಪೊಲೀಸ್ ಇಲಾಖೆ, ಗೃಹ ರಕ್ಷಕದಳ, ಪೊಲೀಸ್ ವಾದ್ಯ ವೃಂದ ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಆಕರ್ಷಕ ಪಥ ಸಂಚಲನ ನಡೆಸಿದರು. ವಿಪ ಸದಸ್ಯ ಪ್ರದೀಪ್ ಶೆಟ್ಟರ, ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಫಡ್ನೇಶಿ, ಗ್ರೇಡ್ 2 ತಹಸೀಲ್ದಾರ್ ಶಿವಾನಂದ ಹೆಬ್ಬಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಮಾಜದ ಮುಖಂಡರು, ಶಿಕ್ಷಕರು, ವಿದ್ಯಾರ್ಥಿಗಳಿದ್ದರು.
ಶಾಸಕರ ಏಟು-ಏದುರೇಟುನೆಹರು ಮೈದಾನದಲ್ಲಿ ಸೋಮವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮವು ಕಾಂಗ್ರೆಸ್-ಬಿಜೆಪಿ ಶಾಸಕರಿಬ್ಬರ ಏಟು-ಏದುರೇಟಿಗೆ ಸಾಕ್ಷಿಯಾಯಿತು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಮಹೇಶ ಟೆಂಗಿನಕಾಯಿ, ಇಂದು ಕೆಲವರು ಸಂವಿಧಾನ ಕೈಯಲ್ಲಿಟ್ಟುಕೊಂಡು ಅದಕ್ಕೆ ಅಪಮಾನ ಬಗೆಯುವ ಕಾರ್ಯ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಅಡಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನರೇಗಾ ಯೋಜನೆ ಬದಲಿಸಿ ಜಿ ರಾಮ್ ಜಿ ಮೂಲಕ ಬಡವರಿಗೆ ಉದ್ಯೋಗ ಕಲ್ಪಿಸುವ, ಹಲವು ಸುಧಾರಣೆ ತರುವ ಕಾರ್ಯ ಮಾಡಿದ್ದಾರೆ ಎಂದರು. ತಮ್ಮ ಭಾಷಣ ಮುಗಿಯುತ್ತಿದ್ದಂತೆ ಅಲ್ಲಿಂದ ಹೊರ ನಡೆದರು.ಬಳಿಕ ಮಾತನಾಡಿದ ಶಾಸಕ ಪ್ರಸಾದ ಅಬ್ಬಯ್ಯ, ಜಾತಿ, ಧರ್ಮದ ಹೆಸರಲ್ಲಿ ಅನ್ಯ ಧರ್ಮದವರನ್ನು ದ್ವೇಷಿಸದೇ ಗೌರವಿಸುವಂತಾಗಬೇಕು ಎಂಬುದು ಸಂವಿಧಾನದ ಆಶಯ. ಆದರೆ, ಇತ್ತೀಚಿನ ದಿನಗಳಲ್ಲಿ ಜಾತಿ, ಧರ್ಮದ ಹೆಸರಲ್ಲಿ ಮಾನವೀಯ ಮೌಲ್ಯ ಮರೆತುಬಿಟ್ಟಿದ್ದೇವೆ. ಮಕ್ಕಳಲ್ಲಿ ಜಾತಿ ಎಂಬ ವಿಷಬೀಜ ಬಿತ್ತುವ ಕಾರ್ಯವಾಗುತ್ತಿದೆ. ಎಸ್‌ಐಆರ್ ಹೆಸರಲ್ಲಿ ಕೋಟ್ಯಂತರ ಜನರ ಮತದಾನದ ಹಕ್ಕು ಕಸಿಯುವ ಕಾರ್ಯವಾಗುತ್ತಿದೆ. ಜಿ ರಾಮ್ ಜಿಯಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದೇವೆ ಎನ್ನುತ್ತಾರೆ. ಆದರೆ, ಏನನ್ನೂ ಬದಲಿಸಿಲ್ಲ. ಬದಲಿಗೆ ರಾಜ್ಯಕ್ಕೆ ಮತ್ತಷ್ಟು ಹೊರೆಯಾಗುವಂತೆ ಮಾಡಿದ್ದಾರೆ. ಕೆಲವು ಮನುವಾದಿಗಳು ಸಂವಿಧಾನ ತೆಗೆದು ಮನಸ್ಮೃತಿಯೇ ನಮ್ಮ ಸಂವಿಧಾನ ಎಂಬಂತೆ ಬಿಂಬಿಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.