ಸಾರಾಂಶ
ಸಂವಿಧಾನದ ಪರಿಚ್ಛೇದ 15(4), 16(4) ಹಾಗೂ ಪರಿಚ್ಛೇದ 340ರ ಉಲ್ಲೇಖದಂತೆ ರಾಜ್ಯದಲ್ಲಿ ಶಾಶ್ವತ ಹಿಂದುಳಿದ ಆಯೋಗ ಅನುಷ್ಠಾನಗೊಳಿಸಿ ಎಚ್.ಕಾಂತರಾಜ ಆಯೋಗ ನೇಮಕಗೊಳಿಸಲಾಗಿದೆ. ಈ ಆಯೋಗ ನೂರಾರು ಕೋಟಿ ರು. ವೆಚ್ಚದಲ್ಲಿ, ರಾಜ್ಯದ ಪ್ರತಿಯೊಂದು ಮನೆ ಮನೆಗೆ ತೆರಳಿ ನಿಖರವಾದ ಮಾಹಿತಿಗಳನ್ನು ಸಂಗ್ರಹಿಸಿ ವರದಿ ಸಿದ್ಧಪಡಿಸಿದೆ. ಆದರೆ, ಈ ವರದಿ ಇದುವರೆಗೂ ಸರ್ಕಾರ ಸ್ವೀಕರಿಸದೇ ಜಾರಿಗೆ ಹಿಂದೇಟು ಹಾಕಿ, ಸಂವಿಧಾನ ಆಶಯಗಳಿಗೆ ಅವಮಾನ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ತಕ್ಷಣ ಎಚ್ಚೆತ್ತು ಎಚ್.ಕಾಂತರಾಜ ಆಯೋಗದ ವರದಿ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ, ಭದ್ರಾವತಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ವಿಶ್ವಾಸವಿದ್ದು, ರಾಜ್ಯ ಸರ್ಕಾರ ತಕ್ಷಣ ಎಚ್.ಕಾಂತರಾಜ ಆಯೋಗದ ವರದಿ ಜಾರಿಗೊಳಿಸಬೇಕೆಂದು ಹಿಂದುಳಿದ ಜನಜಾಗೃತಿ ವೇದಿಕೆ ಅಧ್ಯಕ್ಷ ತೀ.ನ. ಶ್ರೀನಿವಾಸ್ ಆಗ್ರಹಿಸಿದರು.ವೇದಿಕೆ ವತಿಯಿಂದ ಸೋಮವಾರ ತಾಲೂಕು ಕಚೇರಿ ಮುಂಭಾಗ ಧರಣಿಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರು ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕು. ಎಲ್ಲರನ್ನು ಸಮಾನವಾಗಿ ಕಾಣುವಂತಾಗಬೇಕು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರ ಸಂಕಷ್ಟಗಳಿಗೂ ಸ್ಪಂದಿಸಬೇಕು ಎಂದರು.
ರಾಜ್ಯದಲ್ಲಿ ಬಗರ್‌ಹುಕುಂ ಬಡರೈತರಿಗೆ ಇಂದಿಗೂ ನ್ಯಾಯ ಲಭಿಸಿಲ್ಲ. ಹಲವಾರು ವರ್ಷಗಳಿಂದ ವಾಸಿಸುತ್ತಿದ್ದರೂ ಬದುಕುವ ನೆಲೆಗೆ ಭದ್ರತೆ ಇಲ್ಲದಂತಾಗಿದೆ. ಸರ್ಕಾರದ ಹಲವಾರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಆಡಳಿತ ನಡೆಸುತ್ತಿರುವ ಸರ್ಕಾರಗಳು ಕುರುಡರಂತೆ ವರ್ತಿಸುತ್ತಿವೆ. ಸರ್ಕಾರಗಳ ಧೋರಣೆಯಿಂದಾಗಿ ಹೋರಾಟ ಮಾಡಿ, ತಮ್ಮ ಹಕ್ಕನ್ನು ಪಡೆದುಕೊಳ್ಳುವ ಮನಸ್ಥಿತಿ ಕಳೆದುಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸಂವಿಧಾನದ ಪರಿಚ್ಛೇದ 15(4), 16(4) ಹಾಗೂ ಪರಿಚ್ಛೇದ 340ರ ಉಲ್ಲೇಖದಂತೆ ರಾಜ್ಯದಲ್ಲಿ ಶಾಶ್ವತ ಹಿಂದುಳಿದ ಆಯೋಗ ಅನುಷ್ಠಾನಗೊಳಿಸಿ ಎಚ್.ಕಾಂತರಾಜ ಆಯೋಗ ನೇಮಕಗೊಳಿಸಲಾಗಿದೆ. ಈ ಆಯೋಗ ನೂರಾರು ಕೋಟಿ ರು. ವೆಚ್ಚದಲ್ಲಿ, ರಾಜ್ಯದ ಪ್ರತಿಯೊಂದು ಮನೆ ಮನೆಗೆ ತೆರಳಿ ನಿಖರವಾದ ಮಾಹಿತಿಗಳನ್ನು ಸಂಗ್ರಹಿಸಿ ವರದಿ ಸಿದ್ಧಪಡಿಸಿದೆ. ಆದರೆ, ಈ ವರದಿ ಇದುವರೆಗೂ ಸರ್ಕಾರ ಸ್ವೀಕರಿಸದೇ ಜಾರಿಗೆ ಹಿಂದೇಟು ಹಾಕಿ, ಸಂವಿಧಾನ ಆಶಯಗಳಿಗೆ ಅವಮಾನ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ತಕ್ಷಣ ಎಚ್ಚೆತ್ತು ಎಚ್.ಕಾಂತರಾಜ ಆಯೋಗದ ವರದಿ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿದರು.
ವೇದಿಕೆ ಸಂಚಾಲಕರಾದ ಬಿ. ಜನಮೇಜಿರಾವ್, ಆರ್.ಟಿ. ನಟರಾಜ್, ಮುಖಂಡರಾದ ಜಿ.ರಾಜು, ಬಿ.ಮೂರ್ತಿ, ಮಹಮದ್ ಸನಾವುಲ್ಲಾ, ಶಂಕರ್‌ರಾವ್, ಸಿ.ಜಯಪ್ಪ, ಪುಟ್ಟರಾಜ್, ಕರಿಯಪ್ಪ, ಬದರಿನಾರಾಯಣ, ಎಸ್.ಮಂಜುನಾಥ್, ತ್ಯಾಗರಾಜ್, ಧರ್ಮರಾಜ್, ಸುಬ್ಬಣ್ಣ ಇನ್ನಿತರರು ಪಾಲ್ಗೊಂಡಿದ್ದರು.- - - -ಡಿ11ಬಿಡಿವಿಟಿ2:
ಹಿಂದುಳಿದ ಜನಜಾಗೃತಿ ವೇದಿಕೆ ವತಿಯಿಂದ ಭದ್ರಾವತಿಯಲ್ಲಿ ಸೋಮವಾರ ತಾಲೂಕು ಕಚೇರಿ ಮುಂಭಾಗ ನಡೆಸಿದ ಧರಣಿಯಲ್ಲಿ ವೇದಿಕೆ ಅಧ್ಯಕ್ಷ ತೀ.ನ. ಶ್ರೀನಿವಾಸ್ ಮಾತನಾಡಿದರು.