ವ್ಯಕ್ತಿ ಪೂಜೆ ಬದಲಿಗೆ ಕಾಂಗ್ರೆಸ್ ಮೇಲೆ ಗೌರವ ಬೆಳೆಸಿಕೊಳ್ಳಬೇಕು

| Published : Sep 19 2024, 01:48 AM IST

ಸಾರಾಂಶ

ಕಾರ್ಯಕರ್ತರು ವ್ಯಕ್ತಿ ಪೂಜೆ ಬದಲಿಗೆ, ಕಾಂಗ್ರೆಸ್ ಪಕ್ಷದ ಪರವಾಗಿ ಬದ್ಧತೆ, ಶ್ರದ್ಧೆ ಮತ್ತು ಗೌರವ ಬೆಳೆಸಿಕೊಳ್ಳಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಅರಬಾವಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ದಯಾನಂದ ಪಾಟೀಲ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ಕಾರ್ಯಕರ್ತರು ವ್ಯಕ್ತಿ ಪೂಜೆ ಬದಲಿಗೆ, ಕಾಂಗ್ರೆಸ್ ಪಕ್ಷದ ಪರವಾಗಿ ಬದ್ಧತೆ, ಶ್ರದ್ಧೆ ಮತ್ತು ಗೌರವ ಬೆಳೆಸಿಕೊಳ್ಳಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಅರಬಾವಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ದಯಾನಂದ ಪಾಟೀಲ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ಕೌಜಲಗಿಯ ಅಂಬೇಡ್ಕರ್ ಭವನದಲ್ಲಿ ಜರುಗಿದ ಅರಬಾವಿ ಮತ್ತು ಕೌಜಲಗಿ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಪಕ್ಷ ಸಂಘಟನೆಯಲ್ಲಿ ಬಿಎಲ್‌ಎಗಳ ಪಾತ್ರ ಬಹಳ ಮಹತ್ವದ್ದಾಗಿದೆ. ನಂಬಿಕೆಗೆ ಅರ್ಹರಾದವರನ್ನೇ ಬಿಎಲ್‌ಎ ಗಳನ್ನಾಗಿ ಮತ್ತು ಬೂತ್ ಕಮಿಟಿ ಸದಸ್ಯರು ಮತ್ತು ಅಧ್ಯಕ್ಷರನ್ನಾಗಿ ನೇಮಿಸುವಂತೆ ಸೂಚಿಸಿದರು. ವಿಧಾನಸಭಾ ಮತ್ತು ಲೋಕಸಭಾ ಚುನಾವಣೆ ನಡೆದ ನಂತರ ಅರಬಾವಿ ಮತ್ತು ಕೌಜಲಗಿ ಬ್ಲಾಕ್ ಅಧ್ಯಕ್ಷರು ನಡೆಸಿದ ಕೆಲಸ ಕಾರ್ಯಗಳ ಕುರಿತು ಅವರು ತಪಾಸಣೆ ನಡೆಸಿ ಮುಂಚೂಣಿ ಘಟಕಗಳ ಪದಾಧಿಕಾರಿಗಳ ಪಟ್ಟಿಯನ್ನು ಪಡೆದುಕೊಂಡರು. ಅರಬಾವಿ ಕ್ಷೇತ್ರದ ಮುಖಂಡ ಮತ್ತು ಕೆಪಿಸಿಸಿ ಸದಸ್ಯ ಅರವಿಂದ ದಳವಾಯಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅರಬಾವಿ ಒಂದು ಕಾಲಕ್ಕೆ ಕಾಂಗ್ರೆಸ್ ಪಕ್ಷದ ಭದ್ರ ಕೋಟೆಯಾಗಿತ್ತು. ಮೊದಲ ಚುನಾವಣೆ 1952 ರಿಂದ 2004 ರವರೆಗೆ ಅರಬಾವಿಯಿಂದ ಕಾಂಗ್ರೆಸ್‌ನವರೇ ಶಾಸಕರಾಗಿದ್ದರು ಎಂದು ನೆನಪಿಸಿಕೊಂಡರು. ಗೋಕಾಕದ ಗಾಂಧಿ ಎಂದೇ ಕರೆಯುತ್ತಿದ್ದ ದಿ.ಎಂ.ಆರ್.ಪಂಚಗಾವಿ ವಕೀಲರು ತಮ್ಮ ಮೊದಲ ಚುನಾವಣೆಯಲ್ಲಿ ₹4569 ಖರ್ಚು ಮಾಡಿದ್ದರೇ ತಮ್ಮ ಕೊನೆಯ ಚುನಾವಣೆ 1967ರಲ್ಲಿ ಖರ್ಚು ಮಾಡಿದ್ದು ಕೇವಲ ₹7673 ಮಾತ್ರ ಎಂದು ಹೇಳುವ ಮೂಲಕ ಸಭಿಕರು ಹುಬ್ಬೇರುವಂತೆ ಮಾಡಿದರು. ಆದರೆ, ಇಂದು ಅರಬಾವಿಯಲ್ಲಿ ಚುನಾವಣೆಯಲ್ಲಿ ಬಿಜೆಪಿಯವರು ಕೋಟಿಗಟ್ಟಲೆ ಹಣ ಹರಿಸುತ್ತಿದ್ದು, ಚುನಾವಣೆ ಮಾಡುವದೇ ಕಷ್ಟಸಾಧ್ಯವಾಗಿದೆ. ಕಾಂಗ್ರೆಸ್‌ ಕಾರ್ಯಕರ್ತರು ಸೈದ್ಧಾಂತಿಕ ಬದ್ಧತೆ ಬೆಳೆಸಿಕೊಂಡರೇ ಮಾತ್ರ ಚುಣಾವಣೆ ಗೆಲ್ಲಲು ಸಾಧ್ಯ ಎಂದರು.ವಿ.ಪಿ.ನಾಯಕ ಮಾತನಾಡಿ, ಕಾಂಗ್ರೆಸ್ ಪಕ್ಷದ ವರಿಷ್ಠರೇ ಅರಬಾವಿ ಮತಕ್ಷೇತ್ರವನ್ನು ನಿರ್ಲಕ್ಷಿಸಿದ್ದು ಕಾರ್ಯಕರ್ತರಿಗೆ ಯಾವುದೇ ಪ್ರತಿಫಲಸಿಗುತ್ತಿಲ್ಲ ಎಂದು ವಿಷಾದಿಸಿದರು.ಸಭೆಯಲ್ಲಿ ಪಕ್ಷದ ಹಿರಿಯರಾದ ಸುಭಾಸ ಸೋನವಾಲಕರ, ಮೂಡಲಗಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಅನಿಲ ದಳವಾಯಿ, ಕೆ.ಟಿ.ಗಾಣಿಗೇರ, ಮಾಳಪ್ಪ ಬಿದರಿ, ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರಾಜೇಶ್, ಸೇವಾದಳದ ಸಂಚಾಲಕ ಮೀರಾಸಾಬ್‌ ಅನ್ಸಾರಿ, ರೇವಣ್ಣ ಮುನ್ಯಾಳ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಮಾಮಸಾಬ್‌ ಹುನ್ನೂರ, ರಮೇಶ ಬೆಳಕೂಡ, ವಿರೂಪಾಕ್ಷ ಮುಗಳಖೋಡ, ಸಂಗಮೇಶ ಕೌಜಲಗಿ, ರವಿ ಮೂಡಲಗಿ, ಅಬ್ಬಾಸ್‌ ವನ್ನೂರ, ಬಾಳಪ್ಪ ಪಾಲಕಿ, ದುರ್ಗಪ್ಪ ಅಕ್ಕೆನ್ನವರ, ಕರೆಪ್ಪ ಗೌಡಿ, ಅರಬಾವಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸುರೇಶ ಮಗದುಮ್, ಮತ್ತು ಕೌಜಲಗಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಪ್ರಕಾಶ ಅರಳಿ ಮತ್ತಿತರರು ಇದ್ದರು.